ಮಂಗಳೂರು: ಕ್ಯಾನ್ಸರ್ ಬಗ್ಗೆ ಭಯಬೇಡ, ಅರಿವಿರಲಿ ಎಂಬ ಧ್ಯೇಯದೊಂದಿಗೆ ಕ್ಯಾನ್ಸರ್ ಸಹಾಯವಾಣಿಯನ್ನು
ಮಂಗಳೂರಿನಲ್ಲಿ ಎಂ.ಐ.ಒ ಕ್ಯಾನ್ಸರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸೋಮವಾರದಂದು ಲೋಕಾರ್ಪಣೆಗೊಳಿಸಲಾಯಿತು.
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸಿ.ಬಿ ರಿಷ್ಯಂತ್ ಮುಖ್ಯ ಅತಿಥಿಯಾಗಿ ಆಗಮಿಸಿ ಸಹಾಯವಾಣಿಗೆ ಅಧಿಕೃತ ಚಾಲನೆಯನ್ನು ನೀಡಿ ಮಾತನಾಡಿ ಕ್ಯಾನ್ಸರ್ ಬಗ್ಗೆ ಸಮಾಜದಲ್ಲಿ ಜನರಿಗಿರುವ ಭಯ, ತಪ್ಪು ತಿಳುವಳಿಕೆ, ಗೊಂದಲಗಳನ್ನು ಹೋಗಲಾಡಿಸಿ ಅರಿವು ಮೂಡಿಸಿ ಆರಂಭಿಕ ಹಂತದಲ್ಲಿಯೆ ಜನರು ಎಚ್ಚರ ಗೊಳ್ಳುವಂತೆ ಮಾಡುವುದು ಸಮಾಜದ ಜನರಿಗೆ ಸಹಾಯಹಸ್ತ ಚಾಚುವುದು ಇದರ ಪ್ರಮುಖ ಉದ್ದೇಶ. ಎಂ.ಐ. ಒ ಸ್ಪೆಷಾಲಿಟಿ ಕ್ಯಾನ್ಸರ್ ಆಸ್ಪತ್ರೆ ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿದ್ದು ಕ್ಯಾನ್ಸರ್ ಗೆ ಸಹಾಯದ ನಿರೀಕ್ಷೆಯಲ್ಲಿರುವ ಜನರಿಗೆ ಇದು ದಾರಿದೀಪವಾಗಿ ಮೂಡಿ ಬರಲಿದೆ ಎಂದು ವಿಶ್ವಾಸ ವ್ಯಕ್ತಡಿಸಿದರು.
ಕ್ಯಾನ್ಸರ್ ಎಂದಾಕ್ಷಣ ಜನರು ಬದುಕಿನ ವಿಶ್ವಾಸ ಕಳೆದುಕೊಳ್ಳುವುದು ಸಾಮಾನ್ಯವಾಗಿದೆ. ಕ್ಯಾನ್ಸರ್ ಬಾಧಿತರಿಗೆ ಕಾಯಿಲೆಯ ಹಾಗೂ ಚಿಕಿತ್ಸೆಯ ಬಗ್ಗೆ ಸರಿಯಾದ ಸಲಹೆ ಸರಿಯಾದ ಸಮಯದಲ್ಲಿ ಕ್ಯಾನ್ಸರ್ ಸ್ಪೆಷಾಲಿಟಿ ಆಸ್ಪತ್ರೆಯಿಂದ ಸಿಗಲು ಕ್ಯಾನ್ಸರ್ ಸಹಾಯವಾಣಿ ನೆರವಾಗುತ್ತದೆ ಎಂ.ಐ.ಒ ದ ಈ ಉತ್ತಮ ಕಾರ್ಯ ಅತ್ಯಂತ ಶ್ಲಾಘನೀಯ ಎಂದರು.
ಎಂ.ಐ.ಒ ನ್ಯೂ ವೆಂಚರ್ಸ್ನ ನಿರ್ದೇಶಕ ಡಾ.ಜಲಾಲುದ್ದೀನ್ ಅಕ್ಬರ್ ಎಂ.ಐ.ಒ ನಡೆದು ಬಂದ ಹಾದಿಯ ಬಗ್ಗೆ ಬೆಳಕು ಚೆಲ್ಲಿ, ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗೆ ಮೊದಲ ಆದ್ಯತೆಯಾಗಿ ಎಂ.ಐ.ಒ ಮೂಡಿ ಬರುವಲ್ಲಿ ಸಿಬ್ಬಂದಿಗಳ ಅಪೂರ್ವ ಸೇವೆಯೇ ಕಾರಣ ಎಂದರು. ಪ್ರಸ್ತುತ ಆಸ್ಪತ್ರೆಯ ಸೇವೆಯನ್ನು ಉಡುಪಿ ಹಾಗೂ ತೀರ್ಥಹಳ್ಳಿಯಲ್ಲಿ ತೆರೆಯಲಾಗುವುದು.ಇದು ಗ್ರಾಮೀಣ ಭಾಗದ ಜನರಿಗೆ ಇನ್ನಷ್ಟು ಸೇವೆ ನೀಡುವ ಅವಕಾಶ ನೀಡಲಿದೆ ಎಂದರು.
ಆಸ್ಪತ್ರೆಯ ರೇಡಿಯೇಶನ್ ತಜ್ಞ ಡಾ.ವೆಂಕಟ್ರಮಣ್ ಕಿಣಿ ಮಾತನಾಡಿ, ಕ್ಯಾನ್ಸರ್ ಸಹಾಯವಾಣಿ ಯಾವ ರೀತಿ ಕಾರ್ಯನಿರ್ವಹಿಸಲಿದೆ ಎನ್ನುವುದನ್ನು ವಿಸ್ತೃತವಾಗಿ ವಿವರಿಸಿದರು.
ಕ್ಯಾನ್ಸರ್ ಸಹಾಯವಾಣಿ: 8050636777
ಸಾರ್ವಜನಿಕರು ಈ ದೂರವಾಣಿ ಸಂಖ್ಯೆಗೆ ಕ್ಯಾನ್ಸರ್ ಸಂಬಂಧಿಸಿದಂತೆ ಯಾವುದೇ ಪ್ರಶ್ನೆ ಅಥವಾ ಸಲಹೆ ಮಾರ್ಗದರ್ಶನಗಳನ್ನು ಪಡೆಯಲು ಕರೆ ಮಾಡಬಹುದಾಗಿದೆ. ಪ್ರಾರಂಭಿಕ ಹಂತದಲ್ಲಿ ಪ್ರತಿ ದಿನ ಬೆಳಿಗ್ಗೆ 9ರಿಂದ ಸಂಜೆ 6ರ ತನಕ ಸಹಾಯವಾಣಿ ಸೇವೆ ನೀಡಲಿದ್ದು ಸಾರ್ವಜನಿಕರು ಯಾವ ಪ್ರದೇಶದಿಂದಲೂ ಕರೆಗಳನ್ನು ಮಾಡಬಹುದಾಗಿದೆ. ಸಹಾಯವಾಣಿಗೆ ಬಂದ ಕರೆಗಳಿಗೆ ಅನುಸಾರವಾಗಿ ಸಹಾಯವಾಣಿ ಸಿಬ್ಬಂದಿ ಸಂಬಂಧಿಸಿದ ವಿಭಾಗದವರೊಡನೆ ಸಮಾಲೋಚಿಸಿ ಸೂಕ್ತ ಪರಿಹಾರ ಒದಗಿಸಲಿದ್ದಾರೆ.
ಕ್ಯಾನ್ಸರ್ ಸಹಾಯವಾಣಿ ತಂಡದಲ್ಲಿ ಅನುಭವಿ ಸಿಬ್ಬಂದಿಗಳ ಜೊತೆ ಕ್ಯಾನ್ಸರ್ ತಜ್ಞ ವೈದ್ಯರು, ಅನುಭವಿ ಶುಷ್ರೂಶಕರು, ಆಪ್ತ ಸಮಾಲೋಚಕರು, ಆಹಾರ ತಜ್ಞರು, ವಿಮಾ ಅಧಿಕಾರಿಗಳು, ವೈದ್ಯಕೀಯ ಸಮಾಜ ಕಾರ್ಯ ವೃತ್ತಿಪರರು, ಸಾರ್ವಜನಿಕ ಸಂಪರ್ಕಾಧಿಕಾರಿಗಳನ್ನೂ ಒಳಗೊಂಡಂತೆ ಪರಸ್ಪರ ಸಂವಹನದ ಒಂದು ತಂಡವೇ ಕಾರ್ಯ ನಿರ್ವಹಿಸಲಿದೆ.
ಪ್ರಸ್ತುತ ಸನ್ನಿವೇಶದಲ್ಲಿ ಜನ ಸಾಮಾನ್ಯರಿಗೆ ಕ್ಯಾನ್ಸರ್ ಕುರಿತಂತೆ ಕಾಡುವ ಹಲವಾರು ವಿಚಾರಗಳಿಗೆ ಸೂಕ್ತ ಮಾಹಿತಿಯನ್ನು ಒದಗಿಸಿ ಜನರ ತಪ್ಪು ತಿಳುವಳಿಕೆಗಳನ್ನು ಹೋಗಲಾಡಿಸಿ ಸರಿಯಾದ ಸಮಯದಲ್ಲಿ ಸರಿಯಾದ ಮಾರ್ಗದರ್ಶನ ಒದಗಿಸಲು ಎಂ.ಐ. ಒ ಕ್ಯಾನ್ಸರ್ ಸ್ಪೆಷಾಲಿಟಿ ಆಸ್ಪತ್ರೆ ಮುಂದಡಿ ಇಟ್ಟಿದ್ದು ಕ್ಯಾನ್ಸರ್ ರೋಗಿಗಳಿಗೆ ಅತ್ಯಾಧುನಿಕ ಚಿಕಿತ್ಸೆಯನ್ನು ನೈತಿಕ ಮೌಲ್ಯಗಳ ಜೊತೆ ನೀಡಿ ಸಹಸ್ರಾರು ರೋಗಿಗಳಿಗೆ ಗುಣಮಟ್ಟದ ಜೀವನವನ್ನು ಮರಳಿ ನೀಡಿರುವ ಹೆಗ್ಗಳಿಕೆ ಹೊಂದಿದೆ. ಇದು ಕ್ಯಾನ್ಸರ್ ಕುರಿತಂತೆ ಸಾರ್ವಜನಿಕರಿಗೆ ಸಹಾಯ ನೀಡಲು ಆರಂಭ ಗೊಳ್ಳಲಿರುವ ಪ್ರಥಮ ಕ್ಯಾನ್ಸರ್ ಸಹಾಯವಾಣಿಯಾಗಿದೆ.
ಕ್ಯಾನ್ಸರ್ ಸಹಾಯವಾಣಿ ಮುಖ್ಯವಾಗಿ ಕ್ಯಾನ್ಸರ್ ನಿಂದ ನೊಂದವರ ಪಾಲಿನ ಆಸರೆ. ಕ್ಯಾನ್ಸರ್ ವಿಚಾರದಲ್ಲಿ ಗೊಂದಲ ಮಾಡಿಕೊಂಡವರಿಗಾಗಿ, ಚಿಕಿತ್ಸೆ ಪಡೆಯದೆ ತ್ರಿಶಂಕು ಸ್ಥಿತಿಯಲ್ಲಿರುವ, ಸರಿಯಾದ ಮಾರ್ಗದರ್ಶನ ಸಿಗದೆ ತೊಳಲಾಡುತ್ತಿರುವ, ಕಾಯಿಲೆ ಗುಣಲಕ್ಷಣ ಹೊಂದಿದವರ, ಕ್ಯಾನ್ಸರ್ ಬಗ್ಗೆ ಜ್ಞಾನ ಪಡೆಯಲು ಬಯಸುವವರ , ಕ್ಯಾನ್ಸರ್ ರೋಗ ಚಿಕಿತ್ಸೆಗೆ ಇರುವ ಹಲವು ಯೋಜನೆಗಳು ಚಿಕಿತ್ಸೆಯ ಸಂಬಂಧಿಸಿದ ವಿಚಾರಗಳಿಗೆ ಹೀಗೆ ಹತ್ತು ಹಲವು ವಿಚಾರಗಳಿಗೆ ಮಾಹಿತಿ ಒದಗಿಸುವ ಪ್ರಾಮಾಣಿಕ ಪ್ರಯತ್ನವನ್ನು ಯಾವುದೇ ಫಲಾಪೇಕ್ಷೆಗಳಿಲ್ಲದೆ ಸಹಾಯವಾಣಿ ನೀಡಲಿದೆ.
ಸಾರ್ವಜನಿಕರು ಕ್ಯಾನ್ಸರ್ ಸಹಾಯವಾಣಿಯ ಸದುಪಯೋಗವನ್ನು ಪಡೆಯುವುದರ ಜೊತೆಗೆ ಕ್ಯಾನ್ಸರ್ ಅರಿವನ್ನು ಬೆಳೆಸಿಕೊಂಡು ಭಯವನ್ನು ಹೋಗಲಾಡಿಸಿ ಕಷ್ಟದ ಸನಿವೇಶದಲ್ಲಿರುವ ತಮಗೆ ಗೊತ್ತಿರುವ ರೋಗಿಗಳಿಗೆ ಅಥವಾ ಕ್ಯಾನ್ಸರ್ ಭಾಧೆಗೊಳಗಾಗಿರುವವರಿಗೆ ಸಹಾಯ ಹಸ್ತ ಚಾಚಲು ಸಹಾಯವಾಣಿಯನ್ನು ಸೇತುವೆಯಾಗಿ ಬಳಸಿಕೊಳ್ಳಿ ಎಂದು ಡಾ. ಕಿಣಿ ಹೇಳಿದರು.
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಶ್ರೀಕಾಂತ್ ರಾವ್ ಮಾತನಾಡಿ ಕ್ಯಾನ್ಸರ್ ಚಿಕಿತ್ಸೆ ಸಮಾಜದ ಎಲ್ಲ ವರ್ಗದವರಿಗೂ ಕ್ಲಪ್ತ ಸಮಯದಲ್ಲಿ ಮಿತ ದರದಲ್ಲಿ ಸಿಗಬೇಕೇನ್ನುವುದು ನಮ್ಮ ಮೊದಲ ಆದ್ಯತೆ. ಹಾಗೆಯೇ ಸರಕಾರದ ಎಲ್ಲ ಯೋಜನೆಯಡಿಯಲ್ಲಿ ಜನರಿಗೆ ಯಾವುದೇ ತ್ರಾಸವಿಲ್ಲದೆ ಚಿಕಿತ್ಸೆ ಪಡೆಯುವಂತಾಗಬೇಕು ಎನ್ನುವುದು ನಮ್ಮ ಧ್ಯೇಯ ಎಂದರು.
ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿಗಳು, ರೋಗಿಗಳ ಕುಟುಂಬಿಕರು, ಸಿಬಂದಿಗಳು ಹಾಜರಿದ್ದರು.
ಎಂ.ಐ.ಒ ಆಸ್ಪತ್ರೆಯ ಆಪರೇಶನ್ ಮ್ಯಾನೇಜರ್ ರಾಘವೇಂದ್ರ ಸಿಂಗ್ ವಂದಿಸಿದರು, ಡಾ.ವಿಶ್ರುತ ದೇವಾಡಿಗ ನಿರೂಪಿಸಿದರು.