ಕೆಥೊಲಿಕ್ ಸಭಾ ಕುಂದಾಪುರ ವಲಯ ವತಿಯಿಂದ ‘ಸೌಹಾರ್ದ ಕ್ರಿಸ್ಮಸ್’ ಸಂಭ್ರಮ

ಕುಂದಾಪುರ : ಕೆಥೊಲಿಕ್ ಸಭಾ ಕುಂದಾಪುರ ವಲಯ ಸಮಿತಿ ಹಾಗೂ ಶೆವೊಟ್ ಪ್ರತಿಷ್ಠಾನ ವತಿಯಿಂದ ಉಡುಪಿ ಧರ್ಮಪ್ರಾಂತ್ಯದ ಲ್ಯಾಟಿನ್ ಕೆಥೊಲಿಕ್, ಸೀರೊ ಮಲಬಾರ್ ಕೆಥೊಲಿಕ್, ಸಿ.ಎಸ್.ಐ. ಧರ್ಮಸಭೆ, ಅರ್ಥೊಡ್ಯಾಕ್ಸ್ ಸೀರಿಯನ್ ಹಾಗೂ ಸಮಾಜದ ಇತರ ಬಾಂಧವರೊಂದಿಗೆ “ಕ್ರಿಸ್ಮಸ್ ಸೌಹಾರ್ದ” ಕಾರ್ಯಕ್ರಮ ಬಸ್ರೂರು ಸಂತ ಫಿಲಿಪ್ ನೇರಿ ಚರ್ಚ್ ಸಭಾ ಭವನದಲ್ಲಿ ಭಾನುವಾರ ಆಯೋಜಿಸಲಾಗಿತ್ತು.

ಕ್ರಿಸ್ಮಸ್ ಸೌಹಾರ್ದ ಕಾರ್ಯಕ್ರಮವನ್ನು ಬಸ್ರೂರು ಸಂತ ಫಿಲಿಪ್ ನೇರಿ ಚರ್ಚಿನ ಧರ್ಮಗುರು ಚಾರ್ಲ್ಸ್ ನೊರೋನ್ಹಾ ಉದ್ಘಾಟಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಚಾರ್ಲ್ಸ್ ನೊರೋನ್ಹಾ, ಯೇಸು ಸ್ವಾಮಿ ಶಾಂತಿಯ ಸಂದೇಶವನ್ನು ಜಗತ್ತಿಗೆ ನೀಡಿದರು. ಅವರು ಭೂಲೋಕಕ್ಕೆ ಬಂದಾಗ ಜನರಿಗೆ ಶಾಂತಿ, ಸಮಾಧಾನ ಮತ್ತು ಸೌಹಾರ್ದತೆಯ ಸಂದೇಶವನ್ನು ಸಾರಿದರು.

ಅವರು ತಮ್ಮ ಭೋದನೆಯಿಂದ ಮಾತ್ರವಲ್ಲ ಬದಲಾಗಿ ತಮ್ಮ ಕೃತಿಯಿಂದ ಕೂಡ ಶಾಂತಿಯ ಸಂದೇಶವನ್ನು ಜಗತ್ತಿಗೆ ಪಸರಿಸಿದರು. ಅದೇ ಸಂದೇಶವನ್ನು ತಮ್ಮ ಅನುಯಾಯಿಗಳಿಗೂ ನೀಡಿದ ಮಹಾನ್ ಪುರುಷ ಯೇಸು ಸ್ವಾಮಿ. ಯೇಸುವಿನ ಹಿಂಬಾಲಕರಾದ ಪ್ರತಿಯೊಬ್ಬ ಕ್ರೈಸ್ತರು ಕೂಡ ಕ್ಷಮೆ, ಪ್ರೀತಿ, ಮತ್ತು ಶಾಂತಿಯ ಸಂದೇಶವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಉಡುಪಿ ಸಿಎಸ್ ಐ ಸಭೆಯ ಮಾಜಿ ವಲಯಾಧ್ಯಕ್ಷ ಸ್ಟೀವನ್ ಸರ್ವೋತ್ತಮ, ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕರಾದ ಜಯಪ್ರಕಾಶ್ ಶೆಟ್ಟಿ, ಬಸ್ರೂರು ಸರಕಾರಿ ಉರ್ದು ಶಾಲೆಯ ಅಧ್ಯಕ್ಷ ಅಬ್ದುಲ್ ಅಜೀಜ್ ಕ್ರಿಸ್ಮಸ್ ಸಂದೇಶ ನೀಡಿದರು.

ಇದೇ ವೇಳೆ ವಲಯ ವ್ಯಾಪ್ತಿಯ 7 ಕುಟುಂಬಗಳಿಗೆ ವೈದ್ಯಕೀಯ ಹಾಗೂ ಮನೆ ಕಟ್ಟಲು ನೆರವನ್ನು ಹಸ್ತಾಂತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆಥೊಲಿಕ್ ಸಭಾ ಕುಂದಾಪುರ ವಲಯ ಅಧ್ಯಕ್ಷೆ ಮೇಬಲ್ ಡಿಸೋಜಾ ವಹಿಸಿದ್ದರು.

ಕೃಪಾ ಚರ್ಚ್ ಕುಂದಾಪುರ ಇದರ ಉಸ್ತುವಾರಿಗಳಾದ ಜೊಯೆಲ್ ಸುಹಾಸ್, ಕೆಥೊಲಿಕ್ ಸಭಾ ಕುಂದಾಪುರ ವಲಯ ಕಾರ್ಯದರ್ಶಿ ಮೆಲ್ವಿನ್ ಫುರ್ಟಾಡೊ, ಕಾರ್ಯಕ್ರಮ ಸಂಚಾಲಕರಾದ ಪ್ರೀತಮ್ ಡಿಸೋಜಾ, ಸಹ ಸಂಚಾಲಕ ಜೀವನ್ ಸಾಲಿನ್ಸ್, ಮಾಜಿ ಅಧ್ಯಕ್ಷ ವಿನೋದ್ ಕ್ರಾಸ್ಟೋ, ಹೆರಿಕ್ ಗೊನ್ಸಾಲ್ವಿಸ್ ಹಾಗೂ ಇತರರು ಉಪಸ್ಥಿತರಿದ್ದರು.