ಕಾರ್ಕಳ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯವು ಜಪಾನ್ ನ ನಿಡ್ಯಾಕ್-ರೀಡ್ ಕಾರ್ಪೋರೇಶನ್ ಸಂಸ್ಥೆಯ ಸಹಯೋಗದಲ್ಲಿ ನಿಟ್ಟೆ ಕ್ಯಾಂಪಸ್ ನಲ್ಲಿ ನಿಡ್ಯಾಕ್-ರೀಡ್ ಸೆಂಟರ್ ಆಫ್ ಎಕ್ಸಲೆನ್ಸ್ ಅನ್ನು ಆರಂಭಿಸಿದೆ. ಮಂಗಳವಾರದಂದು ನಿಡ್ಯಾಕ್-ರೀಡ್ ಸಂಸ್ಥೆಯ ನಿರ್ದೇಶಕ ಹಾಗೂ ಸಿ.ಇ.ಒ ಹಿಡೆಕಾಜು ಯಮಜಕಿ ಅವರು ಗಣ್ಯರ ಸಮ್ಮುಖದಲ್ಲಿ ಸೆಂಟರ್ ಆಫ್ ಎಕ್ಸಲೆನ್ಸ್ ಉದ್ಘಾಟನೆಗೊಳಿಸಿ ಮಾತನಾಡಿ, ಭಾರತದ ಪ್ರತಿಷ್ಟಿತ ವಿದ್ಯಾಸಂಸ್ಥೆಗಳಲ್ಲೊಂದಾಗಿರುವ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದೊಂದಿಗೆ ನಿಡ್ಯಾಕ್ ರೀಡ್ ಸಂಸ್ಥೆಯು ಉತ್ತಮ ಬಾಂಧವ್ಯವನ್ನು ಬೆಳೆಸಿಕೊಂಡಿದ್ದು ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ವಿದ್ಯಾಲಯದ ಹಲವಾರು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಇಂಟರ್ನ್ಶಿಪ್ ಹಾಗೂ ಉದ್ಯೋಗಾವಕಾಶಗಳನ್ನು ನೀಡಲು ಸದಾ ಸಿದ್ದವಿದೆ. ಈ ಮೂಲಕ ನಿಟ್ಟೆ ವಿದ್ಯಾಸಂಸ್ಥೆಯೊಂದಿಗಿನ ಬಾಂಧವ್ಯ ಹಾಗೂ ನಿಡ್ಯಾಕ್ ಸಂಸ್ಥೆಯ ತಾಂತ್ರಿಕ ಕೌಶಲ್ಯಗಳು ಬಲವರ್ಧನೆಗೊಳ್ಳಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಪತಿ ಎನ್. ವಿನಯ ಹೆಗ್ಡೆ ಮಾತನಾಡಿ, ಇಂತಹ ಸೆಂಟರ್ ಆಫ್ ಎಕ್ಸಲೆನ್ಸ್ ನಿಂದ ಸಂಸ್ಥೆಯ ವಿದ್ಯಾರ್ಥಿಗಳಿಗೆ ತಮ್ಮ ಕೌಶಲ್ಯಗಳನ್ನು ವೃದ್ದಿಸಲು ಉತ್ತಮ ವೇದಿಕೆ ಸಿಗಲಿದೆ. ನಿಡ್ಯಾಕ್ ಕಂಪೆನಿಯೊಂದಿಗಿನ ಕೆಲವರ್ಷಗಳ ಒಡನಾಟ ಇನ್ನೂ ಉತ್ತಮಗೊಂಡಿದೆ. ವಿದ್ಯಾರ್ಥಿಗಳ ಹಾಗೂ ಸಮಾಜದ ಏಳಿಗೆಯ ದೃಷ್ಠಿಯಿಂದ ನಿಡ್ಯಾಕ್ ಕಂಪೆನಿಯೊಂದಿಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಸಂಶೋಧನಾ ಕಾರ್ಯಗಳು ಹಾಗೂ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಇಂಗಿತ ನಿಟ್ಟೆ ಸಂಸ್ಥೆಗಿದೆ ಎಂದರು.
ಈ ಸಂದರ್ಭದಲ್ಲಿ ನಿಡ್ಯಾಕ್-ರೀಡ್ ಸಂಸ್ಥೆಯ ಉಪನಿರ್ದೇಶಕ ತಕಶಿ ಮಿಕಿ, ಬೋರ್ಡ್ ಟೆಸ್ಟ್ ವಿಭಾಗದ ವ್ಯವಸ್ಥಾಪಕ ತದಕಜು ಮಿಯಟಕೆ ಹಾಗೂ ಹ್ಯೂಮನ್ ರಿಸೋರ್ಸ್ ವಿಭಾಗದ ಗ್ರೂಪ್ ಲೀಡ್ ಕತ್ಸುಮಿ ಕಸನೊ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ನಿಟ್ಟೆ ವಿಶ್ವವಿದ್ಯಾಲಯದ ಪ್ರೊ-ಚಾನ್ಸಲರ್ ಗಳಾದ ಪ್ರೊ.ಡಾ. ಶಾಂತರಾಮ್ ಶೆಟ್ಟಿ, ವಿಶಾಲ್ ಹೆಗ್ಡೆ, ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಡಾ.ಸತೀಶ್ ಕುಮಾರ್ ಭಂಡಾರಿ, ಪ್ರೊ- ವೈಸ್ ಚಾನ್ಸಲರ್ ಡಾ.ಎಂ.ಎಸ್ ಮೂಡಿತ್ತಾಯ, ಕುಲಸಚಿವ ಡಾ.ಹರ್ಷ ಹಾಲಹಳ್ಳಿ ಅವರು ಗೌರವ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಈ ಸೆಂಟರ್ ಆಫ್ ಎಕ್ಸಲೆನ್ಸ್ ನ ಪ್ರಥಮ ಯೋಜನೆಯಡಿಯಲ್ಲಿ ಸಾಫ್ಟ್ ವೇರ್ ಡೆವಲಪ್ಮೆಂಟ್ ಹಾಗೂ ಮೆಕ್ಯಾನಿಕಲ್ ಡಿಸೈನ್ಸ್ ಕಾರ್ಯವನ್ನು ಆರಂಭಿಸಲಾಯಿತು.
ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ನಿರಂಜನ್ ಎನ್ ಚಿಫ್ಳೂಣ್ಕರ್ ಅತಿಥಿಗಳನ್ನು ಸ್ವಾಗತಿಸಿ ಸಂಸ್ಥೆಯ ಬಗೆಗೆ ವಿವರಿಸಿದರು. ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಅಂತಾರಾಷ್ಟ್ರೀಯ ಸಹಯೋಗ ವಿಭಾಗದ ನಿರ್ದೇಶಕ ಪ್ರೊ.ಹರಿಕೃಷ್ಣ ಭಟ್ ವಂದಿಸಿದರು.
ಉದ್ಘಾಟನಾ ಕಾರ್ಯಕ್ರಮದ ಅನಂತರ ನಿಟ್ಟೆ ತಾಂತ್ರಿಕ ಕಾಲೇಜಿನಲ್ಲಿ ವಿವಿಧ ಕಂಪೆನಿಗಳ ಸಹಯೋಗದೊಂದಿಗೆ ನಿರ್ಮಿಸಲಾಗಿರುವ ವಿವಿಧ ಸೆಂಟರ್ ಆಫ್ ಎಕ್ಸಲೆನ್ಸ್ ಗಳಿಗೆ ಜಪಾನ್ ತಂಡ ಭೇಟಿ ನೀಡಿತು. ಮುಂಬರುವ ದಿನಗಳಲ್ಲಿ ಜಪಾನ್ ನಲ್ಲಿ ಉದ್ಯೋಗವನ್ನರಸಿ ಹೋಗಲಿಚ್ಛಿಸುವ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮವನ್ನು ಈ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಯಿತು.