ಸ್ಕೂಟಿಗೆ ಢಿಕ್ಕಿ ಹೊಡೆದು 7 ಕಿ.ಮೀ ಎಳೆದೊಯ್ದು ಯುವತಿಯ ಸಾವಿಗೆ ಕಾರಣವಾಯ್ತು ಕುಡಿದ ಮತ್ತಿನ ವಾಹನ ಚಲಾವಣೆ

ದೆಹಲಿ: ಭಾನುವಾರ ಮುಂಜಾನೆ ದೆಹಲಿಯ ಸುಲ್ತಾನ್‌ಪುರಿಯಲ್ಲಿ ಕಾರೊಂದು ಸ್ಕೂಟಿಗೆ ಢಿಕ್ಕಿ ಹೊಡೆದು ಸುಮಾರು ಏಳು ಕಿಲೋಮೀಟರ್‌ಗಳವರೆಗೆ ಎಳೆದೊಯ್ದ ಪರಿಣಾಮ 20 ವರ್ಷದ ಯುವತಿಯೊಬ್ಬರು ಸಾವನ್ನಪ್ಪಿದ್ದಾರೆ. ಅಪಘಾತದ ಸಮಯದಲ್ಲಿ ಮದ್ಯದ ಅಮಲಿನಲ್ಲಿದ್ದ ದೀಪಕ್ ಖನ್ನಾ (26), ಅಮಿತ್ ಖನ್ನಾ (25), ಕ್ರಿಶನ್ (27), ಮಿಥುನ್ (26) ಮತ್ತು ಮನೋಜ್ ಮಿತ್ತಲ್ (27) ಈ ಐವರನ್ನು ನಿರ್ಲಕ್ಷದ ಸಾವಿಗೆ ಕಾರಣರಾದ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಭೀಕರ ಅಪಘಾತಕ್ಕೆ ಸಂಬಂಧಿಸಿದಂತೆ ದೆಹಲಿ ಮಹಿಳಾ ಆಯೋಗವು ದೆಹಲಿ ಪೊಲೀಸರಿಗೆ ನೋಟಿಸ್ ಜಾರಿಗೊಳಿಸಿದೆ.

ರೋಹಿಣಿ ಜಿಲ್ಲೆಯ ಕಂಜಾವಾಲಾ ಪೊಲೀಸ್ ಠಾಣೆಗೆ ಮುಂಜಾನೆ 3.20 ರ ಸುಮಾರಿಗೆ ಕುತುಬ್‌ಗಢದ ಕಡೆಗೆ ಹೋಗುತ್ತಿರುವ ಬೂದು ಬಣ್ಣದ ಮಾರುತಿ ಬಲೆನೊದ ಅಡಿಯಲ್ಲಿ ದೇಹವನ್ನು ಎಳೆದುಕೊಂಡು ಹೋಗುತ್ತಿರುವ ಕುರಿತು ಕರೆ ಬಂದಿದೆ ಎಂದು ವಿಶೇಷ ಪೊಲೀಸ್ ಕಮಿಷನರ್ (ಕಾನೂನು ಮತ್ತು ಸುವ್ಯವಸ್ಥೆ, ವಲಯ 1) ದೀಪೇಂದ್ರ ಪಾಠಕ್ ತಿಳಿಸಿದ್ದಾರೆ.

woman dragged by car in delhi

ರೋಹಿಣಿ ಜಿಲ್ಲೆಯ ಪೊಲೀಸರು ಕರೆಯನ್ನು ಪರಿಶೀಲಿಸುತ್ತಿದ್ದಾಗ ಇನ್ನೊಬ್ಬ ವ್ಯಕ್ತಿ ಬೆಳಿಗ್ಗೆ 4.11 ರ ಸುಮಾರಿಗೆ ಕರೆ ಮಾಡಿ ಕಾಂಝವಾಲಾ ಮುಖ್ಯ ರಸ್ತೆಯಲ್ಲಿ ಮಹಿಳೆಯ ಶವ ಬಿದ್ದಿರುವುದನ್ನು ಪೊಲೀಸರಿಗೆ ತಿಳಿಸಿದ್ದಾರೆ.

ಸುಲ್ತಾನ್‌ಪುರಿ ಠಾಣೆಯ ಪೊಲೀಸ್ ತಂಡವು ಸ್ಥಳಕ್ಕೆ ಧಾವಿಸಿದಾಗ, ಮಹಿಳೆಯ ಬಟ್ಟೆಯಿಲ್ಲದ ಮತ್ತು ಮುರಿದ ಕೈಕಾಲುಗಳ ಶವವನ್ನು ಕಂಡು ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಕೊಲೆ ಮಾಡಲಾಗಿದೆ ಎಂಬ ಅನುಮಾನ ವ್ಯಕ್ತಪಡಿಸಿದರು. ಆದರೆ, ಆ ಬಳಿಕ ಇದು ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆಯಿಂದ ಸಾವಿಗೆ ಕಾರಣವಾದ ಪ್ರಕರಣ ಎಂದು ತಿಳಿದುಬಂದಿದೆ. ಸ್ಕೂಟಿಗೆ ಢಿಕ್ಕಿ ಹೊಡೆದಾಗ ಕಾರಿನ ಚಕ್ರವೊಂದರಲ್ಲಿ ಯುವತಿಯ ಕಾಲು ಸಿಲುಕಿಕೊಂಡಿದೆ ಪರಿಣಾಮವಾಗಿ, ಕಾರು ಅವಳನ್ನು ಸುಮಾರು ಏಳು ಕಿಲೋಮೀಟರ್ ಎಳೆದೊಯ್ದಿದೆ. ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ದೇಹವನ್ನು ಮಂಗೋಲ್ಪುರಿಯ ಸಂಜಯ್ ಗಾಂಧಿ ಸ್ಮಾರಕ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಶವಾಗಾರದಲ್ಲಿ ಸಂರಕ್ಷಿಸಲಾಗಿದೆ ಎಂದು ಪಾಠಕ್ ಹೇಳಿದ್ದಾರೆ.

ಮೃತರನ್ನು ಅಮನ್ ವಿಹಾರ್ ನಿವಾಸಿ ಅಂಜಲಿ ಕುಮಾರಿ ಎಂದು ಗುರುತಿಸಲಾಗಿದ್ದು, ಆಕೆ ಮದುವೆ ಕಾರ್ಯಕ್ರಮಗಳು ಮತ್ತು ಇತರ ಕಾರ್ಯಕ್ರಮಗಳಲ್ಲಿ ಬ್ಯೂಟಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು. ಲಭ್ಯವಿರುವ ವಿವರಗಳ ಪ್ರಕಾರ, ಮಹಿಳೆ ಅಂತಹ ಒಂದು ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿರುವುದಾಗಿ ಹಿಂದುಸ್ತಾನ್ ಟೈಮ್ಸ್ ವರದಿ ಮಾಡಿದೆ.