ಸಿಎಂ ಮನೆಗೂ ಲಗ್ಗೆಯಿಟ್ಟ ಕೊರೊನಾ: ಹೆಚ್ಚುವರಿ ಕಾರು ಚಾಲಕ, ಸಿಬ್ಬಂದಿಗೆ ಕೊರೊನಾ ಪಾಸಿಟಿವ್: ಯಡಿಯೂರಪ್ಪ ಹೋಮ್ ಕ್ವಾರಂಟೈನ್

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಮತ್ತಷ್ಟು ತಲ್ಲಣ ಸೃಷ್ಟಿಸುತ್ತಿದ್ದು, ದಿನೇ ದಿನೇ ಸೋಂಕಿತರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇದೀಗ ಮುಖ್ಯಮಂತ್ರಿ ಮನೆಗೂ ಕೊರೊನಾ ಕಾಲಿಟ್ಟಿದ್ದು, ಸಿಎಂ ಗೃಹ ಕಚೇರಿ ಕೃಷ್ಣಾದ ಕೆಲವು ಸಿಬ್ಬಂದಿ ಮತ್ತು ಯಡಿಯೂರಪ್ಪನವರ ಹೆಚ್ಚುವರಿ ಚಾಲಕರೊಬ್ಬರಿಗೂ ಕೊರೊನಾ ಸೋಂಕು ಕಾಣಿಸಿಕೊಂಡಿದೆ.
ಈ ಹಿನ್ನೆಲೆಯಲ್ಲಿ ದ್ವಿತೀಯ ಸಂಪರ್ಕಿತರು ಎಂಬ ಕಾರಣಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಮನೆಯಲ್ಲೇ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಇನ್ನು ಕೆಲವು ದಿನಗಳು ಮನೆಯಿಂದಲೇ ಕಾರ್ಯ ನಿರ್ವಹಿಸಲಿದ್ದಾರೆ ಎಂದು ತಿಳಿದುಬಂದಿದೆ.
ಮುಖ್ಯಮಂತ್ರಿಗಳು ನಿರಂತರ ಕಾರ್ಯ ನಿರ್ವಹಿಸುತ್ತಿದ್ದು, ಕಾರ್ಯಭಾರದ ಒತ್ತಡವು ದಿನೇ ದಿನೇ ಹೆಚ್ಚುತ್ತಿದೆ. ಆದ್ದರಿಂದ ವೈದ್ಯರು ಸಿಎಂಗೆ ವಿಶ್ರಾಂತಿ ತೆಗೆದುಕೊಳ್ಳುವಂತೆ ತಿಳಿಸಿದ್ದಾರೆ. ಅಲ್ಲದೆ ಕೆಲವೇ ದಿನಗಳ ಹಿಂದೆ ಸಿಎಂ ಕೋವಿಡ್‌ ಪರೀಕ್ಷೆ ಮಾಡಿಸಿಕೊಂಡಿದ್ದರು. ಅದು ನೆಗೆಟಿವ್‌ ಬಂದಿತ್ತು. ಸೋಮವಾರದ ಬಳಿಕ ಮತ್ತೊಮ್ಮೆ ಪರೀಕ್ಷೆ ಮಾಡಿಸಿಕೊಳ್ಳಲಿದ್ದಾರೆ’ ಎಂಬ ಮಾಹಿತಿ ಹೊರಬಿದ್ದಿದೆ. ಮೂಲಗಳ ಪ್ರಕಾರ ಮುಖ್ಯಮಂತ್ರಿ ಗೃಹ ಕಚೇರಿಯ ದೂರವಾಣಿ ಆಪರೇಟರ್‌, ಇಬ್ಬರು ಎಸ್ಕಾರ್ಟ್‌, ಅಡುಗೆಯವರು ಮತ್ತು ಕಾರು ಚಾಲಕನಿಗೆ ಪಾಸಿಟಿವ್‌ ಆಗಿದೆ. ಸುಮಾರು 10 ಜನರಿಗೆ ಸೋಂಕು ತಗುಲಿದೆ. ಈ ಹಿನ್ನೆಲೆಯಲ್ಲಿ ಕೃಷ್ಣಾ, ಕಾವೇರಿ ನಿವಾಸಗಳನ್ನು ಸ್ಯಾನಿಟೈಸ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಯಾರು ಆತಂಕ ಪಡಬೇಡಿ, ಆರೋಗ್ಯವಾಗಿದ್ದೇನೆ: ಸಿಎಂ
‘ಗೃಹ ಕಚೇರಿ ಕೃಷ್ಣಾದಲ್ಲಿ ಕೆಲ ಸಿಬ್ಬಂದಿಗೆ ಕೋವಿಡ್ ಪಾಸಿಟಿವ್ ಬಂದಿರುವ ಕಾರಣ ಇಂದಿನಿಂದ ಕೆಲ ದಿನಗಳ ಕಾಲ ಮನೆಯಿಂದಲೇ ನನ್ನ ಕರ್ತವ್ಯಗಳನ್ನು ನಿರ್ವಹಿಸಲಿದ್ದೇನೆ. ವೀಡಿಯೋ ಕಾನ್ಫರೆನ್ಸ್ ‌ಮುಖಾಂತರ ಅಗತ್ಯ ಸಲಹೆ ಸೂಚನೆಗಳನ್ನು ನೀಡಲಿದ್ದೇನೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ ಆರೋಗ್ಯವಾಗಿದ್ದೇನೆ ಎಂದು ಸಿಎಂ ಹೇಳಿದ್ದಾರೆ.