ತಿಹಾರ್ ಜೈಲಿನಲ್ಲಿ ಆಪ್ ನಾಯಕ ಸತ್ಯೇಂದ್ರ ಜೈನ್ ರಾಜ ದರ್ಬಾರ್: ಮಸಾಜ್ ಬಳಿಕ ಆಹಾರದ ವೀಡಿಯೋ ವೈರಲ್

ದೆಹಲಿ: ಭ್ರಷ್ಟಾಚಾರದ ಆರೋಪದಡಿ ಕಾರಾಗೃಹವಾಸದಲ್ಲಿರುವ ದೆಹಲಿ ಸರ್ಕಾರದ ಸಚಿವ ಸತ್ಯೇಂದ್ರ ಜೈನ್ ಅವರ ಕಾಲಿಗೆ ವ್ಯಕ್ತಿಯೊಬ್ಬ ಮಸಾಜ್ ಮಾಡುತ್ತಿರುವ ವೀಡಿಯೊ ಹೊರಬಿದ್ದ ನಂತರ ರಾಜಕೀಯ ವಲಯದಲ್ಲಿ ಸಂಚಲನವಾಗಿತ್ತು. ತನ್ನ ನಾಯಕನ ವೀಡಿಯೋದ ಬಗ್ಗೆ ಸ್ಪಷ್ಟೀಕರಣ ನೀಡಿದ್ದ ಆಪ್ ಪಕ್ಷ ಜೈನ್ ರವರ ಆರೋಗ್ಯದ ಕಾರಣ ನೀಡಿ ಅವರಿಗೆ ವೈದ್ಯರ ಸಲಹೆ ಮೇರೆಗೆ ಫಿಸಿಯೋಥೆರಪಿ ನೀಡಲಾಗುತ್ತಿತ್ತು ಎಂದಿತ್ತು. ಆದರೆ ಇದನ್ನು ಅಲ್ಲಗಳೆದ ಜೈಲಿನ ಅಧಿಕಾರಿಗಳು ಜೈನ್ ಅವರಿಗೆ ಮಸಾಜ್ ನೀಡುತ್ತಿದ್ದ ವ್ಯಕ್ತಿ ಅತ್ಯಾಚಾರ ಪ್ರಕರಣದಲ್ಲಿ ಜೈಲು ಶಿಕ್ಷೆಯಾಗಿರುವ ಸಹಕೈದಿ ಮತ್ತು ಆತ ಯಾವುದೇ ಫಿಸಿಯೋಥೆರಪಿಸ್ಟ್ ಅಲ್ಲ ಎಂದು ಹೇಳಿರುವುದಾಗಿ ವರದಿಯಾಗಿದೆ.

ಈಗ ಇದರ ಬೆನ್ನಿಗೆ ಜೈನ್ ಅವರ ಮತ್ತೊಂದು ವೀಡಿಯೋ ಜಾಲತಾಣಗಳಲ್ಲಿ ಹಂಚಿಕೆಯಾಗುತ್ತಿದೆ. ಈ ವೀಡಿಯೋದಲ್ಲಿ ಸತ್ಯೇಂದ್ರ ಜೈನ್ ಅವರು ಹೋಟೆಲ್ ತಿಂಡಿ ತಿನ್ನುತ್ತಿರುವುದನ್ನು ಕಾಣಬಹುದು. ವಿರೋಧ ಪಕ್ಷ ಬಿಜೆಪಿ ಇದು ಜೈಲಲ್ಲ, ರೆಸಾರ್ಟ್ನಂತೆ ಕಾಣುತ್ತಿದೆ ಎಂದು ಕುಹಕವಾಡಿದೆ.

ಜೈನ್ ಅವರು ತನಗೆ ಜೈಲಿನಲ್ಲಿ ಸರಿಯಾದ ಆಹಾರ ನೀಡಲಾಗುತ್ತಿಲ್ಲ ಎಂದು ಆರೋಪಿಸಿದ್ದರು. ಅವರ ವಕೀಲರು ಕೂಡಾ ಜೈನ್ 28 ಕೆ.ಜಿ ತೂಕ ಕಳೆದುಕೊಂಡಿದ್ದಾರೆ ಎಂದು ಹೇಳಿದ್ದರು. ಆದರೆ ವೀಡಿಯೋದಲ್ಲಿ ಜೈನ್ ಅವರ ಹಾಸಿಗೆಯ ಮೇಲೆ ವಿಭಿನ್ನ ಡಬ್ಬಿಗಳಲ್ಲಿ ವಿವಿಧ ರೀತಿಯ ಭಕ್ಷ್ಯಗಳು ಕಾಣಿಸಿವೆ. ಇದರೊಂದಿಗೆ ಸತ್ಯೇಂದ್ರ ಜೈನ್ ಹಣ್ಣು ತಿನ್ನುವುದನ್ನು ಕೂಡಾ ಕಾಣಬಹುದು. ತಿಹಾರ್ ಜೈಲಿನ ದಾಖಲೆಗಳ ಪ್ರಕಾರ, ಜೈಲಿನಲ್ಲಿದ್ದ ಸಮಯದಲ್ಲಿ ಅವರ ತೂಕ 8 ಕೆಜಿಯಷ್ಟು ಹೆಚ್ಚಾಗಿದೆ.

ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಗೆ ಡಿಸೆಂಬರ್ 4 ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 7 ರಂದು ಫಲಿತಾಂಶ ಬರಲಿದೆ. ಚುನಾವಣೆಗೆ ಮುನ್ನವೇ ಬಿಡುಗಡೆಯಾಗಿರುವ ಸತ್ಯೇಂದ್ರ ಜೈನ್ ಅವರ ಈ ವಿಡಿಯೋ ಆಮ್ ಆದ್ಮಿ ಪಕ್ಷಕ್ಕೆ ಹೊಸ ಸಮಸ್ಯೆ ಸೃಷ್ಟಿಸಬಹುದು ಎನ್ನಲಾಗಿದೆ.

ಜೈನ್ ಅವರ ಮಸಾಜ್ ವೀಡಿಯೊವನ್ನು ಬಿಡುಗಡೆ ಮಾಡಿದ ನಂತರ, ಈ ಬಗ್ಗೆ ತನಿಖೆ ನಡೆಸುವಂತೆ ಎಲ್‌ಜಿ ವಿಕೆ ಸಕ್ಸೇನಾ ಅವರಿಗೆ ಪತ್ರ ಬರೆಯಲಾಗಿದೆ ಎಂದು ವರದಿಗಳಾಗಿವೆ.