ದರ್ಶನ್‌, ಪ್ರಜ್ವಲ್ ರೇವಣ್ಣ ಬ್ಯಾರಕ್‌ನಲ್ಲಿ ಸಿಸಿಬಿ ತಪಾಸಣೆ: ಏನೆಲ್ಲಾ ಸಿಕ್ಕಿದೆ ನೋಡಿ

Darshan: ನಟ ದರ್ಶನ್‌ಗೆ ಮತ್ತೊಂದು ಶಾಕ್ ಎದುರಾಗಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಆಗಸ್ಟ್ 11ರಂದು ಸಿಸಿಬಿ ಪೊಲೀಸರು ದಿಢೀರ್ ತಪಾಸಣೆ ನಡೆಸಿದ್ದು, ದರ್ಶನ್ ಇದ್ದ ಬ್ಯಾರಕ್‌ನ್ನೂ ಪರಿಶೀಲಿಸಿದ್ದಾರೆ.

ಸಜಾ ಬಂಧಿಗಳ ಬ್ಯಾರಕ್‌ಗಳಲ್ಲಿ ನಡೆದ ಈ ತಪಾಸಣೆಯಲ್ಲಿ ದರ್ಶನ್ ಹಾಗೂ ಪವಿತ್ರಾ ಗೌಡ ಇದ್ದ ಬ್ಯಾರಕ್‌ಗಳನ್ನೂ ಸುಮಾರು ಒಂದು ಗಂಟೆಗಳ ಕಾಲ ಪರಿಶೀಲಿಸಲಾಗಿದೆ. ಬ್ಯಾರಕ್‌ನ ಮೂಲೆಮೂಲೆ, ಬಟ್ಟೆ ಬ್ಯಾಗ್, ಸೂಟ್‌ಕೇಸ್ ಸೇರಿದಂತೆ ಹಲವು ಸ್ಥಳಗಳಲ್ಲಿ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ.

ತಪಾಸಣೆ ವೇಳೆ ಪೊಲೀಸರು ಬ್ಯಾರಕ್ ಪರಿಶೀಲಿಸುತ್ತೇವೆ ಎಂದು ಹೇಳಿದಾಗ ದರ್ಶನ್ ಸಹಕರಿಸಿದ್ದಾರೆ ಎನ್ನಲಾಗಿದೆ. ದರ್ಶನ್ ಹಾಗೂ ಪವಿತ್ರಾ ಗೌಡ ಇದ್ದ ಬ್ಯಾರಕ್‌ಗಳಲ್ಲಿ ಯಾವುದೇ ಆಕ್ಷೇಪಾರ್ಹ ವಸ್ತುಗಳು ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.

ಪ್ರಜ್ವಲ್ ರೇವಣ್ಣ ಬ್ಯಾರಕ್‌ನಲ್ಲಿ ಮೊಬೈಲ್ ಪತ್ತೆ

ಇದೇ ವೇಳೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಇದ್ದ ಬ್ಯಾರಕ್‌ನಲ್ಲೂ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಈ ವೇಳೆ ಬಟ್ಟೆಗಳ ನಡುವೆ ಆ್ಯಂಡ್ರಾಯ್ಡ್ ಮೊಬೈಲ್ ಪತ್ತೆಯಾಗಿದ್ದು, ಪೊಲೀಸರು ಅದನ್ನು ಜಪ್ತಿ ಮಾಡಿದ್ದಾರೆ.

ಮೊಬೈಲ್ ಜೊತೆಗೆ ಪೆನ್‌ಡ್ರೈವ್, ಚಾರ್ಜರ್ ಹಾಗೂ ನೋಟ್‌ಬುಕ್ ಸೇರಿದಂತೆ ಕೆಲವು ವಸ್ತುಗಳು ಪತ್ತೆಯಾಗಿವೆ ಎಂದು ವರದಿಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಪ್ರಜ್ವಲ್ ರೇವಣ್ಣ ಅವರೊಂದಿಗೆ ಮತ್ತೊಬ್ಬ ಸಜಾ ಬಂಧಿ ಪ್ರತಾಪ್ ರೈ ಕೂಡ ಅದೇ ಬ್ಯಾರಕ್‌ನಲ್ಲಿ ಇದ್ದರು ಎನ್ನಲಾಗಿದ್ದು, ಇಬ್ಬರ ವಿರುದ್ಧವೂ ಪ್ರಕರಣ ದಾಖಲಾಗಿದೆ. ಎಫ್‌ಐಆರ್‌ನಲ್ಲಿ ಪ್ರಜ್ವಲ್ ರೇವಣ್ಣ ಅವರನ್ನು ಎ1 ಆರೋಪಿಯಾಗಿ ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ.

ಜೈಲು ಸಿಬ್ಬಂದಿ ವಿರುದ್ಧವೂ ಕ್ರಮ

ಜೈಲಿನ ಬ್ಯಾರಕ್‌ನಲ್ಲಿ ಮೊಬೈಲ್ ಸೇರಿದಂತೆ ವಸ್ತುಗಳು ಪತ್ತೆಯಾದ ಹಿನ್ನೆಲೆಯಲ್ಲಿ ಕರ್ತವ್ಯ ಲೋಪದ ಆರೋಪದ ಮೇಲೆ ಸಹಾಯಕ ಜೈಲು ಅಧೀಕ್ಷಕ ಈರಣ್ಣ ರಂಗಾಪುರ ಅವರನ್ನು ಅಮಾನತು ಮಾಡಲಾಗಿದೆ. ಅವರ ವಿರುದ್ಧ ಇಲಾಖೆ ತನಿಖೆಗೂ ಆದೇಶಿಸಲಾಗಿದೆ.

ಹೀಗಾಗಿ ಒಂದೆಡೆ ದರ್ಶನ್ ಇದ್ದ ಬ್ಯಾರಕ್‌ನಲ್ಲಿ ಸಿಸಿಬಿ ತಪಾಸಣೆ ನಡೆದಿದ್ದರೆ, ಮತ್ತೊಂದೆಡೆ ಪ್ರಜ್ವಲ್ ರೇವಣ್ಣ ಇದ್ದ ಬ್ಯಾರಕ್‌ನಲ್ಲಿ ಮೊಬೈಲ್ ಪತ್ತೆಯಾಗಿರುವುದು ಪರಪ್ಪನ ಅಗ್ರಹಾರ ಜೈಲಿನ ಭದ್ರತೆ ಕುರಿತು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.