ಸೆಪ್ಟೆಂಬರ್ 17 ಅನ್ನು ‘ಹೈದರಾಬಾದ್ ವಿಮೋಚನಾ ದಿನ’ವನ್ನಾಗಿ ಆಚರಿಸಲು ಕೇಂದ್ರದ ನಿರ್ಧಾರ: ಆಪರೇಷನ್ ಪೊಲೋ ಹುತಾತ್ಮರಿಗೆ ನಮನ

ನವದೆಹಲಿ: ಪ್ರತಿ ವರ್ಷ ಸೆಪ್ಟೆಂಬರ್ 17 ಅನ್ನು ‘ಹೈದರಾಬಾದ್ ವಿಮೋಚನಾ ದಿನ’ ಎಂದು ಆಚರಿಸಲಾಗುವುದು ಎಂದು ಕೇಂದ್ರ ಗೃಹ ಸಚಿವಾಲಯ ಮಂಗಳವಾರ ಪ್ರಕಟಿಸಿದೆ. ಭಾರತವು ಆಗಸ್ಟ್ 15, 1947 ರಂದು ಸ್ವಾತಂತ್ರ್ಯ ಪಡೆದ ನಂತರವೂ ಹೈದರಾಬಾದ್ 13 ತಿಂಗಳ ಕಾಲ ನಿಜಾಮರ ಆಳ್ವಿಕೆಯಲ್ಲಿತ್ತು ಮತ್ತು ನಂತರದವರೆಗೂ ಸ್ವಾತಂತ್ರ್ಯವನ್ನು ಪಡೆಯಲಿಲ್ಲ ಎಂದು ಸಚಿವಾಲಯ ಬಿಡುಗಡೆ ಮಾಡಿದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಸೆಪ್ಟೆಂಬರ್ 17, 1948 ರಂದು ‘ಆಪರೇಷನ್ ಪೋಲೋ’ ಎಂದು ಕರೆಯಲ್ಪಡುವ ಪೊಲೀಸ್ ಕಾರ್ಯಾಚರಣೆ ಬಳಿಕ ಈ ಪ್ರದೇಶವನ್ನು ನಿಜಾಮರ ಆಳ್ವಿಕೆಯಿಂದ ಮುಕ್ತಗೊಳಿಸಲಾಯಿತು. ಹೈದರಾಬಾದ್ ವಿಮೋಚನಾ ದಿನವನ್ನು ಸೆಪ್ಟೆಂಬರ್ 17 ರಂದು ಆಚರಿಸಬೇಕೆಂದು ಈ ಭಾಗದ ಜನರು ಒತ್ತಾಯಿಸಿದ್ದಾರೆ.

ಈಗ ಹೈದರಾಬಾದ್ ಅನ್ನು ವಿಮೋಚನೆಗೊಳಿಸಿದ ಹುತಾತ್ಮರನ್ನು ಸ್ಮರಿಸಲು ಮತ್ತು ಯುವಕರ ಮನಸ್ಸಿನಲ್ಲಿ ದೇಶಭಕ್ತಿಯ ಜ್ವಾಲೆಯನ್ನು ತುಂಬಲು, ಭಾರತ ಸರ್ಕಾರವು ಪ್ರತಿ ವರ್ಷ ಸೆಪ್ಟೆಂಬರ್ 17 ನೇ ದಿನವನ್ನು ‘ಹೈದರಾಬಾದ್ ವಿಮೋಚನಾ ದಿನ’ ಎಂದು ಆಚರಿಸಲು ನಿರ್ಧರಿಸಿದೆ.

ಭಾರತಕ್ಕೆ ಸ್ವಾತಂತ್ರ್ಯ ದೊರೆತ ಸಮಯದಲ್ಲಿ ರಜಾಕಾರರು ಹೈದರಾಬಾದ್ ರಾಜ್ಯವನ್ನು ಭಾರತದೊಂದಿಗೆ ವಿಲೀನಗೊಳಿಸುವುದನ್ನು ವಿರೋಧಿಸಿ ಪಾಕಿಸ್ತಾನಕ್ಕೆ ಸೇರಲು ಅಥವಾ ಮುಸ್ಲಿಂ ಪ್ರಭುತ್ವವಾಗಲು ಕರೆ ನೀಡಿದ್ದರು. ಹೈದರಾಬಾದ್‌ನಲ್ಲಿ ಹಿಂದಿನ ನಿಜಾಮ ಆಳ್ವಿಕೆಯನ್ನು ಸಮರ್ಥಿಸಿಕೊಂಡ ಖಾಸಗಿ ಸೇನಾಪಡೆಯಾದ ರಜಾಕಾರರ ದೌರ್ಜನ್ಯದ ವಿರುದ್ಧ ಈ ಪ್ರದೇಶದ ಜನರು ಈ ಪ್ರದೇಶವನ್ನು ಭಾರತದ ಒಕ್ಕೂಟಕ್ಕೆ ವಿಲೀನಗೊಳಿಸಲು ಧೈರ್ಯದಿಂದ ಹೋರಾಡಿದ್ದರು.

ಸೆಪ್ಟೆಂಬರ್ 17, 1948 ರಂದು, ಆಗಿನ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಮಿಲಿಟರಿ ಕಾರ್ಯಾಚರಣೆಯ ನಂತರ ನಿಜಾಮರ ಆಳ್ವಿಕೆಯಲ್ಲಿದ್ದ ಅಂದಿನ ಹೈದರಾಬಾದ್ ರಾಜ್ಯವನ್ನು ಭಾರತದ ಒಕ್ಕೂಟಕ್ಕೆ ಸೇರಿಸಿದ್ದರು.