ವಿಶ್ವಕಪ್ 2023 ಸೆಮಿಫೈನಲ್: 50 ಸಿಕ್ಸರ್‌ಗಳ ಹೊಸ ಕ್ರಿಕೆಟ್ ವಿಶ್ವಕಪ್ ದಾಖಲೆ ಬರೆದ ನಾಯಕ ರೋಹಿತ್ ಶರ್ಮಾ

ಮುಂಬೈ: 13ನೇ ಏಕದಿನ ಅರ್ಧಶತಕ ಸಿಡಿಸಿದ ಶುಭ್‌ಮನ್ ಗಿಲ್, ವಿರಾಟ್ ಕೊಹ್ಲಿ ಜೊತೆ ಆತ್ಮವಿಶ್ವಾಸದ ಆಟವನ್ನು ತೋರಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಕ್ರಿಕೆಟ್ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಶುಭ್‌ಮನ್ ಗಿಲ್ ಮತ್ತು ವಿರಾಟ್ ಕೊಹ್ಲಿ ಭಾರತದ ರನ್ ದರವನ್ನು ಪ್ರತಿ ಓವರ್‌ಗೆ 7.5 ಕ್ಕಿಂತ ಕಡಿಮೆಗೊಳ್ಳಲು ಬಿಡದೆ ಈಗಾಗಲೇ 150 ಕ್ಕೂ ಮಿಕ್ಕಿ ರನ್‌ಗಳನ್ನು ಬಾಚಿದ್ದಾರೆ. ಇದಕ್ಕೂ ಮುನ್ನ ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ 50 ಸಿಕ್ಸರ್‌ಗಳ ಹೊಸ ಕ್ರಿಕೆಟ್ ವಿಶ್ವಕಪ್ ದಾಖಲೆಯನ್ನು ನಿರ್ಮಿಸಿದ್ದಾರೆ.

2023 ಕ್ರಿಕೆಟ್ ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ 27 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಅವರ 56 ನೇ ಅರ್ಧಶತಕಕ್ಕೆ ಮೂರು ರನ್‌ಗಳ ಅಗತ್ಯವಿರುವಾಗಲೇ ಟಿಮ್ ಸೌಥಿ ರೋಹಿತ್ ಶರ್ಮಾ ಅವರನ್ನು ಔಟ್ ಮಾಡಿದ್ದಾರೆ. ಮುಂಬೈನಲ್ಲಿ ನಡೆಯುತ್ತಿರುವ ಏಕದಿನ ಕ್ರಿಕೆಟ್ ವಿಶ್ವಕಪ್ 2023 ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಟಾಸ್ ಗೆದ್ದು ನ್ಯೂಜಿಲೆಂಡ್ ವಿರುದ್ಧ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

ಈ ಪಂದ್ಯವನ್ನು ಭಾರತ ತಂಡವು ಗೆಲ್ಲುವಂತೆ ದೇಶಾದ್ಯಂತ ಪ್ರಾರ್ಥನೆ ನಡೆಯುತ್ತಿದೆ.