ನವದೆಹಲಿ: ಮನೆ ಕೆಲಸದಾಕೆಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಶಾಸಕ ಹಾಗೂ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರಿಗೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ. ಈ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ಆದೇಶ ನೀಡಿದೆ.
ನ್ಯಾಯಮೂರ್ತಿ ಜೆ.ಬಿ. ಪಾರ್ದಿವಾಲಾ ನೇತೃತ್ವದ ಪೀಠವು ಪ್ರಕರಣದ ವಿಚಾರಣೆ ನಡೆಸಿ, ರೇವಣ್ಣ ವಿರುದ್ಧದ ಆರೋಪಗಳನ್ನು ಬದಲಾಯಿಸಿದ್ದ ಹೈಕೋರ್ಟ್ ಆದೇಶದ ಬಗ್ಗೆ ಪ್ರಶ್ನೆ ಎತ್ತಿದೆ. ಮನೆ ಕೆಲಸದಾಕೆಯ ಮೇಲಿನ ಹಲ್ಲೆ ಆರೋಪವನ್ನು ರದ್ದುಗೊಳಿಸಿ, ಲೈಂಗಿಕ ದೌರ್ಜನ್ಯ ಆರೋಪದ ತನಿಖೆಗೆ ಮಾತ್ರ ಅವಕಾಶ ನೀಡಿದ್ದ ಹೈಕೋರ್ಟ್ ಕ್ರಮವನ್ನು ನ್ಯಾಯಪೀಠ ಪರಿಶೀಲನೆಗೆ ಒಳಪಡಿಸಿದೆ.
ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರ ಸೇರಿದಂತೆ ಗಂಭೀರ ಆರೋಪಗಳಿದ್ದು, ಎಚ್.ಡಿ. ರೇವಣ್ಣ ವಿರುದ್ಧವೂ ಪ್ರತ್ಯೇಕ ಆರೋಪಗಳಿರುವ ಸಂದರ್ಭದಲ್ಲಿ ಹೈಕೋರ್ಟ್ ಯಾವ ಆಧಾರದ ಮೇಲೆ ಆರೋಪಗಳನ್ನು ಬದಲಾಯಿಸಿತು ಎಂಬುದರ ಕುರಿತು ವಿವರಣೆ ನೀಡುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ.
ಇದೇ ವೇಳೆ, ಹೈಕೋರ್ಟ್ ತೀರ್ಪು ಪ್ರಕಟವಾದ ಹಲವು ತಿಂಗಳ ಬಳಿಕ ಮೇಲ್ಮನವಿ ಸಲ್ಲಿಸಿದ ರಾಜ್ಯ ಸರ್ಕಾರದ ನಡೆಗೂ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. 2025ರ ಡಿಸೆಂಬರ್ನಲ್ಲಿ ಹೈಕೋರ್ಟ್ ತೀರ್ಪು ನೀಡಿದ್ದರೂ, ಮೇಲ್ಮನವಿ ಸಲ್ಲಿಸಲು ಇಷ್ಟು ವಿಳಂಬವಾದದ್ದು ಏಕೆ ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದೆ.
ಪ್ರಕರಣದ ಹಿನ್ನೆಲೆ
2024ರ ಏಪ್ರಿಲ್ 28ರಂದು ಹೊಳೆನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ, ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಹಾಗೂ ಅವರ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಎಚ್.ಡಿ. ರೇವಣ್ಣ ಹಾಗೂ ಅವರ ಪುತ್ರ, ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ಮುಂದುವರಿದಿದ್ದು, ಇದೀಗ ರಾಜ್ಯ ಸರ್ಕಾರದ ಮೇಲ್ಮನವಿಯ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ವಿಚಾರಣೆ ಆರಂಭಿಸಿದೆ.















