ನಗರದಲ್ಲಿ ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ ಅಪಘಾತ; ಯುವಕರಿಗೆ ಸಾರ್ವಜನಿಕರಿಂದ ಬಿತ್ತು ಗೂಸಾ

ಕುಡಿದ ಮತ್ತಿನಲ್ಲಿ ಅಡ್ಡಾದಿಡ್ಡಿ ಕಾರು ಚಲಾಯಿಸಿ ಅಪಘಾತ ಎಸಗಿರುವ ಯುವಕರಿಗೆ ಸಾರ್ವಜನಿಕರು ಧರ್ಮದೇಟು ನೀಡಿರುವ ಘಟನೆ ಉಡುಪಿ ಶ್ರೀಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದಲ್ಲಿ ಇಂದು ನಡೆದಿದೆ.

ಕಾರಿನಲ್ಲಿ ಮೂವರು ಯುವಕರು ಇದ್ದು, ಇವರು ಬೆಂಗಳೂರು ಮೂಲದವರೆಂದು ತಿಳಿದುಬಂದಿದೆ.‌

ಕುಡಿದ ಮತ್ತಿನಲ್ಲಿ ಚಾಲಕ ಕಾರನ್ನು ಯರ್ರಾಬಿರ್ರಿ ಚಲಾಯಿಸಿ ಕಂಪೌಂಡ್ ಗೋಡೆಗೆ ಗುದ್ದಿದ್ದಾನೆ. ಬಳಿಕ ಇನ್ನೊಂದು ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಘಟನೆಯಲ್ಲಿ ಎರಡು ಕಾರು ಜಖಂಗೊಂಡಿದೆ. ಈ ವೇಳೆ ಅಲ್ಲೇ ಇದ್ದ ತಾಯಿ- ಮಗು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಯುವಕರ ಈ ಅವಾಂತರಕ್ಕೆ ಆಕ್ರೋಶಗೊಂಡ ಸಾರ್ವಜನಿಕರು ಚಾಲಕ ಮತ್ತು ಕಾರೊಳಗಿದ್ದವರಿಗೆ ಧರ್ಮದೇಟು ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಜೆ ನಗರ ಠಾಣೆಯ ಹೊಯ್ಸಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಈ ಯುವಕರನ್ನು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.