ಶೀತ, ಕೆಮ್ಮು, ಚರ್ಮ ರೋಗದಂತಹ 16 ಔಷಧಿಗಳನ್ನು ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಮಾರಾಟ ಮಾಡಲು ಆರೋಗ್ಯ ಸಚಿವಾಲಯ ಚಿಂತನೆ

ನವದೆಹಲಿ: ಕೆಮ್ಮು, ಶೀತ, ನೋವು ಮತ್ತು ಚರ್ಮ ರೋಗಕ್ಕೆ ಸಾಮಾನ್ಯವಾಗಿ ಬಳಸುವ ಔಷಧಿಗಳಾದ ಪ್ಯಾರೆಸಿಟಮಾಲ್, ನೇಸಲ್ ಡಿಕೊಂಜೆಸ್ಟೆಂಟ್‌ಗಳು ಮತ್ತು ಆಂಟಿಫಂಗಲ್‌ಗಳು ಶೀಘ್ರದಲ್ಲೇ ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಲಭ್ಯವಾಗಲಿದೆ ಎನ್ನಲಾಗಿದೆ. ಕೇಂದ್ರವು ಅವುಗಳನ್ನು ಓವರ್ ದ ಕೌಂಟರ್ (ಒಟಿಸಿ) ವರ್ಗದ ಅಡಿಯಲ್ಲಿ ಪಟ್ಟಿ ಮಾಡಲು ಯೋಜಿಸುತ್ತಿದೆ ಎಂದು ಬಿಸಿನೆಸ್ ಸ್ಟ್ಯಾಂಡರ್ಡ್ ವರದಿ ಮಾಡಿದೆ.

ಕೇಂದ್ರ ಆರೋಗ್ಯ ಸಚಿವಾಲಯವು 1945 ರ ಡ್ರಗ್ಸ್ ನಿಯಮಗಳಿಗೆ ತಿದ್ದುಪಡಿಗಳನ್ನು ಸೂಚಿಸಿದ್ದು, ಈಗ ವೈದ್ಯರ ಪ್ರಿಸ್ಕ್ರಿಪ್ಷನ್ ಅಗತ್ಯವಿರುವ ಇಂತಹ 16 ಔಷಧಿಗಳಿಗೆ ವಿನಾಯಿತಿಗಳನ್ನು ಒದಗಿಸಲು ಶೆಡ್ಯೂಲ್ ಕೆ ಅಡಿಯಲ್ಲಿ ಎಲ್ಲಾ ಔಷಧಿಗಳನ್ನು ತಂದು ಅವುಗಳನ್ನು ಮಾನ್ಯವಾದ ಪರವಾನಗಿ ಅಡಿಯಲ್ಲಿ ಚಿಲ್ಲರೆ ಮಾರಾಟಗಾರರಿಂದ ಪ್ರತ್ಯಕ್ಷವಾಗಿ ಮಾರಾಟ ಮಾಡಲು ನಿರ್ಧರಿಸಿದೆ.

ಆರೋಗ್ಯ ಸಚಿವಾಲಯವು ಈ ವಿಷಯದ ಬಗ್ಗೆ ಒಂದು ತಿಂಗಳೊಳಗೆ ಮಧ್ಯಸ್ಥಗಾರರಿಂದ ಸಲಹೆಗಳನ್ನು ಕೋರಿ ಗೆಜೆಟ್ ಅಧಿಸೂಚನೆಯನ್ನು ಹೊರಡಿಸಲಿದೆ.

ಆ 16 ಔಷಧಿಗಳು ಪೊವಿಡೋನ್ ಅಯೋಡಿನ್ , ಕ್ಲೋರೊಹೆಕ್ಸಿಡೈನ್, ಕ್ಲೋಟ್ರಿಮಜೋಲ್ ಆಂಟಿಫಂಗಲ್ ಕ್ರೀಮ್, ಡೆಕ್ಸ್ಟ್ರೋಮೆಥೋರ್ಫಾನ್ ಹೈಡ್ರೋಬ್ರೊಮೈಡ್ ಲೋಝೆಂಜಸ್, ಡೈಕ್ಲೋಫೆನಾಕ್, ಬೆನ್ಝಾಯ್ಲ್ ಪೆರಾಕ್ಸೈಡ್, ಡಿಫೆನ್ಹೈಡ್ರಾಮೈನ್ ಕ್ಯಾಪ್ಸುಲ್ಗಳು, ಆಂಟಿಹಿಸ್ಟಾಮೈನ್ ಮತ್ತು ಅಲರ್ಜಿಕ್ ಔಷಧಿ, ಪ್ಯಾರೆಸಿಟಮಾಲ್, ಕೆಲವು ಮೂಗಿನ ಡಿಕೊಂಗಸ್ಟೆಂಟ್‌ಗಳು ಮತ್ತು ಲ್ಯಾಕ್ಸೇಟಿವ್ ಇವುಗಳನ್ನು ಒಳಗೊಂಡಿದೆ.

ಪ್ರಸ್ತಾವನೆಯು ಅಂತಿಮಗೊಂಡಲ್ಲಿ ಈ ಔಷಧಿಗಳನ್ನು ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆಯೇ ಚಿಲ್ಲರೆ ಮಾರಾಟದ ಅಂಗಡಿಗಳಲ್ಲಿ ಓವರ್ ದಿ ಕೌಂಟರ್ ನಲ್ಲಿ ಮಾರಾಟ ಮಾಡಬಹುದು, ಆದರೆ ಚಿಕಿತ್ಸೆಯ ಗರಿಷ್ಠ ಅವಧಿಯು ಐದು ದಿನಗಳನ್ನು ಮೀರಬಾರದು ಮತ್ತು ರೋಗಲಕ್ಷಣಗಳು ಪರಿಹಾರವಾಗದಿದ್ದಲ್ಲಿ ರೋಗಿಯು ವೈದ್ಯರನ್ನು ಸಂಪರ್ಕಿಸಬೇಕು.