ಬೆಳಗಾವಿ: ಜಿಲ್ಲೆಯ ಆಚಾರ್ಯ ಕಾಮಕುಮಾರ ನಂದಿ ಆಶ್ರಮದ ಜೈನ ಸನ್ಯಾಸಿ ಕಾಮಕುಮಾರ ನಂದಿ ಹತ್ಯೆ ಪ್ರಕರಣವನ್ನು ರಾಜ್ಯ ಪೊಲೀಸರು ಕೂಲಂಕುಷವಾಗಿ ತನಿಖೆ ನಡೆಸುತ್ತಿದ್ದಾರೆ ಎಂದು ರಾಜ್ಯ ಗೃಹ ಸಚಿವ ಜಿ ಪರಮೇಶ್ವರ್ ಅವರು ಹೇಳಿದ್ದಾರೆ. ಕೆಲವು ಪ್ರತಿಭಟನಾಕಾರರು ಕೇಂದ್ರೀಯ ತನಿಖಾ ದಳದ (ಸಿಬಿಐ) ತನಿಖೆಗೆ ಒತ್ತಾಯಿಸುತ್ತಿದ್ದಾರೆ ಎಂದ ಅವರು, ಪ್ರಕರಣದಲ್ಲಿ ಸಿಬಿಐ ಭಾಗಿಯಾಗುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವರು, ತನಿಖಾ ಪ್ರಕ್ರಿಯೆಯಲ್ಲಿ ಯಾವುದೇ ತಾರತಮ್ಯದ ಪ್ರಶ್ನೆಯೇ ಇಲ್ಲ. ನಮ್ಮ ಪೊಲೀಸರು ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುತ್ತಾರೆ. ಹುಬ್ಬಳ್ಳಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಜೈನ ಸನ್ಯಾಸಿಗಳನ್ನು ನಾನು ಭೇಟಿ ಮಾಡಿದ್ದೇನೆ ಮತ್ತು ಅವರು ಈ ಬಗ್ಗೆ ಸಿಬಿಐ ತನಿಖೆಗೆ ಒತ್ತಾಯಿಸಿದ್ದಾರೆ. ಕರ್ನಾಟಕ ಪೊಲೀಸರು ಪ್ರಕರಣವನ್ನು ಭೇದಿಸುವಷ್ಟು ಸಮರ್ಥರಾಗಿದ್ದಾರೆ ಎಂದು ಹೇಳಿದ್ದಾರೆ.
ಈ ಪ್ರಕರಣದಲ್ಲಿ ಸಿಬಿಐ ಭಾಗಿಯಾಗುವ ಅಗತ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ಆರೋಪಿಗಳನ್ನು ಬಂಧಿಸಿ ಪ್ರಕರಣವನ್ನು ಭೇದಿಸಲು ಕರ್ನಾಟಕ ಪೊಲೀಸರು ಸಮರ್ಥರಾಗಿದ್ದಾರೆ. ಪೊಲೀಸರ ಮೇಲೆ ಯಾವುದೇ ಒತ್ತಡವಿಲ್ಲ ಮತ್ತು ಅವರು ಯಾವುದೇ ಪಕ್ಷಪಾತವಿಲ್ಲದೆ ಶ್ರಮಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಜೈನ ಸನ್ಯಾಸಿಗಳ ಹತ್ಯೆಯ ಬಗ್ಗೆ ಕೆಲವು ಅನುಮಾನಗಳಿವೆ ಎಂದಿರುವ ಮಾಜಿ ಸಿಎಂ ಬೊಮ್ಮಾಯಿ, ನಿಷ್ಪಕ್ಷಪಾತ ತನಿಖೆಗೆ ಆಡಳಿತ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಏತನ್ಮಧ್ಯೆ, ಪೊಲೀಸರು ಭಾನುವಾರ ಕನಿಷ್ಠ 12 ಜನರನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡಿದ್ದಾರೆ. ಚಿಕ್ಕೋಡಿ ಉಪ ಎಸ್ಪಿ ಬಸವರಾಜ ಯಲಿಗಾರ್ ಮಾತನಾಡಿ, ಶನಿವಾರ ಬಂಧಿತ ಆರೋಪಿಗಳಿಬ್ಬರೂ ಸನ್ಯಾಸಿ ಹತ್ಯೆಗೆ ತಾವೇ ಹೊಣೆ ಎಂದು ಒಪ್ಪಿಕೊಂಡಿದ್ದರೂ, ಕೊಲೆಗೆ ಹಣದ ವಿಷಯವೇ ಕಾರಣ ಎಂದು ಶಂಕಿಸಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ನಂದಿ ಪರ್ವತ ಜೈನ ಆಶ್ರಮದ ಆಚಾರ್ಯ ಶ್ರೀ ಕಾಮಕುಮಾರ ಮಹಾರಾಜರನ್ನು ಜುಲೈ 6 ರಂದು ಆಶ್ರಮದಲ್ಲಿ ನಡೆದ ಹಣದ ವಿವಾದದ ಹಿನ್ನೆಲೆಯಲ್ಲಿ ಕೊಲೆ ಮಾಡಿದ್ದಾರೆ ಎಂದು ಶಂಕಿಸಲಾಗಿದೆ. ಕೊಲೆಗೆ ಸಂಬಂಧಿಸಿ ಶನಿವಾರದಂದು ಇಬ್ಬರನ್ನು ಬಂಧಿಸಲಾಗಿದೆ.