ಜೈಲ್ ನಲ್ಲಿ ಮೊಬೈಲ್ ಫೋನ್ ಪತ್ತೆ ಪ್ರಕರಣ: ಪ್ರಜ್ವಲ್ ರೇವಣ್ಣ ವಿರುದ್ಧ ಎಫ್‌ಐಆರ್ ದಾಖಲು!

ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಸೆಲ್‌ನಲ್ಲಿ ಮೊಬೈಲ್ ಫೋನ್ ಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿದೆ.

ಸಿಸಿಬಿ ಅಧಿಕಾರಿಗಳು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಡೆಸಿದ ಶೋಧ ಕಾರ್ಯಾಚರಣೆ ವೇಳೆ ಮೊಬೈಲ್ ಫೋನ್ ಸೇರಿದಂತೆ ಹಲವು ವಸ್ತುಗಳು ಪತ್ತೆಯಾಗಿವೆ. ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿಬಿ ಇನ್ಸ್‌ಪೆಕ್ಟರ್ ಸುಬ್ರಮಣ್ಯಸ್ವಾಮಿ ಅವರು ದೂರು ನೀಡಿದ್ದಾರೆ.

ಶೋಧದ ವೇಳೆ ಏನೆಲ್ಲ ಪತ್ತೆ?

ಬೆಂಗಳೂರು ನಗರ ಅಪರ ಪೊಲೀಸ್ ಆಯುಕ್ತರ ಸೂಚನೆಯಂತೆ ಕಾರಾಗೃಹದ ವಿವಿಧ ಬ್ಯಾರಕ್‌ಗಳಲ್ಲಿ ಅಕ್ರಮವಾಗಿ ಇಟ್ಟುಕೊಂಡಿರುವ ಮೊಬೈಲ್ ಫೋನ್‌ಗಳು, ಮಾದಕ ವಸ್ತುಗಳು ಹಾಗೂ ಇತರ ನಿಷೇಧಿತ ವಸ್ತುಗಳ ಪತ್ತೆಗಾಗಿ ಶೋಧ ನಡೆಸಲಾಗಿತ್ತು.

ಸಿಸಿಬಿ ಅಧಿಕಾರಿಗಳು ಮಧ್ಯಾಹ್ನ 2.05ರಿಂದ ರಾತ್ರಿ 9 ಗಂಟೆಯವರೆಗೆ ಭದ್ರತಾ ವಿಭಾಗ 1ರಿಂದ 3ರವರೆಗೆ ಶೋಧ ನಡೆಸಿದ್ದಾರೆ. ಈ ವೇಳೆ ಭದ್ರತಾ ವಿಭಾಗ-3ರ ಮೊದಲ ಮಹಡಿಯ ರೂಂ ನಂಬರ್ 4ರಲ್ಲಿ ತಿಳಿ ನೀಲಿ ಬಣ್ಣದ ಮೊಬೈಲ್ ಫೋನ್, ನೀಲಿ ಬಣ್ಣದ ನೋಟ್‌ಬುಕ್ ಹಾಗೂ ಕಪ್ಪು ಬಣ್ಣದ ಸ್ಯಾನ್‌ಡಿಸ್ಕ್ ಪೆನ್‌ಡ್ರೈವ್ ಪತ್ತೆಯಾಗಿದೆ.

ಮೊಬೈಲ್ ಯಾರದ್ದು?

ಕೊಠಡಿಯಲ್ಲಿದ್ದ ಕೈದಿಗಳನ್ನು ವಿಚಾರಿಸಿದಾಗ, ಅಲ್ಲಿ ಪ್ರಜ್ವಲ್ ರೇವಣ್ಣ ಹಾಗೂ ವಿಚಾರಣಾ ಖೈದಿ ಪ್ರತಾಪ್ ರೈ ಇದ್ದರು ಎನ್ನಲಾಗಿದೆ. ಪತ್ತೆಯಾದ ವಸ್ತುಗಳ ಕುರಿತು ವಿಚಾರಿಸಿದಾಗ, ನೋಟ್‌ಬುಕ್ ತನ್ನದು ಎಂದು ಪ್ರಜ್ವಲ್ ರೇವಣ್ಣ, ಮೊಬೈಲ್, ಚಾರ್ಜರ್ ಹಾಗೂ ಪೆನ್‌ಡ್ರೈವ್ ತನ್ನದು ಎಂದು ಪ್ರತಾಪ್ ರೈ ತಿಳಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಮೊಬೈಲ್ ಅನ್ನು ಸಂಬಂಧಿಕರು ಹಾಗೂ ವಕೀಲರಿಗೆ ಕರೆ ಮಾಡಲು ಬಳಸುತ್ತಿದ್ದುದಾಗಿ ಇಬ್ಬರೂ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

ಮೊಬೈಲ್‌ನಲ್ಲಿ ಹಲವು ಆ್ಯಪ್‌ಗಳು

ಪೊಲೀಸರು ಮೊಬೈಲ್ ಪರಿಶೀಲಿಸಿದಾಗ ಅದರಲ್ಲಿ ಫೇಸ್‌ಬುಕ್, ವಾಟ್ಸ್‌ಆ್ಯಪ್, ಇನ್‌ಸ್ಟಾಗ್ರಾಂ, ನೆಟ್‌ಫ್ಲಿಕ್ಸ್ ಹಾಗೂ ಪ್ರೈಮ್ ವಿಡಿಯೋ ಸೇರಿದಂತೆ ಹಲವು ಅಪ್ಲಿಕೇಷನ್‌ಗಳು ಇರುವುದು ಪತ್ತೆಯಾಗಿದೆ. ಅವು ಪಾಸ್‌ವರ್ಡ್‌ನಿಂದ ರಕ್ಷಿತವಾಗಿದ್ದವು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಅಪ್ಲಿಕೇಷನ್‌ಗಳ ಪಾಸ್‌ವರ್ಡ್‌ಗಳ ಕುರಿತು ವಿಚಾರಿಸಿದಾಗ ಇಬ್ಬರೂ ತಮಗೆ ತಿಳಿದಿಲ್ಲ ಎಂದು ತಿಳಿಸಿದ್ದಾರೆ ಎನ್ನಲಾಗಿದೆ. ಬಳಿಕ ಮೊಬೈಲ್, ಚಾರ್ಜರ್, ಪೆನ್‌ಡ್ರೈವ್ ಹಾಗೂ ನೋಟ್‌ಬುಕ್‌ಗಳನ್ನು ಪಂಚರ ಸಮಕ್ಷಮ ಪಂಚನಾಮೆ ಮೂಲಕ ವಶಕ್ಕೆ ಪಡೆಯಲಾಗಿದೆ.

ಇಬ್ಬರ ವಿರುದ್ಧ ಕ್ರಮಕ್ಕೆ ಮನವಿ

ಕಾರಾಗೃಹದೊಳಗೆ ನಿಷೇಧಿತ ವಸ್ತುಗಳಾದ ಮೊಬೈಲ್ ಫೋನ್, ಪೆನ್‌ಡ್ರೈವ್ ಹಾಗೂ ಚಾರ್ಜರ್ ಸೇರಿದಂತೆ ಇತರ ವಸ್ತುಗಳನ್ನು ಅನಧಿಕೃತವಾಗಿ ಪಡೆದು ಬಳಸಿರುವ ಆರೋಪದ ಹಿನ್ನೆಲೆಯಲ್ಲಿ ಪ್ರಜ್ವಲ್ ರೇವಣ್ಣ ಮತ್ತು ಪ್ರತಾಪ್ ರೈ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸಿಸಿಬಿ ಇನ್ಸ್‌ಪೆಕ್ಟರ್ ದೂರಿನಲ್ಲಿ ಮನವಿ ಮಾಡಿದ್ದಾರೆ.

ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.