ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ವತಿಯಿಂದ 30ಕ್ಕೂ ಅಧಿಕ ಅಶಕ್ತ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ

ಉಡುಪಿ: ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ವತಿಯಿಂದ ಕೊರೊನಾ ಗೆಲ್ಲೋಣ ಅಭಿಯಾನದಡಿ ಅತೀ ಅಗತ್ಯವಿರುವ 30ಕ್ಕೂ ಅಧಿಕ ನೊಂದ ಕುಟುಂಬಗಳಿಗೆ ದಿನಸಿ ಕಿಟ್ ಗಳನ್ನು ಶನಿವಾರ ಸಂಸ್ಥೆಯ ಕಚೇರಿಯಲ್ಲಿ ಸಾಂಕೇತಿಕವಾಗಿ ವಿತರಿಸಲಾಯಿತು.

ಈ ವೇಳೆ ಮಾತನಾಡಿದ ಕೆಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ಆಧ್ಯಾತ್ಮಿಕ ನಿರ‍್ದೇಶಕರಾದ ಅತಿ ಫರ‍್ಡಿನಾಂಡ್ ಗೊನ್ಸಾಲ್ವಿಸ್ ಕೆಥೊಲಿಕ್ ಸಭಾ ವತಿಯಿಂದ ಕೊರೋನಾ ಗೆಲ್ಲೋಣ ಅಭಿಯಾನದಡಿ ನೊಂದವರಿಗೆ ಸಾಂತ್ವಾನ ಸಹಾಯ ಮಾಡುವ ಕೆಲಸ ಶ್ಲಾಘನೀಯ ಇದು ಹೀಗೆ ಮುಂದುವರೆಯಲಿ. ನೊಂದ ಕುಟುಂಬಗಳಿಗೆ ಆಸರೆ ಸಹಾಯ ನೀಡುವ ಕಾರ‍್ಯ ದೇವರಿಗೆ ಮೆಚ್ಚುಗೆಯಾಗಲಿದೆ ಎಂದರು.

ಕಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ಅಧ್ಯಕ್ಷೆ ಮೇರಿ ಡಿಸೋಜಾ ಮಾತನಾಡಿ, ಕೆಥೊಲಿಕ್ ಸಭಾ ಇಂದು ಸಮಾಜದಲ್ಲಿ ಅತೀ ಹೆಚ್ಚು ನೊಂದ ಕುಟುಂಬಗಳನ್ನು ಗುರುತಿಸಿ ಇಂದು ಕಿಟ್ ವಿತರಣೆ ಮಾಡಲಾಗಿದೆ. ಈಗಾಗಲೇ ಕಥೊಲಿಕ್ ಸಭಾ ನೇತೃತ್ವದಲ್ಲಿ ಉಡುಪಿ ಧರ‍್ಮಪ್ರಾಂತ್ಯದ 52 ಘಟಕಗಳಲ್ಲಿ ಕೂಡ ಲಾಕ್ ಡೌನ್ ಸಂದರ‍್ಭದಲ್ಲಿ ಸಮಸ್ಯೆಯಲ್ಲಿ ಇರುವ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆಯಾಗುತ್ತಿದೆ. ಸುಮಾರು 1000ಕ್ಕೂ ಅಧಿಕ ಕಿಟ್ ಗಳು ಉಡುಪಿ ಧರ‍್ಮಪ್ರಾಂತ್ಯದ ವ್ಯಾಪ್ತಿಯಲ್ಲಿ ಪ್ರತಿ ಘಟಕಗಳ ಮೂಲಕ ವಿತರಣೆಯಾಗುತ್ತಿದೆ. ಅಲ್ಲದೆ ಪ್ರತಿಯೊಬ್ಬರೂ ಕೂಡ ಲಸಿಕೆ ಪಡೆಯುವಂತೆ ಪ್ರೇರೆಪಿಸಲಾಗುತ್ತಿದೆ. ಸಂಘಟನೆಯ ವತಿಯಿಂದ ಮುಂದೆಯೂ ಇಂತಹ ಕಾರ್ಯಕ್ರಮ ನಿರಂತರವಾಗಿ ನಡೆಯಲಿದೆ ಎಂದರು.

ಫಲಾನುಭವಿಗಳ ಪರವಾಗಿ ಸಂಜೀವ ವಂಡ್ಸೆ ಅವರು ಕಿಟ್ ಪಡೆದುಕೊಂಡು ಸಂಬಂಧಿತ ವ್ಯಕ್ತಿಗಳಿಗೆ ತಲುಪಿಸುವ ಜವಾಬ್ದಾರಿಯನ್ನು ವಹಿಸಿಕೊಂಡರು.
ಈ ವೇಳೆ ಉಡುಪಿ ವಲಯ ಪ್ರಧಾನ ಧರ್ಮಗುರು ಚಾರ್ಲ್ಸ್ ಮೀನೆಜಸ್, ಸಂಘಟನೆಯ ಪ್ರಧಾನ ಕಾರ್ಯದರ್ಶಿ ಗ್ರೆಗೋರಿ ಪಿಕೆ ಡಿಸೋಜಾ, ನಿಯೋಜಿತ ಅಧ್ಯಕ್ಷ ಸಂತೋಷ್ ಕರ್ನೆಲಿಯೊ, ಮಾಜಿ ಅಧ್ಯಕ್ಷ ಆಲ್ವಿನ್ ಕ್ವಾಡ್ರಸ್, ವಲೇರಿಯನ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.