ಸ್ಮಶಾನ ಕಾರ್ಮಿಕರಿಗೆ ‘ಸತ್ಯ ಹರಿಶ್ಚಂದ್ರ ಬಳಗ’ವೆಂದು ಸಂಬೋಧನೆ: ಮುಖ್ಯಮಂತ್ರಿ ಬೊಮ್ಮಾಯಿ ಆದೇಶ

ಬೆಂಗಳೂರು: ಇನ್ನು ಮುಂದೆ ಸ್ಮಶಾನ ಕಾರ್ಮಿಕರನ್ನು ‘ಸತ್ಯ ಹರಿಶ್ಚಂದ್ರ ಬಳಗ’ ಎಂದು ಸಂಬೋಧಿಸುವಂತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಬಿಬಿಎಂಪಿ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ಇದರ ಜೊತೆಗೆ ಪೌರ ಕಾರ್ಮಿಕರನ್ನು ಖಾಯಂ ಮಾಡುವ ಬಗ್ಗೆಯೂ ಸೂಚನೆ ನೀಡಿದ್ದಾರೆ.

ಸ್ಮಶಾನ ಕಾರ್ಮಿಕರು ಎಲ್ಲರಿಗೂ ಮುಕ್ತಿ ಕೊಡುವ ಕಾರ್ಯಮಾಡುತ್ತಾರೆ. ಅವರಿಗೆ ಸತ್ಯ ಹರಿಶ್ಚಂದ್ರ ಬಳಗ ಎಂದು ನಾಮಕರಣ ಮಾಡಿ ಬೊಮ್ಮಾಯಿ ಆದೇಶ ಹೊರಡಿಸಿದ್ದಾರೆ. ತಮ್ಮ ರೇಸ್ ಕೋರ್ಸ್ ರಸ್ತೆಯ ನಿವಾಸದಲ್ಲಿ ಸ್ಮಶಾನ ಕಾರ್ಮಿಕರೊಂದಿಗೆ ಬೆಳಗ್ಗಿನ ಉಪಾಹಾರ ಸೇವಿಸುವ ಕಾರ್ಯಕ್ರಮದಲ್ಲಿ ಅವರು ಈ ಬಗ್ಗೆ ಮಾಹಿತಿ ನೀಡಿದರು.

ಅದಾಗಲೇ 117 ಪೌರ ಕಾರ್ಮಿಕರಿಗೆ ಖಾಯಂ ಉದ್ಯೋಗ ನೀಡಿ ಆದೇಶ ಹೊರಡಿಸಲಾಗಿದೆ. ವಯೋಮಿತಿ ಆಧಾರದಲ್ಲಿ ಉಳಿದ 30 ಮಂದಿಯೂ ಖಾಯಂ ಆಗಲಿದ್ದಾರೆ. ಎಲ್ಲಾ ಜಿಲ್ಲೆಗಳ ಕಾರ್ಮಿಕರನ್ನೂ ಖಾಯಂ ಮಾಡಲಾಗುವುದು. 40 ಸಾವಿರ ಪೌರ ಕಾರ್ಮಿಕರಿಗೆ ಖಾಯಂ ಉದ್ಯೋಗ ನೀಡುವ ಕೆಲಸ ಮಾಡುತ್ತೇವೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.

ತನಗೆ ಹಲವಾರು ಸಭೆ,ಸಮಾರಂಭಗಳಲ್ಲಿ ಹಾರ-ತುರಾಯಿ ಸೇರಿದಂತೆ ಪಾರಿತೋಷಕಗಳನ್ನು ನೀಡಿದ್ದಾರೆ. ಆದರೇ ಇಂದು ನೀಡಿದ ಸತ್ಯ ಹರಿಶ್ಚಂದ್ರರ ಪಾರಿತೋಷಕ ತನ್ನ ಸ್ಮೃತಿ ಪಟಲದಲ್ಲಿ ಬಹುಕಾಲ ನೆನಪಿನಲ್ಲಿ ಉಳಿಯುತ್ತದೆ. ಈ ಪಾರಿತೋಷಕವನ್ನು ತಾನು ಸದಾ ಪೂಜಿಸುತ್ತೇನೆ ಎಂದು ಅವರು ಹೇಳಿದರು.