ನವದೆಹಲಿ: 34 ವರ್ಷಗಳ ಬಳಿಕ ಹೊಸ ‘ರಾಷ್ಟ್ರೀಯ ಶಿಕ್ಷಣ ನೀತಿ’ಗೆ ಕೇಂದ್ರ ಸರ್ಕಾರ ಬುಧವಾರ ಅನುಮೋದನೆ ನೀಡಿದೆ. ಅದರಂತೆ ಐದನೇ ತರಗತಿಯವರೆಗೆ ಮಾತೃಭಾಷೆ ಶಿಕ್ಷಣಕ್ಕೆ ನೀಡಿದ್ದು, ಶಾಲಾಪೂರ್ವ ಕಲಿಕೆಯಿಂದ ಪ್ರೌಢಶಿಕ್ಷಣದವರೆಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಖಾತರಿ ಈ ನೀತಿಯಲ್ಲಿ ಇರುವ ಇನ್ನೊಂದು ಅಂಶವಾಗಿದೆ.
ಎಂಟನೇ ತರಗತಿವರೆಗೂ ಶಿಕ್ಷಣದ ಮಾಧ್ಯಮವು ಮಾತೃಭಾಷೆ ಅಥವಾ ಸ್ಥಳೀಯ ಭಾಷೆ ಅಥವಾ ರಾಜ್ಯ ಭಾಷೆ ಆಗಿರಬೇಕು ಎಂಬುದಕ್ಕೆ ನೀತಿಯು ಆದ್ಯತೆ ನೀಡಿದೆ. ಶಾಲೆ ಮತ್ತು ಪ್ರೌಢ ಶಿಕ್ಷಣದ ಎಲ್ಲ ಹಂತಗಳಲ್ಲಿಯೂ ಸಂಸ್ಕೃತವನ್ನು ಐಚ್ಛಿಕವಾಗಿ ಕಲಿಯುವ ಅವಕಾಶ ನೀಡಲಾಗಿದೆ.
ಶಿಕ್ಷಕರಿಗೆ ನಾಲ್ಕು ವರ್ಷಗಳ ಸಂಯೋಜಿತ ಪದವಿ ಕನಿಷ್ಠ ವಿದ್ಯಾರ್ಹತೆಯಾಗಲಿದೆ. ಇದು 2030ರ ಹೊತ್ತಿಗೆ ಜಾರಿಗೆ ಬರಲಿದೆ.
ಮೂರರಿಂದ ನಾಲ್ಕು ವರ್ಷಗಳ ಪದವಿ ಪೂರ್ವ ಹಂತದ ಶಿಕ್ಷಣವನ್ನು ಯೋಜಿಸಲಾಗಿದ್ದು ವಿವಿಧ ಹಂತಗಳಲ್ಲಿ ಈ ಕೋರ್ಸ್ಗಳನ್ನು ನಿಲ್ಲಿಸುವ ಅವಕಾಶ ವಿದ್ಯಾರ್ಥಿಗಳಿಗೆ ಲಭ್ಯವಾಗಲಿದೆ.
ವಿದ್ಯಾರ್ಥಿಗಳು ಯಾವ ಹಂತವನ್ನೂ ಪೂರ್ಣಗೊಳಿಸಿದ್ದಾರೆಯೋ ಆ ಹಂತಕ್ಕೆ ಅವರಿಗೆ ಪ್ರಮಾಣಪತ್ರವೂ ದೊರೆಯಲಿದೆ. ಮೊದಲ ವರ್ಷ ಪೂರ್ಣಗೊಳಿಸಿದರೆ ಶಿಕ್ಷಣ ನಿಲ್ಲಿಸುವ ವಿದ್ಯಾರ್ಥಿಗೆ ಪ್ರಮಾಣಪತ್ರ ಸಿಗಲಿದೆ. ಎರಡು ವರ್ಷ ಪೂರ್ಣಗೊಳಿಸಿದರೆ ಡಿಪ್ಲೊಮಾ ಪ್ರಮಾಣಪತ್ರ, ಮೂರು ವರ್ಷ ಪೂರ್ಣಗೊಳಿಸಿದರೆ ಪದವಿ ಮತ್ತು ನಾಲ್ಕು ವರ್ಷ ಪೂರ್ಣಗೊಳಿಸಿದರೆ ಸಂಶೋಧನೆಯೊಂದಿಗೆ ಪದವಿ ಪ್ರಮಾಣಪತ್ರ ಸಿಗಲಿದೆ.
ಮಧ್ಯದಲ್ಲಿ ಶಿಕ್ಷಣ ನಿಲ್ಲಿಸಿದ ವಿದ್ಯಾರ್ಥಿಯು ಮತ್ತೆ ಕೋರ್ಸ್ ಮುಂದುವರಿಸಲು ಅವಕಾಶ ಇದೆ. ಇದಕ್ಕೆ ನಿಗದಿತ ಅವಧಿಯ ಮಿತಿ ಇರುತ್ತದೆ. ಮುಂದಿನ 15 ವರ್ಷಗಳಲ್ಲಿ ಕಾಲೇಜುಗಳು ವಿ.ವಿ.ಅಧೀನದಿಂದ ಹೊರಗೆ ಬಂದು ಸ್ವಾಯತ್ತವಾಗಲಿವೆ ಅಥವಾ ವಿ.ವಿ. ಘಟಕ ಕಾಲೇಜು ಎಂದು ಗುರುತಿಸಿಕೊಳ್ಳಲಿವೆ. ಇವುಗಳು ಸಂಶೋಧನಾ ವಿ.ವಿ.ಗಳು, ಬೋಧನಾ ವಿ.ವಿ.ಗಳು, ಪದವಿ ಪ್ರದಾನ ಮಾಡುವ ಕಾಲೇಜು ಎಂದು ಗುರುತಿಸಿಕೊಳ್ಳಲಿವೆ.