ಸೆಪ್ಟೆಂಬರ್ 4ರಂದು ಯಶಸ್ವಿ-ಭವಿಷ್ಯದ ಧ್ರುವತಾರೆ ವೃತ್ತಿ ಮಾರ್ಗದರ್ಶನ ಯೋಜನೆ ಉದ್ಘಾಟನೆ

ಉಡುಪಿ: ಇಂದಿನ ದಿನದಲ್ಲಿ ಶಿಕ್ಷಣ ಕ್ಷೇತ್ರದ ವಾಣಿಜ್ಯೀಕರಣ ನಡೆಯುತ್ತಿದ್ದು, ಬಡವರು ಉತ್ತಮ ಶಿಕ್ಷಣದ ಅವಕಾಶದಿಂದ ವಂಚಿತರಾಗುವಂತಹ ಪರಿಸ್ಥಿತಿ ಬಂದೊದಗಿದೆ. ಒಳ್ಳೆಯ ಅಂಕ ಪಡೆದು ಉನ್ನತ ಶಿಕ್ಷಣದ ಕನಸು ಕಾಣುವ ವಿದ್ಯಾರ್ಥಿಗಳು, ಶಿಕ್ಷಣ ಸಂಸ್ಥೆಗಳ ಮಧ್ಯವರ್ತಿಗಳ ಕೈಗೆ ಸಿಲುಕಿ ಲಕ್ಷಾಂತರ ರೂಪಾಯಿ ವ್ಯಯ ಮಾಡುತ್ತಿರುವ ಘಟನೆಗಳು ಹಲವಿವೆ. ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ತರುವ ಮತ್ತು ವಿದ್ಯಾರ್ಥಿಗಳ ಭವಿಷ್ಯಕ್ಕೆ ದಿಕ್ಸೂಚಿಯಾಗುವ ನಿಟ್ಟಿನಲ್ಲಿ ರಾಷ್ಟ್ರೀಯ ಪದವಿ ಪೂರ್ವ ವಿದ್ಯಾರ್ಥಿಗಳ, ಪೋಷಕರ ಮತ್ತು ಶಿಕ್ಷಕರ ಸಂಘ ಮತ್ತು ಕೊಡವೂರು ವಾರ್ಡ್ ಅಭಿವೃದ್ದಿ ಸಮಿತಿ ಜಂಟಿಯಾಗಿ ಯಶಸ್ವಿ- ಭವಿಷ್ಯದ ಧ್ರುವತಾರೆ ಎಂಬ ವೃತ್ತಿ ಮಾರ್ಗದರ್ಶನ ಯೋಜನೆಯನ್ನು ಉದ್ಘಾಟಿಸಲಿದ್ದು, ಈ ಸಂದರ್ಭದಲ್ಲಿ 10 ನೇ ತರಗತಿ ಪರೀಕ್ಷೆಯಲ್ಲಿ 90% ಕ್ಕಿಂತ ಅಧಿಕ ಅಂಕ ಪಡೆದ ಉಡುಪಿ ಜಿಲ್ಲೆಯ 1000ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ನಗರಸಭಾ ಸದಸ್ಯ ವಿಜಯ್ ಕೊಡವೂರು ಹೇಳಿದರು.

ಅವರು ಗುರುವಾರದಂದು ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

ಹತ್ತನೇ ತರಗತಿಯ ನಂತರ ಮುಂದೇನು ಎಂದು ಉದ್ಭವಿಸುವ ಪ್ರಶ್ನೆಗೆ ಯಶಸ್ವಿ- ಭವಿಷ್ಯದ ಧ್ರುವತಾರೆ ವೃತ್ತಿ ಮಾರ್ಗದರ್ಶನವು ಉತ್ತರ ನೀಡಲಿದ್ದು, ಯೋಜನೆಯ ಉದ್ಘಾಟನಾ ಸಮಾರಂಭವು ಸೆಪ್ಟೆಂಬರ್ 4 ಭಾನುವಾರದಂದು ಬೆಳಿಗ್ಗೆ 9.45 ಕ್ಕೆ ಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ. ಇದು ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನ ನೀಡಿ ಅವರ ಭವಿಷ್ಯ ರೂಪಿಸುವ ಜೊತೆಗೆ ದೇಶದ ಅಭಿವೃದ್ದಿಗೆ ಪೂರಕವಾಗುವಂತೆ ಅವರನ್ನು ವೃತ್ತಿ ಜೀವನಕ್ಕೆ ಅಣಿಗೊಳಿಸುವ ಪ್ರಯತ್ನ ಎಂದರು.

ರಾಷ್ಟ್ರೀಯ ಪದವಿ ಪೂರ್ವ ವಿದ್ಯಾರ್ಥಿಗಳ, ಪೋಷಕರ ಮತ್ತು ಶಿಕ್ಷಕರ ಸಂಘದ ಸ್ಥಾಪಕ ಮಿಥೇಶ್ ಕುಮಾರ್ ಮೂಡುಕೊಣಾಜೆ ಮಾತನಾಡಿ, ಅವನಿಯತ್ತ ಸಾಗುತ್ತಿರುವ ಸರ್ಕಾರಿ ಶಾಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ, ಸರ್ಕಾರಿ ಕನ್ನಡ ಶಾಲೆಯ ಮಕ್ಕಳ ಶೈಕ್ಷಣಿಕ ದತ್ತು ಸ್ವೀಕಾರ ಕಾರ್ಯಕ್ರಮ ಮತ್ತು 16ನೇ ಸಾಲಿನ ಉಚಿತ ಗುಂಪು ಅಪಘಾತ ವಿಮೆ ವಿತರಣೆ ಕಾರ್ಯಕ್ರಮವೂ ಜರುಗಲಿದೆ.

2021-22 ಸಾಲಿನ ಶೈಕ್ಷಣಿಕ ವರ್ಷದಲ್ಲಿ ನಡೆದ 10ನೇ ತರಗತಿ ಪರೀಕ್ಷೆಯಲ್ಲಿ 90% ಕ್ಕಿಂತ ಹೆಚ್ಚು ಅಂಕ ಪಡೆದ ಉಡುಪಿ, ಕಾಪು ಮತ್ತು ಬ್ರಹ್ಮಾವರ ತಾಲೂಕಿನ ಎಲ್ಲ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲು ಹೆಸರು ನೋಂದಣಿ (https://forms.gle/k2ryU9tBsuDg2jD88) ಮಾಡಿಸಿಕೊಂಡು ತಮ್ಮ ಆಧಾರ್ ಕಾರ್ಡ್ ಮತ್ತು 10ನೇ ತರಗತಿ ಅಂಕಪಟ್ಟಿಯ ಪ್ರತಿಯೊಂದಿಗೆ ಹಾಗೂ ಪೋಷಕರ ಸಮೇತ ಕಾರ್ಯಕ್ರಮಕ್ಕೆ ಹಾಜರಾಗಿ ಗೌರವಾರ್ಪಣೆ ಸ್ವೀಕರಿಸಬೇಕು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಿಟ್ ಗಳನ್ನು ವಿತರಿಸಲಾಗುವುದು.

ಮೊದಲನೆ ಚರಣದಲ್ಲಿ ಉಡುಪಿ, ಕಾಪು ಮತ್ತು ಬ್ರಹ್ಮಾವರ ತಾಲೂಕಿನ ವಿದ್ಯಾರ್ಥಿಗಳಿಗೆ ಉಡುಪಿಯ ರಾಜಾಂಗಣದಲ್ಲಿ ಸನ್ಮಾನ ಕಾರ್ಯಕ್ರಮವಿದ್ದು, ಮುಂದಿನ ಚರಣಗಳಲ್ಲಿ ಕಾರ್ಕಳ ಮತ್ತು ಕುಂದಾಪುರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಭಾಗವಹಿಸಬಹುದು. ಈ ಬಗ್ಗೆ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ಮುಂಚಿತವಾಗಿ ತಿಳಿಸಲಾಗುವುದು. ವಿದ್ಯಾರ್ಥಿ ವೃತ್ತಿ ಮಾರ್ಗದರ್ಶಕರಾಗಲು ಹಾಗೂ ಸರ್ಕಾರಿ ಶಾಲೆಯ ಮಕ್ಕಳ ಶೈಕ್ಷಣಿಕ ದತ್ತು ಸ್ವೀಕಾರ ಮತ್ತು ಗುಂಪು ಅಪಘಾತ ವಿಮೆಯನ್ನು ಭರಿಸಲು ಇಚ್ಚಿಸುವ ದಾನಿಗಳು ದೂರವಾಣಿ ಸಂಖ್ಯೆ +919137386752 ಅನ್ನು ಸಂಪರ್ಕಿಸುವಂತೆ ತಿಳಿಸಿದರು.

ಪ್ರತಿಕಾಗೋಷ್ಠಿಯಲ್ಲಿ ಸಹ ಸಂಚಾಲಕರಾದ ರಾಧಾಕೃಷ್ಣ ಕೋಟ್ಯಾನ್ ಮಲ್ಪೆ, ಅಶೋಕ್ ಆಚಾರ್ಯ, ಸುಹಾಸ್ ಕೆಂಜೂರು ಮತ್ತು ಪ್ರಣವ್ ಕಾಮತ್ ಉಪಸ್ಥಿತರಿದ್ದರು.