ಉಡುಪಿ: ನಗರದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಗಮಿಸಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಬಗ್ಗೆ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಭಾರತವನ್ನು ಎಲ್ಲಿ ವಿಭಜನೆ ಮಾಡಿದೆಯೋ ಅಲ್ಲಿ ಹೋಗಿ ಭಾರತ್ ಜೋಡೋ ಮಾಡಬೇಕು. ಕಾಂಗ್ರೆಸ್ ನ ನೇತೃತ್ವದ ಸರ್ಕಾರ ಇರುವ ಸಂದರ್ಭದಲ್ಲಿ ಪಾಕ್ ಆಕ್ರಮಿತ ಕಾಶ್ಮೀರವಾಯಿತು. ಇವತ್ತಿನ ಪಾಕ್ ಆಕ್ರಮಿತ ಕಾಶ್ಮೀರ ಯಾರ ಕೊಡುಗೆ? ಕಾಂಗ್ರೆಸ್ಸಿನ ಕೊಡುಗೆ. ತೀನ್ ಭೀಗಾ ಎನ್ನುವ ಆಯಕಟ್ಟಿನ ಪ್ರದೇಶವನ್ನು 99 ವರ್ಷಕ್ಕೆ ಗುತ್ತಿಗೆ ಕೊಟ್ಟಿದ್ದು ಕಾಂಗ್ರೆಸ್, ಇದು ಯಾರ ಪ್ರದೇಶ? ನೆಹರೂರವರು ಸಂಸತ್ತಿನಲ್ಲಿ ಹಿಮಾಲಯದ ನೆಲದಲ್ಲಿ ಒಂದು ಹುಲ್ಲು ಕಡ್ಡಿಯೂ ಬೆಳೆಯುವುದಿಲ್ಲ ಎಂದು ಹೇಳಿದರು. ಅದಕ್ಕಾಗಿ ಅದನ್ನು ಬಿಟ್ಟುಕೊಟ್ಟರು. ಭಾರತದ ಬಹುಭಾಗವನ್ನು ಬೇರೆ ದೇಶಗಳಿಗೆ ಬಿಟ್ಟುಕೊಟ್ಟ ಆಗಿನ ಆಡಳಿತದ ಪಕ್ಷ ಕಾಂಗ್ರೆಸ್, ಪಾಕ್ ಅಕ್ರಮಿತ ಕಾಶ್ಮೀರದಲ್ಲಿ ಭಾರತ ಜೋಡೋ ಮಾಡಲಿ. ರಾಹುಲ್ ಗಾಂಧಿ, ಭಾರತದಲ್ಲಿ ಭಾರತ್ ಜೋಡಿಸುವ ಅಗತ್ಯವಿಲ್ಲ. ತೀನ್ ಭೀಗಾ, ಪಾಕಿಸ್ತಾನ, ಚೀನಾ ಮತ್ತು ಬಾಂಗ್ಲಾ ಗಡಿಯಲ್ಲಿ ಯಾತ್ರೆ ಮಾಡಲಿ. ಪಾಕಿಸ್ತಾನ ಜಿಂದಾಬಾದ್ ಅಂದವರ ಜೊತೆ ಯಾತ್ರೆ ಮಾಡುತ್ತಾ ಇರುವ ಕಾಂಗ್ರೆಸ್, ಭಾರತ್ ಜೋಡೋ ಮಾಡುತ್ತಿದೆಯೇ ಅಥವಾ ವಿಭಜನೆ ಮಾಡಿ ಭಾರತ್ ತೋಡೋ ಮಾಡುತ್ತಿದೆಯಾ ಎಂದು ಕಾಂಗ್ರೆಸ್ ನಾಯಕರು ಉತ್ತರ ನೀಡಬೇಕು ಎಂದರು.
ಪಿಎಫ್ಐ ಸಂಘಟನೆಯು ದೇಶದ್ರೋಹಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವುದಕ್ಕೆ ಸಾಕ್ಷ್ಯಗಳು ದೊರಕಿವೆ. ಪಿಎಫ್ಐ ಭಯೋತ್ಪಾದಕ ಚಟುವಟಿಕೆಗಳಿಗೆ ತರಬೇತಿ ನೀಡುವ ಸಂಸ್ಥೆಯಾಗಿದ್ದು, ಹಿಂದೂ ಯುವಕರ ಕೊಲೆಯಲ್ಲಿ ಭಾಗಿಯಾಗಿದೆ ಎನ್ನುವ ಪುರಾವೆ ಇದೆ. ಪಿಎಫ್ಐ ಅನ್ನು ನಿಷೇಧಿಸುವ ನಿರ್ಧಾರಕ್ಕೂ ಮುನ್ನ ಎನ್ಐಎ ಯು ಸತತ ಮೂರು ವರ್ಷಗಳವರೆಗೆ ಸಾಕ್ಷ್ಯ ಸಂಗ್ರಹಿಸಿದೆ. ಎಸ್ಡಿಪಿಐ ಒಂದು ರಾಜಕೀಯ ಪಕ್ಷವಾಗಿದ್ದು, ಎಸ್ಡಿಪಿಐನಲ್ಲಿ ಕೆಲಸ ಮಾಡುವ ಪಿಎಫ್ಐ ಕಾರ್ಯಕರ್ತರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಚುನಾವಣಾ ಆಯೋಗ ಸೂಚನೆ ನೀಡಿದೆ. ಜಿಲ್ಲಾಧಿಕಾರಿಗಳು ಈ ಕೆಲಸ ಮಾಡುತ್ತಿದ್ದಾರೆ ಎಂದರು.
ಗಂಗೊಳ್ಳಿಯಲ್ಲಿ ಮೀನುಗಾರಿಕಾ ಜೆಟ್ಟಿ ಕುಸಿತದ ಬಗ್ಗೆ ಪ್ರತಿಕ್ರಿಯಿಸಿದ ಸಚಿವೆ, ಮೀನುಗಾರಿಕಾ ಜಟ್ಟಿ ಕಳಪೆ ಕಾಮಗಾರಿಯಾಗಿದ್ದರೆ ತಕ್ಷಣ ಕ್ರಮ ವಹಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಜಟ್ಟಿ ನಿರ್ಮಾಣ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಹಾಕಿ ಮುಂದೆ ಯಾವುದೇ ಕಾಮಗಾರಿ ಮಾಡಲು ಈ ಸಂಸ್ಥೆಗೆ ಅವಕಾಶ ನೀಡಬಾರದು. ಈ ಕಾಮಗಾರಿಯ ಬಗ್ಗೆ ತನಿಖೆ ನಡೆಸಿ ಠೇವಣಿ ಇಟ್ಟಿದ್ದಲ್ಲಿ ಅದನ್ನು ಮುಟ್ಟುಗೋಲು ಹಾಕಿ ಸ್ಥಗಿತವಾದ ಕಾಮಗಾರಿಯನ್ನು ತಕ್ಷಣ ಆರಂಭಿಸಬೇಕು ಎಂದು ಸೂಚನೆ ನೀಡಿದರು.
ಶೋಭಾ ಕರಂದ್ಲಾಜೆಯಿಂದ ಶೋಭಾ ಗೌಡ ಎಂದು ಹೆಸರು ಬದಲಿಸಿರುವ ಬಗ್ಗೆ ಪ್ರಶ್ನಿಸಿದಾಗ, ಇದು ನನ್ನ ವಿರುದ್ಧದ ಅಪಪ್ರಚಾರ. ಯಾರೋ ನನ್ನ ವಿರುದ್ಧ ಸಂಚು ರೂಪಿಸುತ್ತಿದ್ದಾರೆ. ರಾಜಕಾರಣಿಗಳು ಜೋಕರ್ಗಳು ಎಂದು ಕೆಲವರು ಭಾವಿಸುತ್ತಾರೆ. ಮಾಧ್ಯಮಗಳು, ಸಾಮಾಜಿಕ ಮಾಧ್ಯಮಗಳು ಮತ್ತು ರಾಜಕೀಯ ವಲಯಗಳು ಮತ್ತು ವಿರೋಧ ಪಕ್ಷಗಳು ಈ ಪ್ರಚಾರವನ್ನು ನಿಲ್ಲಿಸುವಂತೆ ನಾನು ವಿನಂತಿಸುತ್ತೇನೆ. ಈ ಚರ್ಚೆ ಏಕೆ ಪ್ರಾರಂಭವಾಯಿತು ಎಂದು ನನಗೆ ತಿಳಿದಿಲ್ಲ, ನನ್ನ ಹೆಸರನ್ನು ಬದಲಾಯಿಸಲು ನನಗೇನು ತಲೆ ಕೆಟ್ಟಿದೆಯಾ? ಎಂದರು.