ಮಾ: 16: ಇತಿಹಾಸ ಪ್ರಸಿದ್ಧ ಪೆರ್ಡೂರಿನ ಅನಂತಪದ್ಮನಾಭನಿಗೆ ಶ್ರೀಮನ್ಮಹಾರಥೋತ್ಸವದ ಸಂಭ್ರಮ

ಪೆರ್ಡೂರು: ಇತಿಹಾಸ ಪ್ರಸಿದ್ಧ ಪೆರ್ಡೂರಿನ ಅನಂತಪದ್ಮನಾಭನ ವಾರ್ಷಿಕ ಜಾತ್ರ ಮಹೋತ್ಸವಗಳು ವೈಭವದಿಂದ ಜರಗುತ್ತಿದ್ದು, ಮಾ.16 ರಂದು ಶ್ರೀಮನ್ಮಹಾರಥೋತ್ಸವದ ಕಾರ್ಯಗಳು ಜರಗಲಿವೆ.

ಇತಿಹಾಸ ಪ್ರಸಿದ್ಧ ಪೆರ್ಡೂರಿನ ಅನಂತಪದ್ಮನಾಭ ಮೂರ್ತಿಯನ್ನು ಕಪ್ಪುಕಲ್ಲಿನಲ್ಲಿ ಕೆತ್ತಲಾಗಿದ್ದು, ಸುಮಾರು ಮೂರು ಅಡಿ ಎತ್ತರದ ಈ ಮೂರ್ತಿ ನಿಂತ ಭಂಗಿಯಲ್ಲಿದ್ದು ಶಂಖಚಕ್ರ ಗದಾಪದ್ಮಧಾರಿಯಾಗಿದೆ. ಹೊಕ್ಕುಳಿನ ಭಾಗದಲ್ಲಿ ಪದ್ಮದ ಚಿಹ್ನೆಗಳಿವೆ. ವಿಗ್ರಹದ ಮೇಲ್ಭಾಗದ ಸುತ್ತ ನಾಗದೇವರ ಹೆಡೆ ಚಿತ್ರಿಸಲಾಗಿದೆ.

ಹಿಂದುಗಳ ಪವಿತ್ರ ಕ್ಷೇತ್ರವಾದ ತಿರುಮಲವಾಸ ತಿಮ್ಮಪ್ಪನ ಹರಕೆ, ಧರ್ಮಸ್ಥಳ ಮಂಜುನಾಥನಿಗೆ ತಪ್ಪು ಕಾಣಿಕೆಗಳನ್ನು ಇಲ್ಲಿಯೂ ಹಾಕಬಹುದು ಎಂಬ ನಂಬಿಕೆಯು ಇದೆ. ರೋಗ ರುಜಿನಗಳಿಗೆ ಸಂತಾನ ಭಾಗ್ಯಕ್ಕೆ, ಆರೋಗ್ಯ, ಸಿರಿ ಸಂಪತ್ತಿಗೆ ವೀಳ್ಯದೆಲೆ ಸೇವೆ, ದೋಷ ಪರಿಹಾರಕ್ಕೆ ಎಳ್ಳೆಣ್ಣೆ ಸೇವೆ ನಡೆಯುತ್ತಿದೆ.

ದೇವರ ಮೂಲ ಬಿಂಬದ ಎಢಬಾಗದಲ್ಲಿ ಎರಡು ಮೂರ್ತಿಗಳಿದ್ದು ಎರಡು ಬಲಿ ಮೂರ್ತಿಗಳು ಒಂದೆ ರೀತಿಯಲ್ಲಿ ಕಾಣಸಿಗುವುದು. ಕಮಲದ ಮೇಲೆ ನಿಂತ ಅನಂತ ಪದ್ಮನಾಭನ ನಾಭಿಯಲ್ಲಿ ಪದ್ಮ, ಕೈಯಲ್ಲಿ ಶೇಷಛತ್ರವಿದೆ. ಎದುರುಗಡೆಯ ತೀರ್ಥಮಂಟಪದಲ್ಲಿ ಗಣಪತಿ ಮೂರ್ತಿಯಿದ್ದು, ದೇವಾಲಯದ ಖಡ್ಗರಾವಣನ ಮತ್ತು ಬೊಬ್ಬರ್ಯನ ಹಿಂಬದಿಯಲ್ಲಿ ಪಂಜುರ್ಲಿ ಮತ್ತು ನಂದಿಗೋಣ ನಾಗಬ್ರಹ್ಮ ರಕ್ತೇಶ್ವರಿ, ಹತ್ತಿರದಲ್ಲಿ ಪಂಜುರ್ಲಿ ಗರಡಿಯ ಸಾನಿಧ್ಯವಿದೆ.

ಇಲ್ಲಿ ತಾಳ ವಾದ್ಯವನ್ನು ಪೂಜಿಸುವ ಪ್ರತೀತಿ ಮೊದಲಿನಿಂದಲು ನಡೆದು ಬಂದಿದ್ದು ಭೂಮಿ ಪೂಜೆ ಮಾಡಿ ಮೃತಿಕಾ ನಯನ ಅಂಕುರಾರೋಪಣ ಜರಗುತ್ತದೆ. ಪೂಜಿಸಿ ಬಿತ್ತಿದ ಬೀಜ ಉತ್ಸವದ ದಿನ ಪುಷ್ಪಿತವಾಗುತ್ತದೆ. ಬಳಿಕ ಧ್ವಜಾರೋಹಣ ತದನಂತರ ರಂಗಪೂಜೆ. ನಾಲ್ಕನೇ ದಿನ ವಿಜೃಂಭಣೆಯ ಶ್ರೀಮನ್ಮಹಾರಥೋತ್ಸವ. ಅದೇ ದಿನ ಉತ್ಸವ ಮುಗಿದು ರಾತ್ರಿ ದೇವರನ್ನು ಪತ್ನಿ ಸಮೇತನಾಗಿ ಮಲಗಿಸುವುದೇ ಶಯನೋಲಗ, ಮರುದಿನ ವಿಜೃಂಭಣೆಯಿಂದ ಸರ್ವವಾದ್ಯಗಳಿಂದ ದೇವರನ್ನು ಎಬ್ಬಿಸುವುದು ಕವಾಟೋದ್ಘಾಟನೆ, ಅಂದು ರಾತ್ರಿ ಅಮೃತಸ್ನಾನೋತ್ಸವ, ಧ್ವಜ ಅವರೋಹಣ, ಸೇರಿದಂತೆ ಏಳು ಬಗೆಯ ಉತ್ಸವಗಳಿವೆ.

ಪೆರ್ಡೂರು ಇತಿಹಾಸ: ಹುಲಿಯೂ- ಹಸುವೂ ಸಾಮರಸ್ಯದಿಂದ ಇದ್ದ ಸ್ಥಳವಾಗಿತ್ತು ಎಂದು ಕೆಲವು ಕಥೆಗಳಲ್ಲಿ ಉಲ್ಲೇಖಿಸುತ್ತಾರೆ. ದನ ಮೇಯಿಸುವ ಸಂದರ್ಭದಲ್ಲಿ ಕಪಿಲೆ ದನ ಕಾಣದಾದಾಗ ಯುವಕನೋರ್ವ ತನ್ನ ದನ ಹುಡುಕಿಕೊಂಡು ಬಂದ ಸಂದರ್ಭದಲ್ಲಿ ಹುತ್ತಕ್ಕೆ ಹಾಲನ್ನು ಎರೆಯುತಿದ್ದ ಕಪಿಲೆಯನ್ನು ನೋಡಿ ‘ಪೇರ್ ಉಂಡು’ ಎಂದು ಉದ್ಘರಿಸಿದ ಬಳಿಕ ಪೆರ್ಡೂರು ಎಂದು ಹೆಸರು ಬಂತೆನ್ನಲಾಗುತ್ತದೆ. ಈ ದೇವಾಲಯಕ್ಕೂ ಸೂರಾಲಿನ ಅರಸರಿಗೂ ಅವಿನಾಭಾವ ಸಂಬಂಧವಿದೆ ಎಂಬ ಪ್ರತೀತಿ ಇದೆ.

ಇಲ್ಲಿ ನಿತ್ಯ ಒಂಬತ್ತು ಪೂಜೆಗಳು ನೆರವೇರುತ್ತಿದ್ದು, ಎಬ್ಬಿಸುವ ನಿರ್ಮಾಲ್ಯ ವಿಸರ್ಜನೆ, ಮಲಾಪಕರ್ಷಣ ಸ್ನಾನದ ಬಳಿಕ ಉಷಃಕಾಲ, ಕಲಶ, ಅಲಂಕಾರ, ಮಹಾಪೂಜಾ, ರಾತ್ರಿಪೂಜಾ, ಪೀಠಪೂಜಾ ಇವು ಪ್ರಧಾನ ಪೂಜೆಗಳು. ಸಹಸ್ರನಾಮ ಪೂಜಾ, ದೀಪ ಹಚ್ಚಿದೊಡನೆ ನಡೆಯುವ ದೀಪಪೂಜಾ ವಿಧಿ ವಿಧಾನಗಳೊಂದಿಗೆ ಇಲ್ಲಿ ನಡೆಯುತ್ತದೆ.

ಇಲ್ಲಿ ಮದುಮಕ್ಕಳ ಜಾತ್ರೆ' ವಿಶೇಷವಾಗಿದೆ ಸಂಕ್ರಮಣ ಅಥವಾ ಸಿಂಹ ಸಂಕ್ರಮಣ ಉತ್ಸವದಂದುಮದುಮಕ್ಕಳ ಜಾತ್ರೆ’ ನಡೆಯುತ್ತಿದೆ. ಹೊಸತಾಗಿ ಮದುವೆಯಾದ ಮದುಮಗಳು ತವರಲ್ಲಿ ಆಷಾಢ ಮುಗಿಸಿ ಸೋಣ ಸಂಕ್ರಮಣದಂದು ಪತಿಯೊಂದಿಗೆ ಇಲ್ಲಿಯ ದೇವರ ದರ್ಶನಗೈದು ಗಂಡನಮನೆಗೆ ತೆರಳುವುದು ಸಂಪ್ರದಾಯ.

ಇಲ್ಲಿನ ದೇವರಿಗೆ ಬಾಳೆಹಣ್ಣಿನ ಸೇವೆ ಬಲು ಪ್ರಿಯ. ಗೊನೆಬಾಳೆ ಹಣ್ಣು, ಬುಟ್ಟಿಹಣ್ಣು, ಸಿಬ್ಲ ಹಣ್ಣು, 365 ಹಣ್ಣು, ಸಾವಿರ ಹಣ್ಣುಗಳ ಸೇವೆ ನೀಡಲಾಗುತ್ತದೆ.