ಈ ಸಲ ಪರಿಸರಸ್ನೇಹಿ ಗಣೇಶೋತ್ಸವ ಆಚರಿಸಿ: ಹಸಿರು ಸಂಕಲ್ಪದೊಂದಿಗೆ ಪರಿಸರ ಸಂರಕ್ಷಣೆಗೆ ಕೈಜೋಡಿಸೋಣ

ಭಕ್ತಿ, ಭಾವ ಹಾಗೂ ಸಡಗರದ ಸಂಕೇತವಾಗಿರುವ ಗಣೇಶ ಚತುರ್ಥಿ ಹಬ್ಬವು ಹತ್ತಿರವಾಗುತ್ತಿದೆ. ಆದರೆ ಹಬ್ಬದ ಆಚರಣೆಯ ನೆಪದಲ್ಲಿ ಬಳಸುವ ರಾಸಾಯನಿಕಗಳು ಮತ್ತು ಪ್ಲಾಸ್ಟಿಕ್ ವಸ್ತುಗಳು ನಮ್ಮ ಪರಿಸರವನ್ನು ದಿನೇ ದಿನೇ ಕಲುಷಿತಗೊಳಿಸುತ್ತಿವೆ. ಈ ಹಿನ್ನೆಲೆಯಲ್ಲಿ, ಪ್ರಕೃತಿಯನ್ನು ರಕ್ಷಿಸುತ್ತಾ ಹಬ್ಬವನ್ನು ಸೌಹಾರ್ದಯುತವಾಗಿ ಆಚರಿಸಲು “ಹಸಿರು ಗಣೇಶೋತ್ಸವ” ಆಂದೋಲನವು ಇಂದಿನ ತುರ್ತು ಅಗತ್ಯವಾಗಿದೆ. ಭಕ್ತಿಯೊಂದಿಗೆ ಪರಿಸರವನ್ನೂ ಉಳಿಸುವ ದೃಢ ಸಂಕಲ್ಪವನ್ನು ಪ್ರತಿಯೊಬ್ಬ ನಾಗರಿಕನೂ ಮಾಡಬೇಕಾಗಿದೆ.

ಹಸಿರು ಗಣೇಶೋತ್ಸವದ ಯಶಸ್ಸಿಗೆ ನಾವು ನಮ್ಮ ದೈನಂದಿನ ಆಚರಣೆಯಲ್ಲಿ ತರಬೇಕಾದ ಪ್ರಮುಖ ಬದಲಾವಣೆಗಳು ಮತ್ತು ಮಾರ್ಗಸೂಚಿಗಳು ಇಲ್ಲಿವೆ:

ಇವುಗಳನ್ನು ಕಡ್ಡಾಯವಾಗಿ ಬಳಸಬೇಡಿ

* ಪಿ.ಒ.ಪಿ ಗಣೇಶ ಮೂರ್ತಿಗಳು: ಪ್ಲಾಸ್ಟರ್ ಆಫ್ ಪ್ಯಾರಿಸ್ (POP) ಮತ್ತು ವಿಷಕಾರಿ ರಾಸಾಯನಿಕ ಬಣ್ಣಗಳಿಂದ ಮಾಡಿದ ಮೂರ್ತಿಗಳು ನೀರನ್ನು ಸಂಪೂರ್ಣವಾಗಿ ಕಲುಷಿತಗೊಳಿಸುತ್ತವೆ.

* ಪ್ಲಾಸ್ಟಿಕ್ ಮತ್ತು ಥರ್ಮೋಕೋಲ್ ಅಲಂಕಾರ: ಪ್ಲಾಸ್ಟಿಕ್ ಹೂವುಗಳು, ಕೃತಕ ಮಾಲೆಗಳು ಮತ್ತು ಥರ್ಮೋಕೋಲ್ ವಿನ್ಯಾಸಗಳು ಭೂಮಿಯಲ್ಲಿ ಕೊಳೆಯದೆ ಪರಿಸರಕ್ಕೆ ಮಾರಕವಾಗುತ್ತವೆ.

* ಏಕಬಳಕೆಯ ಪ್ಲಾಸ್ಟಿಕ್ ವಸ್ತುಗಳು: ಪ್ಲಾಸ್ಟಿಕ್ ಕಪ್, ತಟ್ಟೆ, ಚಮಚ, ಪ್ಲಾಸ್ಟಿಕ್ ಬಾಟಲಿಗಳು ಮತ್ತು ಕ್ಯಾರಿ ಬ್ಯಾಗ್‌ಗಳು ಕಸದ ರಾಶಿಯನ್ನು ಹೆಚ್ಚಿಸುತ್ತವೆ.

* ರಾಸಾಯನಿಕ ರಂಗೋಲಿ: ಹಾನಿಕಾರಕ ರಾಸಾಯನಿಕ ಮಿಶ್ರಿತ ರಂಗೋಲಿ ಬಣ್ಣಗಳು ಮಣ್ಣಿನ ಫಲವತ್ತತೆಯನ್ನು ಕುಂದಿಸುತ್ತವೆ.

* ಅತಿಯಾದ ವಿದ್ಯುತ್ ದೀಪಾಲಂಕಾರ: ಅನಗತ್ಯ ವಿದ್ಯುತ್ ವ್ಯಯವನ್ನು ತಡೆಗಟ್ಟುವುದು ಒಳಿತು.

ಇವುಗಳನ್ನು ಬಳಸಲು ಪ್ರಯತ್ನಿಸೋಣ:

* ಶುದ್ಧ ಮಣ್ಣಿನ ಗಣೇಶ: ನೈಸರ್ಗಿಕ ಜೇಡಿಮಣ್ಣಿನಿಂದ ಮಾಡಿದ ಮತ್ತು ನೈಸರ್ಗಿಕ ಬಣ್ಣಗಳನ್ನು ಬಳಸಿದ ಪರಿಸರಸ್ನೇಹಿ ಮೂರ್ತಿಗಳನ್ನು ಮಾತ್ರ ಪ್ರತಿಷ್ಠಾಪಿಸಿ.

* ನೈಸರ್ಗಿಕ ಅಲಂಕಾರ: ತಾಜಾ ಹೂವುಗಳು, ಮಾವಿನ ಎಲೆಗಳು, ಬಾಳೆ ಎಲೆ, ತೆಂಗಿನ ಎಲೆ ಹಾಗೂ ಬಿದಿರಿನಿಂದ ಮಾಡಿದ ಸಾಂಪ್ರದಾಯಿಕ ವಸ್ತುಗಳನ್ನು ಅಲಂಕಾರಕ್ಕೆ ಬಳಸಿ.

* ಪರಿಸರಸ್ನೇಹಿ ಪಾತ್ರೆಗಳು: ಮುತ್ತುಗ, ಅಡಿಕೆ ಮತ್ತು ಬಾಳೆ ಎಲೆಯಿಂದ ತಯಾರಿಸಿದ ತಟ್ಟೆ ಹಾಗೂ ಬಟ್ಟಲುಗಳನ್ನು ಪ್ರಸಾದ ವಿನಿಯೋಗಕ್ಕೆ ಬಳಸಿ. ಪ್ಲಾಸ್ಟಿಕ್ ಬಾಟಲಿಗಳ ಬದಲಿಗೆ ಸ್ಟೀಲ್ ಲೋಟ ಅಥವಾ ತಾಮ್ರದ ಬಿಂದಿಗೆಗಳನ್ನು ನೀರಿಗಾಗಿ ಉಪಯೋಗಿಸಿ.

* ಬಟ್ಟೆಯ ಬ್ಯಾನರ್‌ಗಳು: ಹಬ್ಬದ ಶುಭಾಶಯ ಕೋರಲು ಫ್ಲೆಕ್ಸ್ ಬ್ಯಾನರ್‌ಗಳ ಬದಲಾಗಿ ಬಟ್ಟೆಯ ಬ್ಯಾನರ್‌ಗಳನ್ನು ಬಳಸಿ.

* ಹಸಿರು ಉಡುಗೊರೆಗಳು: ಹಬ್ಬದ ಸಂದರ್ಭದಲ್ಲಿ ಪರಸ್ಪರ ಶುಭ ಕೋರಲು ಪ್ಲಾಸ್ಟಿಕ್ ವಸ್ತುಗಳ ಬದಲಿಗೆ ಸಣ್ಣ ಸಣ್ಣ ಗಿಡಗಳನ್ನು ಉಡುಗೊರೆಯಾಗಿ ನೀಡಿ.

ಪೂಜಾ ಸಾಮಗ್ರಿ ಮತ್ತು ಪ್ರಸಾದ ವ್ಯವಸ್ಥೆ:

ಪೂಜೆಗಾಗಿ ನೈಸರ್ಗಿಕ ಧೂಪ, ಹೂವು, ತುಳಸಿ ಹಾಗೂ ನೈಸರ್ಗಿಕ ಅರಿಶಿನ-ಕುಂಕುಮಗಳನ್ನು ಬಳಸಿ. ಪ್ರಸಾದ ಮತ್ತು ನೀರನ್ನು ವಿತರಿಸಲು ಏಕಬಳಕೆಯ ಪ್ಲಾಸ್ಟಿಕ್ ಅನ್ನು ಸಂಪೂರ್ಣವಾಗಿ ತ್ಯಜಿಸಿ, ಬಿದಿರು ಅಥವಾ ಸ್ಟೀಲ್ ಪಾತ್ರೆಗಳನ್ನು ಬಳಸುವ ಮೂಲಕ ಮಾದರಿಯಾಗಿರಿ.

ನಮ್ಮ ಸಂಕಲ್ಪ ಮತ್ತು ಧ್ಯೇಯಗಳು:

“ಪರಿಸರ ಸಂರಕ್ಷಣೆ ಎಲ್ಲರ ಹೊಣೆ – ಜನಸಹಭಾಗಿತ್ವವೇ ನಮ್ಮ ಶಕ್ತಿ!” ಎನ್ನುವ ಧ್ಯೇಯವಾಕ್ಯದೊಂದಿಗೆ, ಬನ್ನಿ ಈ ಬಾರಿ ನಾವೆಲ್ಲರೂ ಒಟ್ಟಾಗಿ ಪ್ಲಾಸ್ಟಿಕ್ ಮುಕ್ತ ಗಣೇಶೋತ್ಸವವನ್ನು ಆಚರಿಸೋಣ. ವಿಘ್ನನಿವಾರಕನ ಹಬ್ಬವು ಪ್ರಕೃತಿಯ ವಿಘ್ನಗಳನ್ನು ನಿವಾರಿಸುವಂತಾಗಲಿ. “ಗಣೇಶನನ್ನು ಹೃದಯದಲ್ಲಿ ಸ್ಥಾಪಿಸಿ, ಪ್ಲಾಸ್ಟಿಕ್ ಗೆ ಬೇಡ ತಿಳಿಸಿ!