ಹಿರಿಯಡಕ: ನಿಯಂತ್ರಣ ತಪ್ಪಿ ರಸ್ತೆಬದಿಯ ಮನೆಗೆ ನುಗ್ಗಿದ ಕಾರು; ಚಾಲಕ ಗಂಭೀರ

ಉಡುಪಿ: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮನೆಯೊಂದಕ್ಕೆ ನುಗ್ಗಿದ ಘಟನೆ ಹಿರಿಯಡಕದ ಕೊಂಡಾಡಿಯ ಭಜನೆಕಟ್ಟೆ ಎಂಬಲ್ಲಿ ಇಂದು ಮಧ್ಯಾಹ್ನ ಸುಮಾರಿಗೆ ಸಂಭವಿಸಿದ್ದು, ಘಟನೆಯಲ್ಲಿ ಕಾರು ಚಾಲಕ ಹಾಗೂ ಕೂಲಿ ಕಾರ್ಮಿಕರೊಬ್ಬರಿಗೆ ಗಾಯವಾಗಿದೆ.

ಕಾರು ಚಾಲಕ ಹರಿಣ್ ಶೆಟ್ಟಿ ಎಂಬುವವರು ಕಾರ್ಕಳದಿಂದ ಉಡುಪಿ ಕಡೆಗೆ ಬರುತ್ತಿದ್ದು, ಈ ವೇಳೆ ಹಿರಿಯಡಕದ ಕೊಂಡಾಡಿಯ ಭಜನೆಕಟ್ಟೆ ಸಮೀಪಿಸುತ್ತಿದ್ದಂತೆ ಕಾರು ನಿಯಂತ್ರಣ ಕಳೆದುಕೊಂಡು ರಸ್ತೆ ಪಕ್ಕದಲ್ಲಿರುವ ಪುತ್ತು ನಾಯಕ್ ಎಂಬುವವರ ಮನೆಗೆ ಡಿಕ್ಕಿ ಹೊಡೆದು ಮಗುಚಿ ಬಿದ್ದಿದೆ.

ಕಾರು ಡಿಕ್ಕಿ ಹೊಡೆದ ರಭಸಕ್ಕೆ ಮನೆಯ ಒಂದು ಭಾಗ ಸಂಪೂರ್ಣ ಕುಸಿದುಬಿದ್ದಿದೆ. ಕಾರಿನ ಮುಂಭಾಗ ಜಖಂಗೊಂಡಿದೆ. ಕಾರು ಚಾಲಕನಿಗೆ ಗಂಭೀರ ಗಾಯವಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾಗೆ ಘಟನೆಯಲ್ಲಿ ಅಲ್ಲಿಯೇ ಕೂಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರೊಬ್ಬರಿಗೆ ಗಾಯವಾಗಿದೆ ಎಂದು ತಿಳಿದುಬಂದಿದೆ.