ಉಡುಪಿ ಅನುಮತಿ ಇಲ್ಲದೆ ರಸ್ತೆ ತಡೆ ನಡೆಸಿ ಪ್ರತಿಭಟನೆ: 11 ಮಂದಿ ಪಿಎಫ್ಐ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲು

ಉಡುಪಿ: ದೇಶಾದ್ಯಂತ ಪಿಎಫ್ಐ ಕಚೇರಿಗಳ ಮೇಲೆ ಎನ್.ಐ.ಎ ದಾಳಿ ನಡೆಸಿದ ಹಿನ್ನೆಲೆಯಲ್ಲಿ ನಿನ್ನೆ ಸಂಜೆ ನಗರದಲ್ಲಿ ಅನುಮತಿ ಇಲ್ಲದೆ ಪ್ರತಿಭಟನೆ ಮಾಡಿದ ಹಿನ್ನೆಲೆಯಲ್ಲಿ 11 ಮಂದಿ ಪಿ.ಎಫ್.ಐ ಕಾರ್ಯಕರ್ತರ ವಿರುದ್ಧ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗುರುವಾರ ಸಂಜೆ ಪೂರ್ವಾನುಮತಿ ಪಡೆಯದೆ ಪ್ರತಿಭಟನೆ ನಡೆಸಿದ್ದಲ್ಲದೆ ರಸ್ತೆ ತಡೆ ನಡೆಸಿದ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ನಗರದ ಕಲ್ಪನಾ ಟಾಕೀಸ್ ಬಳಿ ಗುರುವಾರ ಸಂಜೆ ಪ್ರತಿಭಟನೆ ನಡೆಸಿದ ಪಿ.ಎಫ್.ಐ ಕಾರ್ಯಕರ್ತರು ರಸ್ತೆ ತಡೆಗೆ ಯತ್ನಿಸಿದಾಗ ಉಡುಪಿ ನಗರ ಪೊಲೀಸರು ಲಾಠಿ ಚಾರ್ಚ್‌ ನಡೆಸಿದ್ದಾರೆ. ಕೋರ್ಟ್ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು “ಎನ್.ಐ.ಎ ಗೋ ಬ್ಯಾಕ್” ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದರು. ಪಿಎಫ್.ಐ ಕಾರ್ಯಕರ್ತರ ಪ್ರತಿಭಟನೆ ಹಿನ್ನೆಲೆಯಲ್ಲಿ ನಗರದಲ್ಲಿ ವಾಹನ ಸಂಚಾರಕ್ಕೆ ತೊಡಕು ಉಂಟಾಗಿದ್ದು, ಪೊಲೀಸರು ಪ್ರತಿಭಟನಾಕಾರರ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.

ಸಾದಿಕ್ ಅಹಮ್ಮದ್, ಅಪ್ರೋಜ್ ಕೆ, ಇಲಿಯಾಸ್ ಸಾಹೇಬ್, ಇರ್ಷಾದ್ ಫಯಾಸ್ ಅಹಮ್ಮದ್, ಮಹಮ್ಮದ್ ಆಶ್ರಫ್, ಹಾರೂನ್ ರಶೀದ್, ಮಹಮ್ಮದ್ ಜುರೈಜ್, ಇಶಾಕ್ ಕಿದ್ವಾಯ್, ಶೌಖತ್ ಆಲಿ, ಮಹಮ್ಮದ್ ಜಹೀರ್ ಎಂಬವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.