ಸಾಸ್ತಾನ ಸಂತ ಅಂತೋನಿ ದೇವಾಲಯದ ಶತಮಾನೋತ್ಸವ ಸಂಭ್ರಮ

ಉಡುಪಿ: ಶತಮಾನೋತ್ಸವ ಸಂಭ್ರಮ ನಮ್ಮೊಳಗಿನ ನಂಬಿಕೆ ಮತ್ತು ವಿಶ್ವಾಸವನ್ನು ಬಲಪಡಿಸಲು ಒಂದು ದಾರಿಯಾಗಿದೆ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.

ಅವರು ಬುಧವಾರ ಸಾಸ್ತಾನ ಸಂತ ಅಂತೋನಿ ದೇವಾಲಯದ ಶತಮಾನೋತ್ಸವ ಸಂಭ್ರಮದ ಪವಿತ್ರ ಬಲಿಪೂಜೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಸಾಸ್ತಾನ ಧರ್ಮಕೇಂದ್ರ 100 ವರ್ಷಗಳ ಹಿಂದೆ ಕಲ್ಯಾಣಪುರ ದೇವಾಲಯದ ಒಂದು ಭಾಗವಾಗಿದ್ದು, ಅಂದಿನ ಪೂರ್ವಜರು ಮೂರು ನದಿಗಳನ್ನು ದಾಟಿ ಕಾಲ್ನಡಿಗೆ ಮೂಲಕ ಚರ್ಚಿಗೆ ತೆರಳಿ ಕ್ರೈಸ್ತ ಸಭೆಯಲ್ಲಿ ತಮ್ಮ ನಂಬಿಕೆ ಮತ್ತು ವಿಶ್ವಾಸವನ್ನು ಕಾಪಾಡಿಕೊಂಡಿದ್ದರು. ಸ್ವತಂತ್ರ ಧರ್ಮಕೇಂದ್ರವಾದ ಬಳಿಕ ಕಳೆದ 100 ವರ್ಷಗಳಲ್ಲಿ ಚರ್ಚಿನ ಸರ್ವತೋಮುಖ ಅಭಿವೃದ್ಧಿಯಾಗಿದ್ದು, ಶತಮಾನೋತ್ಸವ ಸಂಭ್ರಮದ ಮೂಲಕ ನಾವೆಲ್ಲರೂ ಒಂದೇ ಕುಟುಂಬದ ಸದಸ್ಯರು ಎನ್ನುವುದರ ಮೂಲಕ ಸಾರ್ವತ್ರಿಕ ಸಹೋದರತ್ವವನ್ನು ಸಮಾಜಕ್ಕೆ ಪಸರಿಸಬೇಕು ಎಂದರು.

ಬಲಿಪೂಜೆಯಲ್ಲಿ ಪ್ರವಚನ ನೀಡಿದ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಪೀಟರ್ ಪಾವ್ಲ್ ಸಲ್ಡಾನ ಅವರು ನೂರು ವರ್ಷಗಳ ಹಿಂದೆ ಬಿತ್ತಿದ ವಿಶ್ವಾಸ ಮತ್ತು ಮತ್ತು ನಂಬಿಕೆಯ ಬೀಜ ಇಂದು ಮರವಾಗಿ ಬೆಳೆದು ನಿಂತಿದೆ. ಶತಮಾನೋತ್ಸವ ಸಂಭ್ರಮ ಕೇವಲ ಹೊರಗಿನ ಆಚರಣೆಯಲ್ಲ ಬದಲಾಗಿ ಆಂತರಿಕ ಶುದ್ಥತೆಯನ್ನು ಕೂಡ ಒಳಗೊಂಡಿದೆ ಎಂದರು.

ಪವಿತ್ರ ಬಲಿಪೂಜೆಯ ಬಳಿಕ ನಡೆದ ಕಿರು ಸಭಾ ಕಾರ್ಯಕ್ರಮದಲ್ಲಿ ಹಿಂದೆ ಚರ್ಚಿನಲ್ಲಿ ಸೇವೆ ನೀಡಿದ ಹೆರಾಲ್ಡ್ ಪಿರೇರಾ, ಮೊನ್ಸಿಂಜ್ಞೊರ್ ಎಡ್ವಿನ್ ಸಿ ಪಿಂಟೊ, ಕಲ್ಯಾಣಪುರ ವಲಯ ಪ್ರಧಾನ ಧರ್ಮಗುರು ವಲೇರಿಯನ್ ಮೆಂಡೊನ್ಸಾ, ಕುಂದಾಪುರ ವಲಯ ಪ್ರಧಾನ ಧರ್ಮಗುರು ಸ್ಟ್ಯಾನಿ ತಾವ್ರೋ, ಮಾಜಿ ವಲಯ ಪ್ರಧಾನ ಧರ್ಮಗುರು ಅನಿಲ್ ಡಿಸೋಜಾ, ಧರ್ಮಪ್ರಾಂತ್ಯದ ಕುಲಪತಿ ಸ್ಟ್ಯಾನಿ ಬಿ ಲೋಬೊ, ಮಿಶೊನರಿ ಸಿಸ್ಟರ್ಸ್ ಆಫ್ ಆಜ್ಮೀರ್ ಸಂಸ್ಥೆಯ ಪ್ರತಿನಿಧಿ ಸಿಸ್ಟರ್ ಮಿಶೆಲ್, ಶತಮಾನೋತ್ಸವ ಆಚರಣಾ ಸಮಿತಿಯ ಸಂಚಾಲಕ ಡೆರಿಕ್ ಡಿಸೋಜಾ, ಶೈಕ್ಷಣಿಕ ನಿಧಿಗೆ ಅತಿ ಹೆಚ್ಚು ದೇಣಿಗೆ ನೀಡಿದ ತಿಯೋದರ್ ಫುರ್ಟಾಡೊ ಇವರುಗಳನ್ನು ಸನ್ಮಾನಿಸಲಾಯಿತು.

ನಿತ್ಯ ಪ್ರಾರ್ಥನಾ ವಿಧಿಯ ನೂತನ ಪುಸ್ತಕ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಪೀಟರ್ ಪಾವ್ಲ್ ಸಲ್ಡಾನ ಹಾಗೂ ಬಲಿಪೂಜೆಯ ವೇಳೆ ಉಪಯೋಗಿಸಿ ಭಕ್ತಿಗೀತೆಗಳ ಪುಸ್ತಕವನ್ನು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಜೆರಾಲ್ಡ್ ಐಸಾಕ್ ಲೋಬೊ ಬಿಡುಗಡೆ ಮಾಡಿದರು.

ಕಾರ್ಯಕ್ರಮದಲ್ಲಿ ರಾಕ್ಣೊ ಪತ್ರಿಕೆಯ ಸಂಪಾದಕ ವಲೇರಿಯನ್ ಫೆರ್ನಾಂಡಿಸ್, ಸ್ಥಳೀಯ ಸಂತ ಥೋಮಸ್ ಸೀರಿಯನ್ ಚರ್ಚಿನ ಧರ್ಮಗುರು ನೊಯೆಲ್ ಲೂವಿಸ್, ಮಿಶೊನರಿ ಸಿಸ್ಟರ್ಸ್ ಆಫ್ ಆಜ್ಮೀರ್ ಕಾನ್ವೆಂಟ್ ಮುಖ್ಯಸ್ಥ ಸಿಸ್ಟರ್ ವೆರೊನಿಕಾ ಬ್ರಿಟ್ಟೊ, ಜೀಸಸ್ ಮೇರಿ ಕಾನ್ವೆಂಟ್ ಮುಖ್ಯಸ್ಥೆ ಸಿಸ್ಟರ್ ಗೊರೆಟ್ಟಿ ಕುಟಿನ್ಹೊ ಉಪಸ್ಥಿತರಿದ್ದರು.

ಸಾಸ್ತಾನ ಚರ್ಚಿನ ಧರ್ಮಗುರು ಜಾನ್ ವಾಲ್ಟರ್ ಮೆಂಡೊನ್ಸಾ ಸ್ವಾಗತಿಸಿ, ಚರ್ಚ್ ಸಮಿತಿಯ ಕಾರ್ಯದರ್ಶಿ ಲೂಯಿಸ್ ಮ್ಯಾಕ್ಷಿಮ್ ಡಿಸೋಜಾ ವರದಿ ಮಂಡಿಸಿದರು. 18 ಆಯೋಗಗಳ ಸಂಯೋಜಕರಾದ ಜಾನೆಟ್ ಬಾಂಜ್ ವಂದಿಸಿರು. ಆಲ್ವಿನ್ ಅಂದ್ರಾದೆ ಮತ್ತು ಗ್ಲ್ಯಾನಿಸ್ ಲೂವಿಸ್ ಕಾರ್ಯಕ್ರಮ ನಿರೂಪಿಸಿದರು.