ಬ್ರಹ್ಮಾವರ: ಕರಾವಳಿ ಭಾಗದ ಜನ ಬಹುಕಾಲದಿಂದ ಕಾಯುತ್ತಿದ್ದ ಮಂಗಳೂರು-ಮುಂಬೈ ನಡುವಿನ ಮತ್ಸ್ಯ ಗಂಧ ರೈಲಿನ ಸಂಚಾರ ಇದೇ ಡಿಸೆಂಬರ್ 17 ರಿಂದ ಆರಂಭವಾಗಲಿದೆ. ಆದರೆ ಆಶ್ಚರ್ಯಕಾರಿ ಬೆಳವಣಿಗೆ ಎಂದರೆ ಬಾರ್ಕೂರು ರೈಲು ನಿಲ್ದಾಣದಲ್ಲಿದ್ದ ನಿಲುಗಡೆಯನ್ನು ರದ್ದುಗೊಳಿಸಲಾಗಿದೆ. ಆ ಮೂಲಕ ಇತಿಹಾಸ ಪ್ರಸಿದ್ಧ ಬಾರಕೂರನ್ನು ನಿರ್ಲಕ್ಷಿಸಲಾಗಿದೆ ಎಂದು ಈ ಭಾಗದ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆರ್.ಎಲ್. ಡಯಾಸ್, ಬಿ.ಡಿ. ಶೆಟ್ಟಿ ಅವರಂತಹ ಮುಖಂಡರ ಹೋರಾಟದ ಫಲವಾಗಿ ಮತ್ಸ್ಯಗಂಧ ರೈಲಿನ ನಿಲುಗಡೆ ಬಾರ್ಕೂರಿನಲ್ಲಿ ನಮಗೆ ದೊರೆತಿತ್ತು. ಹಾಗಾಗಿ ಈಗ ನಾವು ಒಗ್ಗಟ್ಟಿನಲ್ಲಿ ಈ ಸೌಲಭ್ಯದ ಉಳಿವಿಗಾಗಿ ಹೋರಾಡಬೇಕಿದೆ. ಈ ಬಗ್ಗೆ ರೋಟರಿ, ಲಯನ್ಸ್ ಹಾಗೂ ಇತರ ಎಲ್ಲಾ ಸಂಘ ಸಂಸ್ಥೆಗಳು ಒಗ್ಗಟ್ಟಾಗಿ ಧ್ವನಿ ಎತ್ತ ಬೇಕಾಗಿದೆ.
ಇದೇ ರೀತಿ ನಾವು (ಬಾರ್ಕೂರಿನವರು) ಇಂತಹ ಹಲವು ಸೌಲಭ್ಯಗಳನ್ನು ಕಳೆದುಕೊಂಡಿದ್ದೇವೆ. ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಬಾರಿ ಉಪಯುಕ್ತ ವಾಗಿದ್ದ ಬಾರಕೂರು ನ್ಯಾಶನಲ್ ಜೂನಿಯರ್ ಕಾಲೇಜು ಬಳಿ ಕಾರ್ಯ ನಿರ್ವಹಿಸುತ್ತಿದ್ದ ಸಿಂಡಿಕೇಟ್ ಬ್ಯಾಂಕ್ ಕೂಡ ಸ್ಥಳಾಂತರಗೊಂಡಿದೆ. ಹೀಗೆ ಒಂದೊಂದೆ ಸೌಲಭ್ಯ ಕಳೆದುಕೊಳ್ಳುತ್ತಿದ್ದೇವೆ.
ನಾವೀಗ ಎಚ್ಚೆತ್ತುಕೊಳ್ಳದಿದ್ದರೆ ಮಸ್ತ್ಯ ಗಂಧ ರೈಲು ಮುಂದೆಂದೂ ಬಾರ್ಕೂರು ನಿಲ್ದಾಣದಲ್ಲಿ ನಿಲುಗಡೆ ಆಗದು. ಆದ್ದರಿಂದ ಎಲ್ಲರೂ ಒಗ್ಗಟ್ಟಾಗಿ ಇದರ ವಿರುದ್ಧ ಹೋರಾಡಬೇಕು. ಎಂದು ಸ್ಥಳೀಯರು ಕರೆಕೊಟ್ಟಿದ್ದಾರೆ.












