ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಸಾಂಪ್ರದಾಯಿಕವಾಗಿ ನಡೆಸಿಕೊಂಡು ಬರುತ್ತಿರುವ ನಾಡದೋಣಿ ಮೀನುಗಾರಿಕೆಗೆ ಹಂಚಿಕೆಯಾಗಿದ್ದ ಸೀಮೆಎಣ್ಣೆ ಸಕಾಲದಲ್ಲಿ ಸಿಗುತ್ತಿಲ್ಲ, ಈ ಕುರಿತು ಕೇಂದ್ರ ಸರಕಾರದ ಗಮನವನ್ನು ಸೆಳೆದು ಹಂಚಿಕೆಯಾಗಿರುವ ಸೀಮೆ ಎಣ್ಣೆಯನ್ನು ತ್ವರಿತವಾಗಿ ಬಿಡುಗಡೆಗೊಳಿಸಬೇಕು, ಈ ಮೂಲಕ ಕರಾವಳಿಯ ಮೀನುಗಾರರ ಹಿತವನ್ನು ಕಾಯಬೇಕು ಎಂದು ಉಡುಪಿಯ ಮೀನುಗಾರರ ಒಕ್ಕೂಟ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವ, ಶೋಭಾ ಕರಂದ್ಲಾಜೆಯವರಿಗೆ ಮನವಿಯನ್ನು ಸಲ್ಲಿಸಿತ್ತು.
ರಾಜ್ಯದಲ್ಲಿ 10,100 ಕ್ಕೂ ಅಧಿಕ ನಾಡದೋಣಿಗಲಿದ್ದು, 60,000 ಕ್ಕಿಂತಲೂ ಹೆಚ್ಚಿನ ಮೀನುಗಾರರ ಜೀವನಾಧಾರವಾಗಿದೆ. ಕೇಂದ್ರ ಸರಕಾರ ನೀಡುವ ಸೀಮೆಎಣ್ಣೆಯ ಮೇಲೆ ಈ ನಾಡ ದೋಣಿ ಮೀನುಗಾರಿಕೆಯು ಅವಲಂಬಿತವಾಗಿದೆ.
ಕರಾವಳಿಯ ಮೀನುಗಾರರ ಈ ಮನವಿಯನ್ನು ಕೇಂದ್ರ ಸಚಿವರು, ಉಡುಪಿ – ಚಿಕ್ಕಮಗಳೂರು ಸಂಸದರಾದ ಶೋಭಾ ಕರಂದ್ಲಾಜೆಯವರು ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವರ ಗಮನಕ್ಕೆ ತಂದು, ಅತೀ ಶೀಘ್ರದಲ್ಲಿ ಹೆಚ್ಚುವರಿ ಸೀಮೆ ಎಣ್ಣೆಯನ್ನು ಕರ್ನಾಟಕ ರಾಜ್ಯಕ್ಕೆ ಬಿಡುಗಡೆಗೊಳಿಸಿ, ಕರಾವಳಿಯ ಮೀನುಗಾರರ ಹಿತವನ್ನು ಕಾಯುವಂತೆ ಕೇಳಿಕೊಂಡಿದ್ದರು.
ಕೇಂದ್ರ ಕೃಷಿ ರಾಜ್ಯ ಸಚಿವರ ಮನವಿಯನ್ನು ಪುರಸ್ಕರಿಸಿದ ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಇಂದು (ದಿನಾಂಕ 24.01.22) ಕರ್ನಾಟಕ ಸರ್ಕಾರಕ್ಕೆ 2021-22ನೇ ಪಾಲಿನ 3540KL (35.40 ಲಕ್ಷ ಲೀಟರ್) ಹೆಚ್ಚುವರಿ ಸೀಮೆ ಎಣ್ಣೆಯನ್ನು ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ.
ಕೇಂದ್ರ ಸರಕಾರ 2021-22ರ ಆರ್ಥಿಕ ವರ್ಷದಲ್ಲಿ 7080KL (70.8 ಲಕ್ಷ ಲೀಟರ್) ಸೀಮೆಎಣ್ಣೆಯನ್ನು ಕರ್ನಾಟಕ ರಾಜ್ಯಕ್ಕೆ ಈಗಾಗಲೇ ಬಿಡುಗಡೆ ಮಾಡಿತ್ತು, ಇದಕ್ಕೆ ಹೆಚ್ಚುವರಿಯಾಗಿ 3540KL ಸೀಮೆಎಣ್ಣೆಯನ್ನು ಇಂದು ಬಿಡುಗಡೆ ಮಾಡುವ ಮೂಲಕ ಸಾಂಪ್ರದಾಯಿಕ ನಾಡ ದೋಣಿ ಮೀನುಗಾರರ ಬೇಡಿಕೆಯನ್ನು ಈಡೇರಿಸಿದೆ.
ಈ ಹೆಚ್ಚುವರಿಯಾಗಿ ದೊರೆತಿರುವ ಸೀಮೆಎಣ್ಣೆಯನ್ನು ಮೀನುಗಾರಿಕಾ ಉದ್ದೇಶಕ್ಕೆ ರಾಜ್ಯದ ವಿತರಣಾ ವ್ಯವಸ್ಥೆಯು ವಿತರಿಸಲಿರುವುದಾಗಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಕರಾವಳಿಯ ಮೀನುಗಾರರ ಬೇಡಿಕೆಯನ್ನು ತ್ವರಿತವಾಗಿ ಈಡೇರಿಸಿ, ನಾಡ ದೋಣಿ ಮೀನುಗಾರಿಕೆಗೆ ಅಗತ್ಯವಿರುವ ಸೀಮೆಎಣ್ಣೆಯನ್ನು ಬಿಡುಗಡೆಗೊಳಿಸಿದ ಪ್ರಧಾನಿ ಶ್ರೀ ನರೇಂದ್ರ ಮೋದಿಯವರಿಗೆ ಹಾಗೂ ಪೆಟ್ರೋಲಿಯಂ ಸಚಿವರಿಗೆ, ಉಡುಪಿ-ಚಿಕ್ಕಮಗಳೂರು ಸಂಸದೆ, ಕೇಂದ್ರ ಕೃಷಿ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಧನ್ಯವಾದಗಳನ್ನು ತಿಳಿಸಿರುತ್ತಾರೆ.