ಮಂಗಳೂರು: New Mangalore Port Authority ಅಡಿಯಲ್ಲಿ ಕೇಂದ್ರ ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶ ಒದಗಿ ಬಂದಿದೆ. ಕೇಂದ್ರ ಸರ್ಕಾರದ ಬಂದರು, ಹಡಗು ಮತ್ತು ಜಲಮಾರ್ಗ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ ಎನ್‌ಎಂಪಿಎ ಇದೀಗ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಒಟ್ಟು 12 ಮ್ಯಾನೇಜರ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದೆ. ಮಂಗಳೂರಿನಲ್ಲಿ ಕೇಂದ್ರ ಸರ್ಕಾರದ ಅಡಿಯಲ್ಲಿ ವೃತ್ತಿಜೀವನ ಆರಂಭಿಸಲು ಬಯಸುವ ಯುವಕರಿಗೆ ಇದು ಉತ್ತಮ ಅವಕಾಶವಾಗಿದೆ.
ಈ ನೇಮಕಾತಿ ಪ್ರಕ್ರಿಯೆಯಡಿ ಚೀಫ್ ಮ್ಯಾನೇಜರ್, ಸೀನಿಯರ್ ಮ್ಯಾನೇಜರ್ ಹಾಗೂ ಮ್ಯಾನೇಜರ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಮಾಹಿತಿ ತಂತ್ರಜ್ಞಾನ (ICT) ವಿಭಾಗದಲ್ಲಿ 4 ಹುದ್ದೆಗಳು, ಕಾರ್ಪೊರೇಟ್ ಲೀಗಲ್ ವಿಭಾಗದಲ್ಲಿ 3 ಹುದ್ದೆಗಳು, ಪರಿಸರ ಮತ್ತು ಸುರಕ್ಷತೆ ವಿಭಾಗದಲ್ಲಿ 2 ಹುದ್ದೆಗಳು ಹಾಗೂ ಬಿಸಿನೆಸ್ ಡೆವಲಪ್‌ಮೆಂಟ್ ಮತ್ತು ಟ್ರೇಡ್ ಪ್ರೊಮೋಷನ್ ವಿಭಾಗದಲ್ಲಿ 3 ಹುದ್ದೆಗಳು ಸೇರಿದಂತೆ ಒಟ್ಟು 12 ಹುದ್ದೆಗಳು ಲಭ್ಯವಿವೆ.
ನೇಮಕಾತಿ ನಿಯಮಗಳ ಪ್ರಕಾರ, ವಿವಿಧ ಹುದ್ದೆಗಳಿಗೆ ಪ್ರತ್ಯೇಕ ಶೈಕ್ಷಣಿಕ ಅರ್ಹತೆಗಳನ್ನು ನಿಗದಿಪಡಿಸಲಾಗಿದೆ. ICT ವಿಭಾಗಕ್ಕೆ ಬಿ.ಇ ಅಥವಾ ಬಿ.ಟೆಕ್ ಪದವಿ, ಲೀಗಲ್ ವಿಭಾಗಕ್ಕೆ ಕಾನೂನು ಪದವಿ, ಪರಿಸರ ವಿಭಾಗಕ್ಕೆ ಸಂಬಂಧಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಬಿಸಿನೆಸ್ ಡೆವಲಪ್‌ಮೆಂಟ್ ವಿಭಾಗಕ್ಕೆ ಎಂಬಿಎ ಪದವಿ ಕಡ್ಡಾಯವಾಗಿದೆ. ಜೊತೆಗೆ ಸಂಬಂಧಿತ ಕ್ಷೇತ್ರದಲ್ಲಿ ಅನುಭವವನ್ನೂ ಪರಿಗಣಿಸಲಾಗುತ್ತದೆ.
ವಯೋಮಿತಿಯಲ್ಲಿ ಚೀಫ್ ಮ್ಯಾನೇಜರ್ ಹುದ್ದೆಗೆ ಗರಿಷ್ಠ 55 ವರ್ಷ, ಸೀನಿಯರ್ ಮ್ಯಾನೇಜರ್ ಹುದ್ದೆಗೆ 45 ವರ್ಷ ಹಾಗೂ ಮ್ಯಾನೇಜರ್ ಹುದ್ದೆಗೆ 40 ವರ್ಷ ಮಿತಿ ನಿಗದಿಪಡಿಸಲಾಗಿದೆ. ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮಾನುಸಾರ ವಯೋ ಸಡಿಲಿಕೆ ದೊರೆಯಲಿದೆ.
ಆಯ್ಕೆಯಾದ ಅಭ್ಯರ್ಥಿಗಳಿಗೆ ಆಕರ್ಷಕ ವೇತನ ಸೌಲಭ್ಯವೂ ಲಭ್ಯವಾಗಲಿದೆ. ಚೀಫ್ ಮ್ಯಾನೇಜರ್ ಹುದ್ದೆಗೆ ಮಾಸಿಕ ಸುಮಾರು ₹2 ಲಕ್ಷ, ಸೀನಿಯರ್ ಮ್ಯಾನೇಜರ್ ಹುದ್ದೆಗೆ ₹1.60 ಲಕ್ಷ ಹಾಗೂ ಮ್ಯಾನೇಜರ್ ಹುದ್ದೆಗೆ ₹1.20 ಲಕ್ಷ ವೇತನ ನಿಗದಿಪಡಿಸಲಾಗಿದೆ.
ಆಯ್ಕೆ ಪ್ರಕ್ರಿಯೆಯು ಎರಡು ಹಂತಗಳಲ್ಲಿ ನಡೆಯಲಿದ್ದು, ಮೊದಲಿಗೆ ಅರ್ಜಿಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ. ಬಳಿಕ ಅರ್ಹ ಅಭ್ಯರ್ಥಿಗಳಿಗೆ ವೈಯಕ್ತಿಕ ಸಂದರ್ಶನ ನಡೆಸಿ ಅಂತಿಮ ಆಯ್ಕೆ ಮಾಡಲಾಗುತ್ತದೆ.
ಅಭ್ಯರ್ಥಿಗಳು NMPA ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಈ ಲಿಂಕ್ ಕ್ಲಿಕ್ ಮಾಡಬಹುದು https://newmangaloreport.gov.in/sites/default/files/2026-04/ADVERTISEMENT_0.pdf

















