ಹೊಸದಿಲ್ಲಿ: ಬೆಲ್ಜಿಯಂ, ಫ್ರಾನ್ಸ್, ಜರ್ಮನಿ, ಇಟಲಿ, ನೆದರ್ಲ್ಯಾಂಡ್ಸ್, ಪೋರ್ಚುಗಲ್, ಸ್ಪೇನ್, ಸ್ವೀಡನ್, ಯುನೈಟೆಡ್ ಸ್ಟೇಟ್ಸ್, ಕೆನಡಾ, ಆಸ್ಟ್ರೇಲಿಯಾ ಮತ್ತು ಯುನೈಟೆಡ್ ಕಿಂಗ್ಡಮ್ ಸೇರಿದಂತೆ ಹಲವಾರು ದೇಶಗಳಲ್ಲಿ ಮಂಗನ ಸಿಡುಬು ಕಾಯಿಲೆಯ ಪ್ರಕರಣಗಳು ಹೆಚ್ಚು ವರದಿಯಾಗುತ್ತಿದೆ. ಕೋವಿಡ್-19 ರ ಸಂಕಟ ಇನ್ನೂ ಮುಗಿದಿಲ್ಲದಿರುವ ಈ ವೇಳೆಯಲ್ಲಿ ಜಗತ್ತು ಮತ್ತೊಂದು ಸಾಂಕ್ರಾಮಿಕಕ್ಕೆ ಬಲಿಯಾಗುತ್ತಿದೆಯೆ ಎನ್ನುವ ಅನುಮಾನ ಹಲವರನ್ನು ಕಾಡುತ್ತಿದೆ.
ಈ ಮಧ್ಯೆ ಈ ಪ್ರಕರಣಗಳನ್ನು ಸೂಕ್ಷ್ಮವಾಗಿ ಗಮನಿಸಿ, ಮಂಕಿಪಾಕ್ಸ್ ಪೀಡಿತ ದೇಶಗಳಿಗೆ ಪ್ರಯಾಣದ ಇತಿಹಾಸ ಹೊಂದಿರುವ ಯಾವುದೇ ಅಸ್ವಸ್ಥ ಪ್ರಯಾಣಿಕರನ್ನು ಪ್ರತ್ಯೇಕಿಸುವಂತೆ ಮತ್ತು ಮಾದರಿಗಳನ್ನು ಪುಣೆಯಲ್ಲಿರುವ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಯ ಬಿಎಸ್ಎಲ್ 4 ಸೌಲಭ್ಯಕ್ಕೆ ತನಿಖೆಗಾಗಿ ಕಳುಹಿಸುವಂತೆ ಅಧಿಕಾರಿಗಳಿಗೆ ಕೇಂದ್ರ ಆರೋಗ್ಯ ಇಲಾಖೆ ಸೂಚನೆ ನೀಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಏನಿದು ಮಂಕಿ ಪಾಕ್ಸ್/ ಮಂಗನ ಸಿಡುಬು?
ಆಫ್ರಿಕಾ ದೇಶದಲ್ಲಿ ಪತ್ತೆಯಾದ ಈ ರೋಗವು ಸಿಡುಬಿನಂತೆಯೆ ವೈರಸ್ ನಿಂದ ಹರಡುವ ಸಾಂಕ್ರಾಮಿಕ ಕಾಯಿಲೆ. ಆಫ್ರಿಕಾದಲ್ಲಿ1958 ರಲ್ಲಿ ಪ್ರಯೋಗಾಲಯದ ಮಂಗಗಳಲ್ಲಿ ಇದನ್ನು ಮೊದಲು ಪತ್ತೆಹಚ್ಚಿದ ಕಾರಣ ಇದನ್ನು ಮಂಕಿಪಾಕ್ಸ್ ಎಂದು ಕರೆಯಲಾಯಿತು. ಇದುವರೆಗೂ ಹೆಚ್ಚಾಗಿ ಆಫ್ರಿಕಾ ದೇಶದೊಳಗೆ ಮಾತ್ರ ಕಂಡುಬರುತ್ತಿದ್ದ ಈ ಸಾಂಕ್ರಾಮಿಕ ಕಾಯಿಲೆ ಈಗ ಯೂರೋಪ್ ಮತ್ತು ಅಮೇರಿಕಾದ ದೇಶಗಳಿಗೂ ಹರಡಿದ್ದು, ರೋಗಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವುದು ಸರಕಾರಗಳನ್ನು ಚಿಂತೆಗೆ ದೂಡಿದೆ.
ನೈಜೀರಿಯಾದಿಂದ ಇಂಗ್ಲೆಂಡ್ಗೆ ಹಿಂದಿರುಗಿದ ವ್ಯಕ್ತಿಯಲ್ಲಿ ಮೇ 7 ರಂದು ಮೊದಲ ಯುರೋಪಿಯನ್ ಪ್ರಕರಣವನ್ನು ದೃಢಪಡಿಸಲಾಗಿತ್ತು. ಅಂದಿನಿಂದ ಇಂದಿನವರೆಗೆ ಯೂರೋಪ್ ನಲ್ಲಿ 100 ಕ್ಕೂ ಹೆಚ್ಚು ಪ್ರಕರಣಗಳನ್ನು ಶಂಕಿಸಲಾಗಿದೆ ಅಥವಾ ದೃಢೀಕರಿಸಲ್ಪಟ್ಟಿದೆ.
ಈ ವೈರಸ್ ಸಾರ್ಸ್-ಕೋವಿಡ್-2 ನಂತೆ ಸುಲಭವಾಗಿ ಹರಡುವುದಿಲ್ಲವಾದ್ದರಿಂದ, ಮಂಕಿಪಾಕ್ಸ್ ಏಕಾಏಕಿ ಕೋವಿಡ್ -19 ನಂತೆ ಸಾಂಕ್ರಾಮಿಕವಾಗಿ ವಿಕಸನಗೊಳ್ಳುವುದಿಲ್ಲ ಎಂದು ವಿಜ್ಞಾನಿಗಳು ಭಾವಿಸುತ್ತಾರೆ.
ಜರ್ಮನಿಯ ರಾಬರ್ಟ್ ಕೋಚ್ ಇನ್ಸ್ಟಿಟ್ಯೂಟ್ನ ಸಂಶೋಧಕ ಫ್ಯಾಬಿಯನ್ ಲೀಂಡರ್ಟ್ಜ್, ಏಕಾಏಕಿ ಹರಡುವ ಸಾಂಕ್ರಾಮಿಕ ರೋಗ ಎಂದು ವಿವರಿಸಿದ್ದಾರೆ. “ಆದಾಗ್ಯೂ, ಈ ಸಾಂಕ್ರಾಮಿಕವು ದೀರ್ಘಕಾಲ ಉಳಿಯುವ ಸಾಧ್ಯತೆ ಕಡಿಮೆ. ಸಂಪರ್ಕ ಪತ್ತೆಹಚ್ಚುವಿಕೆಯ ಮೂಲಕ ಪ್ರಕರಣಗಳನ್ನು ಚೆನ್ನಾಗಿ ಪ್ರತ್ಯೇಕಿಸಬಹುದು ಮತ್ತು ಅಗತ್ಯವಿದ್ದಲ್ಲಿ ಬಳಸಬಹುದಾದ ಔಷಧಗಳು ಮತ್ತು ಪರಿಣಾಮಕಾರಿ ಲಸಿಕೆಗಳು ಸಹ ಇವೆ” ಎಂದು ಅವರು ರಾಯ್ಟರ್ಸ್ ಗೆ ತಿಳಿಸಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಮಂಕಿಪಾಕ್ಸ್ಗೆ ಯಾವುದೇ ನಿರ್ದಿಷ್ಟ ಲಸಿಕೆ ಇಲ್ಲ, ಆದರೆ ಸಿಡುಬು ನಿರ್ಮೂಲನೆಗೆ ಬಳಸುವ ಲಸಿಕೆಗಳು ಮಂಕಿಪಾಕ್ಸ್ ವಿರುದ್ಧ 85% ವರೆಗೆ ಪರಿಣಾಮಕಾರಿ ಎನ್ನುವ ಡೇಟಾ ಲಭ್ಯವಿದೆ ಎನ್ನಲಾಗಿದೆ.












