ನವದೆಹಲಿ: ‘ಭಾರತ ವಿರೋಧಿ ಚಟುವಟಿಕೆಗಳಿಗೆ ಕೆನಡಾ ನಿರಂತರವಾಗಿ ಅವಕಾಶ ಮಾಡಿಕೊಡುತ್ತಿದೆ’ ಎಂದು ಆರೋಪಿಸಿದೆ. ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ವಿಚಾರವಾಗಿ ಭಾರತದ ಜೊತೆ ರಾಜತಾಂತ್ರಿಕ ಸಂಬಂಧಗಳಿಗೆ ಧಕ್ಕೆ ತಂದುಕೊಂಡಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ವಿರುದ್ಧ ಕೇಂದ್ರ ಸರ್ಕಾರ ಮತ್ತೊಮ್ಮೆ ವಾಗ್ದಾಳಿ ನಡೆಸಿದೆ. ಕೆನಡಾ ವಿರುದ್ಧ ಭಾರತ ಸರ್ಕಾರ ಗಂಭೀರ ಆರೋಪ ಮಾಡಿದೆ. ಆ ದೇಶದಲ್ಲಿ ಭಾರತ ವಿರುದ್ಧದ ಉಗ್ರ ಕೃತ್ಯಗಳಿಗೆ ಸರ್ಕಾರವೇ ಅವಕಾಶ ನೀಡುತ್ತಿದೆ ಎಂದು ಟೀಕಿಸಿದೆ.
ಇಡೀ ವಿಶ್ವವೇ ಭಯೋತ್ಪಾದನೆಯ ವಿರುದ್ಧ ಹೋರಾಡಬೇಕಿದೆ. ಆದರೆ, ಕೆನಡಾ ಭಾರತ ವಿರೋಧಿ ಚಟುವಟಿಗಳಿಗೆ ನೆರವು ನೀಡುತ್ತಿದೆ. ಇದೇ ಸಮಸ್ಯೆಯ ಮೂಲವಾಗಿದೆ. ಇದರ ಪರಿಣಾಮವನ್ನು ಆ ದೇಶದಲ್ಲಿ ನಮ್ಮ ರಾಜತಾಂತ್ರಿಕ ಪ್ರತಿನಿಧಿಗಳು ಅನುಭವಿಸಿದ್ದಾರೆ. ಹೀಗಾಗಿ ಅಲ್ಲಿನ ಸರ್ಕಾರ ವಿಯೆನ್ನಾ ಒಪ್ಪಂದದಂತೆ ನಡೆದುಕೊಳ್ಳಬೇಕು ಎಂದು ಅವರು ಹೇಳಿದರು.ಈ ಬಗ್ಗೆ ಮಾಧ್ಯಮಗಳಿಗೆ ಗುರುವಾರ ಹೇಳಿಕೆ ನೀಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ, ಭಾರತದ ಆಂತರಿಕ ವಿಚಾರಗಳಲ್ಲಿ ಕೆನಡಾ ಮೂಗು ತೂರಿಸುತ್ತಿದೆ. ಇದು ಉಭಯ ದೇಶಗಳಿಗೆ ಒಳಿತಲ್ಲ. ರಾಜತಾಂತ್ರಿಕ ಸಂಬಂಧಗಳ ಕುರಿತಾದ ವಿಯೆನ್ನಾ ಒಪ್ಪಂದವನ್ನು ಕೆನಡಾ ಪಾಲಿಸುತ್ತದೆ ಎಂಬುದನ್ನು ಭಾರತ ನಿರೀಕ್ಷಿಸುತ್ತದೆ ಎಂದು ಹೇಳಿದರು.
ನಿಜ್ಜರ್ ಹತ್ಯೆ ವಿಚಾರದಲ್ಲಿ ಭಾರತದ ಜೊತೆ ಯಾವುದೇ ತಿಕ್ಕಾಟವಿಲ್ಲ. ಆದರೆ, ಸತ್ಯಾಸತ್ಯತೆ ತಿಳಿದುಕೊಳ್ಳಲು ಭಾರತ ಸರ್ಕಾರವು ನಮ್ಮೊಂದಿಗೆ ಕೆಲಸ ಮಾಡಬೇಕಾಗಿದೆ. ಇದು ಯಾರೊಬ್ಬರೂ ಲಘುವಾಗಿ ತೆಗೆದುಕೊಳ್ಳುವ ವಿಷಯವಲ್ಲ ಎಂದು ಈಚೆಗೆ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು.ಅಮೆರಿಕದಿಂದ ಒತ್ತಡ ಹಾಕುವ ತಂತ್ರ: ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ತನಿಖೆಯಲ್ಲಿ ಕೆನಡಾದೊಂದಿಗೆ ಸಹಕರಿಸುವಂತೆ ಭಾರತ ಸರ್ಕಾರಕ್ಕೆ ಸೂಚಿಸಬೇಕು ಎಂದು ಪ್ರಧಾನಿ ಜಸ್ಟಿನ್ ಟ್ರುಡೊ ಅಮೆರಿಕದ ಮೊರೆ ಹೋಗಿದ್ದಾರೆ. ಹೀಗಾಗಿ ಅಲ್ಲಿನ ಮಾಧ್ಯಮಗಳು ಈ ಬಗ್ಗೆ ವರದಿ ಭಿತ್ತರಿಸುತ್ತಿವೆ. ಅಮೆರಿಕದಿಂದ ಹೊರ ಬರುತ್ತಿರುವ ಸುದ್ದಿಗಳು ಭಾರತವು ಸಮಸ್ಯೆ ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ ಎಂದು ಈಚೆಗೆ ಟ್ರುಡೊ ಉಲ್ಲೇಖಿಸಿದ್ದರು.
ಅಮೆರಿಕದಲ್ಲಿ ಖಲಿಸ್ತಾನ ಉಗ್ರ ಹತ್ಯೆ ಯತ್ನ: ಈಚೆಗೆ ಅಮೆರಿಕದಲ್ಲಿ ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನು ಹತ್ಯೆಗೆ ಅಪರಿಚಿತ ವ್ಯಕ್ತಿಗಳು ಯತ್ನ ನಡೆಸಿದ್ದರು. ಮ್ಯಾನ್ಹಟನ್ನ ಫೆಡರಲ್ ನ್ಯಾಯಾಲಯದಲ್ಲಿ ಸಲ್ಲಿಸಲಾದ ದೋಷಾರೋಪಣೆಯಲ್ಲಿ ಭಾರತೀಯ ಸರ್ಕಾರಿ ಉದ್ಯೋಗಿಯನ್ನು ಆರೋಪಿಯನ್ನಾಗಿ ಹೆಸರಿಸಲಾಗಿದೆ. ಈತನಿಂದ ಪನ್ನು ಹತ್ಯೆಗೆ ಯತ್ನ ನಡೆದಿತ್ತು. ಪೊಲೀಸ್ ಅಧಿಕಾರಿಗಳು ವಿಫಲಗೊಳಿಸಿದ್ದಾರೆ ಎಂದು ವರದಿಯಾಗಿತ್ತು.ವಿಶೇಷವೆಂದರೆ, ನ್ಯೂಯಾರ್ಕ್ನಲ್ಲಿ ಅಮೆರಿಕ ಮೂಲದ ಸಿಖ್ ಪ್ರತ್ಯೇಕತಾವಾದಿ ಚಳವಳಿಯ ನಾಯಕನನ್ನು ಹತ್ಯೆ ಮಾಡಲು ವಿಫಲ ಸಂಚಿನಲ್ಲಿ ಭಾಗಿಯಾಗಿದ್ದಕ್ಕಾಗಿ ಅಲ್ಲಿನ ನ್ಯಾಯಾಂಗ ಇಲಾಖೆಯು ಭಾರತೀಯ ಪ್ರಜೆಯ ವಿರುದ್ಧ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದೆ. ಇದರ ಬೆನ್ನಲ್ಲೇ ಟ್ರುಡೊ ಇಂತಹ ಹೇಳಿಕೆ ನೀಡಿದ್ದಾರೆ.