ನನ್ನೆದೆಯ ಕಾದಂಬರಿಯಲಿ ರಾಜ ನೀನು:ಸುಷ್ಮಾ ಬರೆದ ತಣ್ಣನೆಯ ಬರಹ

ಹಾಗೇ ಸುಮ್ಮನೆ ಏನೋ ಗಾಢವಾದ ಯೋಚನೆಯಲ್ಲಿದ್ದ ಮನಸ್ಸಿಗೆ ಎಲ್ಲಿಂದಲೋ ಒಂದು ಸಿಹಿಗಾಳಿ ಸೋಕಿದಂತಾಯಿತು. ಅದೇಕೋ ತಿಳಿಯದು ತುಸು ಮೆಲ್ಲಗೆ ಮನಸು ಹಿಡಿತ ತಪ್ಪಿತು. ಎಲ್ಲಿಂದಲೋ ಮಧುರವಾಗಿ ಹರಿದು ಬಂದ ಇಂಪಾದ ದನಿಯೊಂದು ನನ್ನೆರಡು ಕರ್ಣಗಳಿಗಪ್ಪಳಿಸಿದವು. ಜಾಗ ಬಿಟ್ಟು ಕದಡಲೇ? ಅಥವಾ ಆ ಮಧುರ ಗೀತೆಯ ಅಲ್ಲೇ ಕುಳಿತು ಆಲಿಸಲೇ? ಮನಸ್ಸಲ್ಲಿ ಕಸಿ-ವಿಸಿ, ಗೊಂದಲ.
ಈ ವಯಸ್ಸಿನಲ್ಲಿ ಹಾಗೇ ಅಲ್ವಾ, ಮನಸೊಂದು ಚಂಚಲ. ಆ ಧ್ವನಿಯ ಕಾಣಲೇಬೇಕೆಂದು ಕಣ್ಣುಗಳು, ಅದರೆಡೆಗೆ ನಡೆಯಬೇಕು ಎಂದು ಕಾಲುಗಳು, ಮತ್ತೆ ಕೂರಲು ಸಾಧ್ಯವಿಲ್ಲ. ಮನಸು ಕೇಳಲಿಲ್ಲ. ಹೊರಟೇಬಿಟ್ಟೆ ಆ ಧ್ವನಿ ಬಂದೆಡೆಗೆ. ಆಲಿಸುತ್ತ ಮುಂದಕ್ಕೆ ಸಾಗಿದೆ, ” ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನನ್ನನು” ಎನ್ನುವ ಎಂದೂ ಇರದ ಅಧ್ಭುತವಾದ ಪುಳಕ ನನಗೇ ಅರಿಯದೇ ನನ್ನನ್ನು ಆವರಿಸಿತ್ತು. ಆದರೆ, ಕಾರಣವಿಲ್ಲದೇ ಅದೇನೋ ಒಂದು ಸಣ್ಣ ಭಯ ನನ್ನ ಕಾಡತೊಡಗಿತು. ಮಿತಿ ಮೀರಿದ ಖುಷಿಯಲ್ಲಿದ್ದ ನನಗೆ ಅದು ದೊಡ್ಡದೆಂದು ಅನಿಸಲಿಲ್ಲ. ಹತ್ತಿರವಾದಂತೆ ಮತ್ತೆ- ಮತ್ತೆ ಆ ಧ್ವನಿ ನನ್ನ ಮನಸೂರೆಗೊಂಡಿತು. ಹಿಂದೆಂದೂ ಕಾಣದ ಪ್ರಕೃತಿ ಸೌಂದರ್ಯದ ಮಧ್ಯೆ ನಾನಿದ್ದೆ. ಸುತ್ತ ಕತ್ತಾಡಿಸಿದರೂ ಯಾರೂ ಕಾಣಲಿಲ್ಲ.

ಕಣ್ಣಳತೆಯ ದೂರವನ್ನುಮೀರಿ ಕಾಣಲು ಪ್ರಯತ್ನಿಸಿದೆ, ಸೂರ್ಯನ ಕಿರಣ ತಾಕಿತೇ ಹೊರತು ಆ ಮಧುರ ಇಂಪನದ ರಾಜ ಕಾಣಲೇ ಇಲ್ಲ. ಮತ್ತೆ ಮೊದಲಚಿಂತೆ ನನ್ನ ಆವರಿಸಲು ತುಸು ಸಮೀಪದಲೇ ಮತ್ತೆ ಆ ಧ್ವನಿ ಶುರು! ಮೊದಲಿನಂತೆಯೇ ಆಸೆಯ ಹುಡುಕಾಟ, ಅದೂ ವ್ಯರ್ಥ.ಯಾರೂ ಇಲ್ಲ! ಆ ಧ್ವನಿ ನನ್ನ ಭ್ರಮೆ ಎಂದು ಕಾಲು ಹಿಂದಿಡಲು ಆಗ ಕೇಳಿದುದಕ್ಕಿಂತ ಹತ್ತಿರದಲ್ಲೇ ಯಾರೋ ನನಗಾಗಿಯೇ ಕರೆಯುತ್ತಿದ್ದಾರೆ ಎನ್ನುವ ಅದ್ಭುತ ಕಂಠ. ಕಾಣಲೇಬೇಕೆಂಬ ನಿರೀಕ್ಷೆಯಿಂದ ಹೊರಟ ನನಗೆ ಮತ್ತೆ ಸಿಕ್ಕಿದ್ದು ಪ್ರಕೃತಿ ಮಾತೆಯಸೌಂದರ್ಯ, ಅದನ್ನು ಬಿಟ್ಟು ಬೇರಾರೂ ಅಲ್ಲಿರಲಿಲ್ಲ.

ಸುಮ್ಮನೆ ನನ್ನನ್ನು ಯಾರೋ ಆಟವಾಡಿಸುತ್ತಿದ್ದಾರೆ ಎಂದು ಭಾಸವಾಗಿ ಮತ್ತೆ ಕಲ್ಪನೆಯ ಸಾಗರದಲಿ ತಿಳಿಯಾದ ಮಸುಕಿನಲಿ ಕಳೆದುಹೋದೆ. ಆದರೆ ಈ ಬಾರಿಯ ಕಲ್ಪನೆ ಆ ಧ್ವನಿ ಎಲ್ಲಿಂದ ಬಂತು ಎಂಬುದೇ ಹೊರತು ಬೇರಾವ ಗೊಡವೆಗೂ ಅವಕಾಶವಿರಲಿಲ್ಲ. ಏನೇ ಆಗಲಿ ಆ ಧ್ವನಿಯ ಕಂಡೇ ಕಾಣುವೆನೆಂಬ ಆತ್ಮವಿಶ್ವಾಸದಲಿ ಮುಂದಕ್ಕೆ ಸಾಗಿದೆ. ತುಸು ದೂರ ಬೀಸೋ ಗಾಳಿಯಲ್ಲಿ ತೇಲಿ ನಡೆದೆ. ಈ ಬಾರಿಯಂತು ನನ್ನ ಖುಷಿ ಪರಮಾವಧಿಯನ್ನು ಮೀರಿತ್ತು. ಮತ್ತಷ್ಟು ಹತ್ತಿರದಲ್ಲಿ ಪ್ರೀತಿಯಿಂದ ಗುಂಯಿಗುಡುವ ಸದ್ದು. ಇಂಪಾದ ಅಲೆಗಳು ಬೀಸುತಿರಲು ಅಲೆಯ ಹಿಂಬಾಲಿಸಿ ಪಾದ ಬೆಳೆಸಿದೆ. ಗುರಿಯಿಲ್ಲದೇ ನಡೆದೆ. ಎಲ್ಲಾ ಕಡೆಗಳಲ್ಲಿ ಅದೊಂದೇ ಸದ್ದು! ದಿಗ್ಭ್ರಂತಳಾಗಿ ನಿಂತೆ. “ಜಟಿಲ ಕಾನನದಲಿ ಹರಿಯುವ ಸಣ್ಣ ತೊರೆಯ ಸದ್ದಿನಂತಾಯಿತು” ನನ್ನ ಉಸಿರಿನ ರಭಸ. ಒಂದೆಡೆ ಆತನನ್ನು ಕಾಣಬಹುದೇ ನಾನು ಎನ್ನುವ ತುಡಿತ. ಇನ್ನೊಂದೆಡೆ ಸೇರಲಾಗದೇ ನಿರಾಶಳಾಗುವೆನೇ ಎನ್ನುವ ಭಯ. ತಂಪಾದ ಗಾಳಿಯಲ್ಲಿ ಇಂಪಾದಅಲೆಯೊಂದು ಈಗ ಒಂದೆಡೆಯಿಂದ ಪ್ರೀತಿಯಿಂದ ನನ್ನ ತಾಕಿದಂತೆ ಆಯಿತು. ಅದೇ ದಾರಿಯಲ್ಲಿ ನಡೆದೇ ಬಿಟ್ಟೆ. ಅರೆ ಗಳಿಗೆಯಲ್ಲಿ ಕಲ್ಪನೆಗಳ ಸಾಗರದಲ್ಲಿ ಮುಳುಗಿದ ನನಗೆ ನಿಜ ಏನೆಂಬುದನ್ನು ನಂಬಲು ಸಾಧ್ಯವೇ ಇಲ್ಲ ಎನ್ನುವಸ್ಟು ಖುಷಿಯಾಯಿತು. ಮರೆಯಲ್ಲಿ ಧ್ವನಿಗೊಡೆಯ ರಾಜನಂತೆ ನಿಂತಿದ್ದ. ಹತ್ತಿರ ಹೋಗಲೇ? ಇಲ್ಲೇ ನಿಂತು ಆಲಿಸಲೇ? ಭಯ ಕಸಿ- ವಿಸಿ, ಗೊಂದಲ,ಹೇಳತೀರದಷ್ಟು ಅನುಭವಗಳು.

ಅವನ ಆ ಜೋಗುಳ ನನ್ನ ಒಳಗಿವಿಯನ್ನಪ್ಪಳಿಸಿತು. ನಾನೆಲ್ಲಿರುವೆ ಎನ್ನುವ ಪರಿವೇ ಇಲ್ಲದಂತೆ ಮಗ್ನಳಾಗಿದ್ದೆ ಆ ಕ್ಷಣ. ಕಣ್ಣುಮುಚ್ಚಿ ಕಣ್ಣು ಬಿಡುವಷ್ಟು ಹೊತ್ತಿಗೆ ಅವನೆಲ್ಲಿ ಹೋದನೋ ತಿಳಿಯದು. ಮತ್ತೆ ಹುಡುಕಾಟ. ಆದರೆ ಯಾವ ಧ್ವನಿಯೂ ಇಲ್ಲ.ಏಕಾಂತದಲಿ ಚಿಂತಾಮೂರ್ತಿ ಆಗಿದ್ದ ನನ್ನನ್ನು ನಾ ಅರಿಯದ ಲೋಕಕ್ಕೆ ಕೊಂಡು ಹೋದ ಒಂದು ಸುಂದರ ಕಲ್ಪನೆ ಅದು.ಹುಡುಕಾಟದ ಪಯಣದಲ್ಲಿ ಸೋತ ನನಗೆ ಇಂದಿಗೂ ಅವನು ತಿಳಿಯಾದ ಮರೆಯಲಿ ಕಂಡವನು. ಅರಿತೂ ಅರಿಯದೇ, ತಿಳಿದೂ ತಿಳಿಯದೇ, ನನ್ನ ಕಾದಂಬರಿಯ ರಾಜನವನು ನೆನಪಿರಲಿ ತಿಳಿ ಮರೆಯಲಿ ಕಂಡವನು.

ಸುಷ್ಮಾ, ದ್ವಿತೀಯ ಬಿ.ಎ.

ಎಸ್.ವಿ.ಟಿ. ಮಹಿಳಾ ಕಾಲೇಜು,ಕಾರ್ಕಳ