ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೊಸಕಂಬಿ ಗ್ರಾಮದ ಸಮೀಪ ಸೋಮವಾರ ಸಂಭವಿಸಿರುವ ಭೀಕರ ಅಪಘಾತದಲ್ಲಿ ಕೇಂದ್ರ ಆಯುಷ್ ಸಚಿವ ಶ್ರೀಪಾದ್ ನಾಯಕ್ ಅವರ ಪತ್ನಿ ವಿಜಯಾ ನಾಯಕ್ ಹಾಗೂ ಆಪ್ತ ಕಾರ್ಯದರ್ಶಿ ದೀಪಕ್ ದುಬೆ ಮೃತಪಟ್ಟಿದ್ದು, ಸಚಿವ ಶ್ರೀಪಾದ್ ಸಹಿತ ನಾಲ್ವರು ಗಂಭೀರ ಗಾಯಗೊಂಡಿದ್ದಾರೆ.
ಕಾರಿನಲ್ಲಿ ಶ್ರೀಪಾದ ನಾಯಕ್, ಅವರ ಪತ್ನಿ ವಿಜಯಾ ನಾಯಕ್, ದೀಪಕ್ ದುಬೆ, ಗನ್ಮ್ಯಾನ್ ತುಕಾರಾಂ ಪಾಟೀಲ, ಸಾಯಿ ಕಿರಣ ಶೇಟಿಯಾ ಪ್ರಯಾಣಿಸುತ್ತಿದ್ದರು. ಸೂರಜ್ ನಾಯ್ಕ ಕಾರು ಚಲಾಯಿಸುತ್ತಿದ್ದರು. ಯಲ್ಲಾಪುರದ ಗಂಟೆ ಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಅವರು ಗೋಕರ್ಣಕ್ಕೆ ಪ್ರಯಾಣಿಸುತ್ತಿದ್ದರು.
ಹೊಸಕಂಬಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಯಿತು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಪತ್ನಿ ವಿಜಯಾ ನಾಯ್ಕ್ ಹಾಗೂ ಆಪ್ತ ಕಾರ್ಯದರ್ಶಿ ದೀಪಕ್ ಅವರನ್ನು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ.
ಸಚಿವ ಶ್ರೀಪಾದ್ ನಾಯಕ್, ಸಾಯಿಕಿರಣ್, ತುಕರಾಮ್ ಪಾಟೀಲ್ ಹಾಗೂ ಚಂದನ್ ಯಶವಂತ್ ನಾಯ್ಕ್ ಅವರಿಗೆ ಗಂಭೀರ ಗಾಯವಾಗಿದೆ. ಗಂಭೀರ ಗಾಯಾಳುಗಳಿಗೆ ಗೋವಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಪ್ರಧಾನಿಯಿಂದ ಆರೋಗ್ಯ ವಿಚಾರಣೆ:
ಕೇಂದ್ರ ಸಚಿವ ಶ್ರೀಪಾದ್ ಅವರ ಅಪಘಾತದ ಬಗ್ಗೆ ಪ್ರಧಾನಿ ಮೋದಿ ಅವರು ಮಾಹಿತಿ ಪಡೆದಿದ್ದು, ಗೋವಾ ಮುಖ್ಯಮಂತ್ರಿಗಳಿಗೆ ಕರೆ ಮಾಡಿ ಸಚಿವ ಉತ್ತಮ ಚಿಕಿತ್ಸೆ ವ್ಯವಸ್ಥೆ ಕಲ್ಪಿಸಿಕೊಡಿ ಎಂದು ತಿಳಿಸಿದ್ದಾರೆ.












