ಕರಾವಳಿಗರಿಗೆ ಕುಚ್ಚಲಕ್ಕಿ ಭಾಗ್ಯ: ಪಡಿತರ ವಿತರಣೆಗೆ ಕೇಂದ್ರ ಅಸ್ತು

ಮಂಗಳೂರು/ ಉಡುಪಿ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳೆಯುವ ಮತ್ತು ಇಲ್ಲಿನ ಜನತೆ ಬಹುವಾಗಿ ಇಷ್ಟಪಟ್ಟು ಸೇವಿಸುವ ಕುಚ್ಚಲಕ್ಕಿಯನ್ನು ಪಡಿತರ ವಿತರಣೆಯಲ್ಲಿ ನೀಡಬೇಕು ಎನ್ನುವ ಬಹುದಿನಗಳ ಬೇಡಿಕೆ ಕಡೆಗೂ ಈಡೇರಿದೆ. ಕರಾವಳಿಯ ಅವಳಿ ಜಿಲ್ಲೆಗಳಲ್ಲಿ ಸ್ಥಳೀಯ ಕುಚ್ಚಲಕ್ಕಿಯನ್ನು ಖರೀದಿಸಿ, ಪಡಿತರ ವ್ಯವಸ್ಥೆಯಡಿ ವಿತರಿಸಲು ಕೇಂದ್ರ ಸರಕಾರ ಅನುಮತಿ ನೀಡಿದೆ.

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಪಡಿತರ ವ್ಯವಸ್ಥೆಯಡಿ ಕುಚ್ಚಲಕ್ಕಿ ವಿತರಿಸುವ ಸಾರ್ವಜನಿಕರ ಬೇಡಿಕೆಯ ಬಗ್ಗೆ ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣೆ ಸಚಿವ ಪಿಯುಷ್ ಗೋಯಲ್ ಅವರಿಗೆ ಪ್ರಸ್ತಾವನೆ ಕಳುಹಿಸಿದ್ದು, ಇದಕ್ಕೆ ಸ್ಪಂದಿಸಿದ ಸಚಿವರು ಅನುಮತಿ ನೀಡಿರುವುದರಿಂದ ಪ್ರಸಕ್ತ ಋತುವಿನ ಸ್ಥಳೀಯ ಅಕ್ಕಿ ಗ್ರಾಹಕರಿಗೆ ಲಭ್ಯವಾಗಲಿದೆ.

ಉಡುಪಿ ಮತ್ತು ದ.ಕ ಜಿಲ್ಲೆಯಲ್ಲಿ ಬೆಳೆಯಲಾಗುತ್ತಿರುವ ಸ್ಥಳೀಯ ಪ್ರಬೇಧಗಳನ್ನು ಖರೀದಿಸಿ ಪಡಿತರ ವ್ಯವಸ್ಥೆಯಡಿ ವಿತರಿಸುವುದರಿಂದ ಜಿಲ್ಲೆಯ ರೈತರಿಗೂ ಅನುಕೂಲವಾಗಲಿದೆ. ಕೇಂದ್ರ ಸರಕಾರವು ಸಾಮಾನ್ಯ ಭತ್ತಕ್ಕೆ ಕ್ವಿಂಟಾಲ್ ಗೆ 1940 ರೂ. ಹಾಗೂ ಗ್ರೇಡ್ ಎ ಭತ್ತಕ್ಕೆ ಕ್ವಿಂಟಾಲ್ ಗೆ 1960 ರೂ. ನಿಗದಿ ಮಾಡಿದೆ. ಬೆಂಬಲ ಬೆಲೆಯನ್ನು ಹೆಚ್ಚಿಸುವಂತೆ ರೈತರು ಸರಕಾರವನ್ನು ಆಗ್ರಹಿಸಿದ್ದಾರೆ.