ಕೆಂಪುಕೋಟೆ ಬಳಿ ಕಾರು ಸ್ಫೋಟ: ಶಂಕಿತ ಆತ್ಮಹತ್ಯಾ ಬಾಂಬರ್ ಚಿತ್ರ ಬಹಿರಂಗ; ದೆಹಲಿಯಲ್ಲಿ ಹೈ ಅಲರ್ಟ್!

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಕಾರು ಸ್ಫೋಟ ಪ್ರಕರಣ ( Delhi Blast ) ದೇಶಾದ್ಯಂತ ಭಾರಿ ಆತಂಕ ಸೃಷ್ಟಿ ಮಾಡಿದೆ. ಆದ್ದರಿಂದ ಇಡೀ ದೇಶದಲ್ಲಿ ಹೈ ಅಲರ್ಟ್​ ಘೋಷಣೆಯಾಗಿದೆ. ನಿನ್ನೆಯಷ್ಟೇ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬರೋಬ್ಬರಿ 2500 ಕೆಜಿ ತೂಕದ ಮದ್ದುಗುಂಡುಗಳನ್ನು ವಶಕ್ಕೆ ಪಡೆದಿದ್ದರು. ಇದರ ಬೆನ್ನಲ್ಲೇ ಇಂಥದ್ದೊಂದು ದುಷ್ಕೃತ್ಯ ನಡೆದಿರುವುದು ದೇಶದ ಜನರಲ್ಲಿ ಭೀತಿ ಉಂಟಾಗಿದೆ. ದೆಹಲಿ ಸ್ಫೋಟವು ಆತ್ಮಾಹುತಿ ಬಾಂಬ್​ ದಾಳಿ ಎಂದು ಅನುಮಾನಿಸಲಾಗಿದೆ. ಅಲ್ಲದೆ, ಶಂಕಿತ ಸೂಸೈಡ್​ ಬಾಂಬರ್​ ಫೋಟೋ ಕೂಡ ಇದೀಗ ಬೆಳಕಿಗೆ ಬಂದಿದೆ.

ಶಂಕಿತನನ್ನು ಡಾ. ಉಮರ್​ ಮೊಹಮ್ಮದ್​ ಎಂದು ಗುರುತಿಸಲಾಗಿದೆ. ತನ್ನ ಹೆಸರಿನಲ್ಲಿದ್ದ ಹ್ಯೂಂಡೈ ಐ20 ಕಾರನ್ನು ದೆಹಲಿಯ ಪ್ರತಿಷ್ಠಿತ ಕೆಂಪು ಕೋಟೆಯ ಬಳಿ ಸೋಮವಾರ ಸಂಜೆ ಸ್ಫೋಟಿಸಿದ್ದು, ಈ ಘಟನೆಯಲ್ಲಿ ಸುಮಾರು 9 ಮಂದಿ ಬಲಿಯಾಗಿದ್ದಾರೆ. ಅಲ್ಲದೆ, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವುದಾಗಿ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಯಾರು ಈ ಉಮರ್​?
ಶಂಕಿತ ಡಾ. ಉಮರ್​ ದಕ್ಷಿಣ ಕಾಶ್ಮೀರದ ಪುಲ್ವಾಮದ ನಿವಾಸಿ. ತಮ್ಮ ಮಿಂಚಿನ ಕಾರ್ಯಾಚರಣೆಯಲ್ಲಿ “ವೈಟ್ ಕಾಲರ್” ಟೆರರಿಸ್ಟ್​ ಮಾಡ್ಯೂಲ್‌ ಅನ್ನು ಭೇದಿಸಿದ ಜಮ್ಮು ಮತ್ತು ಕಾಶ್ಮೀರ ಹಾಗೂ ಹರಿಯಾಣದ ಪೊಲೀಸ್ ತಂಡಗಳು, ಸೋಮವಾರ ಬೆಳಗ್ಗೆ ಇಬ್ಬರು ವೈದ್ಯರಾದ ಡಾ. ಆದೀಲ್​ ಅಹ್ಮದ್ ರಾಥರ್​ ಮತ್ತು ಡಾ. ಮುಜಾಮಿಲ್​ ಶಕಿಲ್ ಎಂಬುವರನ್ನು ಬಂಧಿಸಿದರು. ಶಂಕಿತ ಉಮರ್​, ಈ ಇಬ್ಬರು ವೈದ್ಯರ ಸಹಚರನೆಂಬುದು ತಿಳಿದುಬಂದಿದೆ.

ತನ್ನ ಜತೆಗಾರರ ಬಂಧನ ಸುದ್ದಿ ಕೇಳುತ್ತಿದ್ದಂತೆ ಡಾ. ಉಮರ್,​ ಫರೀದಾಬಾದ್​ನಿಂದ ಎಸ್ಕೇಪ್​ ಆಗಿದ್ದ. ಎಲ್ಲಿ ನಾನು ಕೂಡ ಬಂಧಿಯಾಗುತ್ತೇನೆ ಎಂಬ ಭಯದಲ್ಲೇ ಉಮರ್​ ಕಾರು ಸ್ಫೋಟ ಮಾಡಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಇದೇ ಉಮರ್​, ಇನ್ನಿಬ್ಬರು ಸಹಚರರೊಂದಿಗೆ ದಾಳಿಯನ್ನು ಯೋಜಿಸಿದ್ದ ಮತ್ತು ಕಾರಿನಲ್ಲಿ ಡಿಟೋನೇಟರ್ ಅನ್ನು ಇಟ್ಟಿದ್ದ ಎಂದು ಮೂಲಗಳು ತಿಳಿಸಿವೆ.

ಏನಿದು ಘಟನೆ?
ಕೆಂಪು ಕೋಟೆಯ ಬಳಿ ಬಿಳಿ ಬಣ್ಣದ ಹ್ಯೂಂಡೈ ಐ20 ಕಾರು ಸ್ಫೋಟಗೊಳ್ಳುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಾರಿನ ನೋಂದಣಿ ಸಂಖ್ಯೆ HR 26CE7674. ಸುಮಾರು 3 ಗಂಟೆಗಳಿಗೂ ಹೆಚ್ಚು ಕಾಲ ಕೆಂಪು ಕೋಟೆಯ ಸಮೀಪವೇ ಈ ಕಾರನ್ನು ಪಾರ್ಕ್​ ಮಾಡಲಾಗಿತ್ತು. ಮಧ್ಯಾಹ್ನ 3.19ಕ್ಕೆ ಆಗಮಿಸಿ, ಸಂಜೆ 6.30ಕ್ಕೆ ಅಲ್ಲಿಂದ ಹೊರಟಿತು.

ಆರಂಭಿಕ ತನಿಖೆಯ ಪ್ರಕಾರ, ದಾಳಿಯಲ್ಲಿ ಬಳಸಲಾದ ಕಾರು ಹಲವು ಬಾರಿ ಕೈ ಬದಲಾಗಿದೆ ಅಂದರೆ ವ್ಯಕ್ತಿಗಳಿಂದ ವ್ಯಕ್ತಿಗೆ ಮಾರಾಟವಾಗಿದೆ ಎಂದು ತಿಳಿದುಬಂದಿದೆ. ಈ ಕಾರನ್ನು ಸಲ್ಮಾನ್ ಎಂಬುವರು 2025 ಮಾರ್ಚ್ ತಿಂಗಳಲ್ಲಿ ದೇವೇಂದರ್ ಅವರಿಗೆ ಮಾರಾಟ ಮಾಡಿದ್ದರು. ನಂತರ, ಅಕ್ಟೋಬರ್ 29ರಂದು ದೇವೇಂದರ್​ನಿಂದ ಆಮಿರ್​ಗೆ ಹಸ್ತಾಂತರವಾಯಿತು. ಬಳಿಕ ಆಮಿರ್​ನಿಂದ ಅದು ಡಾ. ಉಮರ್ ಮೊಹಮ್ಮದ್ ಗೆ ತಲುಪಿತು. ಕಾರು ವಿನಿಮಯದ ಬಗ್ಗೆ ತಾರಿಕ್‌ಗೆ ಮಾಹಿತಿ ಇತ್ತು. ದೆಹಲಿ ಪೊಲೀಸ್ ತಂಡವು ಆಮಿರ್ ಮತ್ತು ತಾರಿಕ್ ಎಂಬುವರನ್ನು ಸದ್ಯ ವಿಚಾರಣೆ ನಡೆಸುತ್ತಿದೆ.