ಉಡುಪಿ ಜಿಲ್ಲೆಯಾದ್ಯಂತ ಸಂಭ್ರಮದ ಬಕ್ರೀದ್ ಆಚರಣೆ

ಉಡುಪಿ: ಜಿಲ್ಲೆಯಾದ್ಯಂತ ಮುಸ್ಲಿಂ ಬಾಂಧವರು ಬಕ್ರೀದ್ ಹಬ್ಬ(ಈದುಲ್ ಅಝಾ)ವನ್ನು ಸಂಭ್ರಮ, ಸಡಗರದಿಂದ ಗುರುವಾರ ಆಚರಿಸಿದರು. ಉಡುಪಿ ನಗರ, ಕಾಪು, ಬ್ರಹ್ಮಾವರ ಕುಂದಾಪುರ, ಬೈಂದೂರು ಹೆಬ್ರಿ, ಕಾರ್ಕಳ ತಾಲೂಕುಗಳ ಎಲ್ಲ ಮಸೀದಿಗಳಲ್ಲಿ ವಿಶೇಷ ಈದ್ ನಮಾಝ್ ನೆರವೇರಿಸಲಾಯಿತು.

ಮುಸ್ಲಿಂ ಬಾಂಧವರು ಬೆಳಗ್ಗೆ ಹೊಸ ಬಟ್ಟೆ ಧರಿಸಿ ಮಸೀದಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಕೆಲವು ಮಸೀದಿಗಳಲ್ಲಿ ಮಹಿಳೆಯರಿಗೂ ಈದ್ ನಮಾಝ್ ನಿರ್ವಹಿಸಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿತ್ತು. ನಮಾಝ್ ಬಳಿಕ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.

ಉಡುಪಿ ಜಾಮೀಯ ಮಸೀದಿಯಲ್ಲಿ ಮೌಲಾನಾ ಅಬ್ದುರ‌್ರಶೀದ್ ನದ್ವಿ ನೇತೃತ್ವದಲ್ಲಿ ಮತ್ತು ಉಡುಪಿ ಅಂಜುಮಾನ್ ಮಸೀದಿಯಲ್ಲಿ ಮೌಲಾನ ಇನಾಯುತುಲ್ಲಾ ರಝ್ವಿ ನೇತೃತ್ವದಲ್ಲಿ ಈದ್ ನಮಾಝ್ ನಿರ್ವಹಿಸಲಾಯಿತು.

ದೊಡ್ಡಣಗುಡ್ಡೆ ಮಸೀದಿಯ ಖತೀಬರಾದ ಖಾಸಿಂ ಸಾದಿ ಅವರು ಈದ್ ಸಂದೇಶ ನೀಡಿದರು. ಅಸ್ಸಲಾಂ ಅಲೈಕುಂಸರ್ವ ಧರ್ಮೀಯರಿಗೂ ಈದ್ ಶುಭಾಶಯಗಳು.

ಮಕ್ಕಾದಲ್ಲಿ ಪವಿತ್ರ ಹಜ್ ಯಾತ್ರೆ ನಡೆಯುವ ಸಮಯದಲ್ಲೇ ಈ ಹಬ್ಬ ಆಚರಿಸಲಾಗುತ್ತದೆ. ಜೀವನದಲ್ಲಿ ಒಂದು ಬಾರಿಯಾದರೂ ಹಜ್ ಯಾತ್ರೆ ಕೈಗೊಳ್ಳಬೇಕು ಎಂದು ಇಸ್ಲಾಂ ಹೇಳುತ್ತದೆ. ಹಜ್‌ನ ಧಾರ್ಮಿಕ ವಿಧಿ-ವಿಧಾನಗಳು ಈ ಹಬ್ಬದೊಂದಿಗೆ ಮುಕ್ತಾಯಗೊಳ್ಳುತ್ತದೆ.

ನಮ್ಮೆಲ್ಲರಿಗೂ ಈ ತ್ಯಾಗ ಬಲಿದಾನದ ಹಬ್ಬವು ಆರೋಗ್ಯ ಐಶ್ವರ್ಯ ಮತ್ತು ಈಮಾನನ್ನು ಕರುಣಿಸಲಿ ಎಂದು ಅಲ್ಲಾಹುವಿನಲ್ಲಿ ಪ್ರಾರ್ಥಿಸೋಣ. ಈ ಹಬ್ಬದಿಂದ ದೇಶದ ಎಲ್ಲ ಜನರಿಗೂ ಒಳಿತಾಗಲಿ, ನಾಡಿಗೆ ಸುಭಿಕ್ಷೆ ದೊರಕಲಿ ಎಂದು ಶುಭ ಹಾರೈಸಿದರು.

ಬೈಟ್ : ಖಾಸಿಂ ಸಅದಿ, ಖತೀಬರು, ದೊಡ್ಡಣಗುಡ್ಡೆ