ಸಿಬಿಐ ಬಂಧಿತ ಮೂವರು ಅಧಿಕಾರಿಗಳು ಸೇರಿ 7 ರೈಲ್ವೆ ನೌಕರರ ಅಮಾನತು: ಒಡಿಶಾ ತ್ರಿವಳಿ ರೈಲು ಅಪಘಾತ ಕೇಸ್​

ಭುವನೇಶ್ವರ(ಒಡಿಶಾ) ತಪ್ಪಾದ ಸಿಗ್ನಲಿಂಗ್​ ಮತ್ತು ಸಿಬ್ಬಂದಿ ಅಚಾತುರ್ಯದಿಂದ ಅಪಘಾತಕ್ಕೆ ಕಾರಣವಾಗಿದ್ದ ಏಳು ಉದ್ಯೋಗಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ ಎಂದು ಆಗ್ನೇಯ ರೈಲ್ವೆ (ಎಸ್‌ಇಆರ್) ಪ್ರಧಾನ ವ್ಯವಸ್ಥಾಪಕ ಅನಿಲ್ ಕುಮಾರ್ ಮಿಶ್ರಾ ಬುಧವಾರ ತಿಳಿಸಿದ್ದಾರೆ.ಜೂನ್ 2 ರಂದು 300 ಜನರನ್ನು ಬಲಿ ಪಡೆದ ಒಡಿಶಾದ ಬಾಲಾಸೋರ್​ ಜಿಲ್ಲೆಯ ಬಹನಾಗ ನಿಲ್ದಾಣದಲ್ಲಿ ನಡೆದ ತ್ರಿವಳಿ ರೈಲು ಅಪಘಾತ ದುರಂತಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ಬಂಧಿತ ಮೂವರು ಸಿಬ್ಬಂದಿ ಸೇರಿ ಕನಿಷ್ಠ ಏಳು ರೈಲ್ವೆ ಉದ್ಯೋಗಿಗಳನ್ನು ಆಗ್ನೇಯ ರೈಲ್ವೆ ವಿಭಾಗವು ಅಮಾನತುಗೊಳಿಸಿದೆ.ತಪ್ಪಾದ ಸಿಗ್ನಲಿಂಗ್​ ಮತ್ತು ಸಿಬ್ಬಂದಿ ಅಚಾತುರ್ಯದಿಂದ ಒಡಿಶಾದ ಬಾಲಾಸೋರ್​ ಜಿಲ್ಲೆ ಬಹನಾಗ ನಿಲ್ದಾಣದಲ್ಲಿ ತ್ರಿವಳಿ ರೈಲು ಅಪಘಾತ ಸಂಭವಿಸಲು ಕಾರಣವಾಗಿದ್ದ ಏಳು ರೈಲ್ವೆ ನೌಕರರನ್ನು ತಕ್ಷಣ ಜಾರಿಗೆ ಬರುವಂತೆ ಅಮಾನತು ಮಾಡಲಾಗಿದೆ ಎಂದು ಆಗ್ನೇಯ ರೈಲ್ವೆ (ಎಸ್‌ಇಆರ್) ಪ್ರಧಾನ ವ್ಯವಸ್ಥಾಪಕ ಅನಿಲ್ ಕುಮಾರ್ ಮಿಶ್ರಾ ತಿಳಿಸಿದ್ದಾರೆ.

ಬಿಜೆಪಿ ಸಂಸದ ಪ್ರತಾಪ್ ಸಾರಂಗಿ ಅವರೊಂದಿಗೆ ಹಿರಿಯ ರೈಲ್ವೆ ಅಧಿಕಾರಿಗಳು ಗೋಪಿನಾಥಪುರ ರೈಲು ನಿಲ್ದಾಣಕ್ಕೆ ಭೇಟಿ ನೀಡಿದರು. ಈ ತಿಂಗಳ ಆರಂಭದಲ್ಲಿ, ಸಿಬಿಐ ಮೂವರು ರೈಲ್ವೆ ಅಧಿಕಾರಿಗಳನ್ನು ಬಂಧಿಸಿತ್ತು. ಹಿರಿಯ ಸೆಕ್ಷನ್ ಎಂಜಿನಿಯರ್ (ಸಿಗ್ನಲ್) ಅರುಣ್ ಕುಮಾರ್ ಮೊಹಂತ, ಸೆಕ್ಷನ್ ಎಂಜಿನಿಯರ್ ಮೊಹಮ್ಮದ್ ಅಮೀರ್ ಖಾನ್ ಮತ್ತು ಟೆಕ್ನಿಷಿಯನ್ ಪಪ್ಪು ಕುಮಾರ್ ಅವರ ವಿರುದ್ಧ ಸಿಆರ್‌ಪಿಸಿ ಸೆಕ್ಷನ್ 304 ಮತ್ತು 201 ಅಡಿಯಲ್ಲಿ ದೂರು ದಾಖಲಿಸಿದ್ದು, ಮೂವರನ್ನು ಸಿಬಿಐ ನಾಲ್ಕು ದಿನಗಳ ಕಸ್ಟಡಿಗೆ ತೆಗೆದುಕೊಂಡಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಮಿಶ್ರಾ ಅವರು, ಬಾಲಸೋರ್ ಜಿಲ್ಲೆಯ ಬಹನಾಗ ಬಜಾರ್ ರೈಲು ನಿಲ್ದಾಣ ಹತ್ತಿರ ಒಡಿಶಾದಲ್ಲಿ ತ್ರಿವಳಿ ರೈಲುಗಳು ಡಿಕ್ಕಿಯಾಗಿ ಸುಮಾರು 300 ಜನರು ಮೃತಪಟ್ಟರೆ, 1,200 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ಎಚ್ಚೆತ್ತುಕೊಂಡಿದ್ದರೆ ಅನಾಹುತ ತಪ್ಪಿಸಬಹುದಿತ್ತು. ಸಿಬಿಐನಿಂದ ಬಂಧಿಸಲ್ಪಟ್ಟಿದ್ದ ಮೂವರು ಸೇರಿ ಏಳು ಮಂದಿ ನೌಕರರನ್ನು ರೈಲ್ವೆ ಇಲಾಖೆಯು ಅಮಾನತುಗೊಳಿಸಿದೆ. ನಿಯಮಗಳ ಪ್ರಕಾರ, 24 ಗಂಟೆಗಳ ಕಾಲ ಬಂಧಿಸಿದ್ದ ಉದ್ಯೋಗಿಯನ್ನು ಅಮಾನತುಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ತ್ರಿವಳಿ ರೈಲು ದುರಂತ: ಜೂನ್​ 2ರಂದು (ಶುಕ್ರವಾರ) ಸಂಜೆ 7 ಗಂಟೆ ಸುಮಾರಿನಲ್ಲಿ ಒಡಿಶಾದ ಬನಹಗಾ ರೈಲು ನಿಲ್ದಾಣದ ಬಳಿ ಹೌರಾದಿಂದ ಚೆನ್ನೈಗೆ ಹೊರಟಿದ್ದ ಕೋರಮಂಡಲ್​ ರೈಲು ಚಲಿಸುತ್ತಿದ್ದ ವೇಳೆ ಹಳಿ ತಪ್ಪಿತ್ತು. ಇದರಿಂದ ಇನ್ನೊಂದು ಲೈನ್​ನಲ್ಲಿ ನಿಂತಿದ್ದ ಗೂಡ್ಸ್​ ರೈಲಿಗೆ ಡಿಕ್ಕಿ ಹೊಡೆದಿತು. ಇದರ ರಭಸಕ್ಕೆ ಗೂಡ್ಸ್​ ಮತ್ತು ಕೋರಮಂಡಲ್​ ರೈಲಿನ ಬೋಗಿಗಳು ಮತ್ತೊಂದು ಹಳಿಯ ಮೇಲೆ ಬಿದ್ದಿದ್ದವು.

ಅದೇ ಸಮಯಕ್ಕೆ ವಿರುದ್ಧ ದಿಕ್ಕಿನಿಂದ ಎಸ್‌ಎಂವಿಪಿ-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಯಶವಂತಪುರದಿಂದ ಬಂದ ಹೌರಾ ಎಕ್ಸ್​ಪ್ರೆಸ್​ ಹಳಿ ಮೇಲೆ ಬಿದ್ದಿದ್ದ ಬೋಗಿಗಳಿಗೆ ವೇಗವಾಗಿ ಡಿಕ್ಕಿಯಾಗಿತ್ತು. ಇದರಿಂದ ಸ್ಥಳದಲ್ಲಿ ಭೀಕರತೆ ಉಂಟಾಗಿತ್ತು. ಮೂರು ರೈಲುಗಳ ನಡುವಿನ ತಿಕ್ಕಾಟದಲ್ಲಿ ಈವರೆಗೆ 300 ಜನರು ಪ್ರಾಣ ಕಳೆದುಕೊಂಡಿದ್ದಾರೆ.

ಇದಲ್ಲದೇ ಈ ಮೂವರು ಆರೋಪಿಗಳು ಅಪಘಾತಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ಮರೆಮಾಚಲು ಪ್ರಯತ್ನಿಸಿದರು ಎಂದು ವರದಿಗಳು ತಿಳಿಸಿವೆ. ಮಂಗಳವಾರ 5 ದಿನಗಳ ರಿಮಾಂಡ್ ಮುಗಿದ ನಂತರ, ಮೂವರು ಉದ್ಯೋಗಿಗಳನ್ನು ಇಲ್ಲಿನ ಸಿಬಿಐ ನಿಯೋಜಿತ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ಉತ್ತರ ಸಿಗ್ನಲ್ ಗೂಮ್ಟಿಯಲ್ಲಿ (ನಿಲ್ದಾಣದ) ಸಿಗ್ನಲಿಂಗ್ ಸರ್ಕ್ಯೂಟ್ ಬದಲಾವಣೆಯಲ್ಲಿ ಲೋಪದಿಂದಾಗಿ ಬಹನಾಗ ನಿಲ್ದಾಣದಲ್ಲಿ ಮಾರಣಾಂತಿಕ ರೈಲು ಅಪಘಾತ ಸಂಭವಿಸಿದೆ ಎಂದು ಆಗ್ನೇಯ ವೃತ್ತದ ರೈಲ್ವೆ ಸುರಕ್ಷತಾ ಆಯುಕ್ತರು (ಸಿಆರ್‌ಎಸ್) ತನಿಖಾ ವರದಿಯಲ್ಲಿ ತಿಳಿಸಿದ್ದಾರೆ.