ಅಪ್ಪಟ ಸ್ವದೇಶೀ ನಿರ್ಮಿತ ನಮ್ಮ ಊರಿನ ಬ್ರ್ಯಾಂಡ್ ಕ್ಯಾಂಪ್ಕೋ ಚಾಕಲೇಟ್!!

 

ಆಗಿನ್ನೂ ದೇಶದಲ್ಲಿ ಕ್ಯಾಡ್ ಬರೀಸ್, ನೆಸ್ಲೆ ಕಿಟ್ ಕ್ಯಾಟ್ ನಂತಹ ಕಂಪನಿಗಳು ಮನೆ ಮಾತಾಗಿರಲಿಲ್ಲ. ನಾವು ಸಣ್ಣವರಿದ್ದಾಗ ನಾಲ್ಕಾಣೆ, ಎಂಟಾಣೆಯ ಚಿಕ್ಕ ಪುಟ್ಟ ಚಾಕಲೇಟುಗಳೇ ನಮಗೆ ಕ್ಯಾಡ್ ಬರಿ, ಕಿಟ್ ಕ್ಯಾಟ್ ಆಗಿದ್ದವು. ಮುಂಬೈ ಅಥವಾ ವಿದೇಶದಿಂದ ಯಾರಾದರೂ ಊರಿಗೆ ಬಂದಾಗ ಮಾತ್ರ ಫೈವ್ ಸ್ಟಾರ್, ಕ್ಯಾಡ್ ಬರಿಯಂತಹ ಚಾಕಲೇಟುಗಳ ದರ್ಶನ ಭಾಗ್ಯ ನಮಗಾಗುತ್ತಿತ್ತು.

ಆಗ ಬರುತ್ತಿದ್ದ ಅದೆಷ್ಟೋ ಚಾಕಲೇಟುಗಳಲ್ಲಿ ನೀಲಿ ಬಣ್ಣದ ಜರಿಯಲ್ಲಿ ಒಂದು ಕೆಂಪು ಹೃದಯದ ಚಿತ್ರವಿರುವ ಕ್ಯಾಂಪ್ಕೋ ಚಾಕಲೇಟ್ ಅತ್ಯಂತ ಪ್ರಸಿದ್ದವಾಗಿತ್ತು. ಇವತ್ತು ಮಾರುಕಟ್ಟೆಯಲ್ಲಿ ಅದೆಷ್ಟೋ ಚಾಕಲೇಟುಗಳು ಇರಬಹುದು ಆದರೆ, ಚಿಕ್ಕಂದಿನಲ್ಲಿ ನಾವು ಸವಿದಿದ್ದ ಆ ಕ್ಯಾಂಪ್ಕೋ ಚಾಕಲೇಟಿನ ರುಚಿಯೇ ಬೇರೆ!! ನಮ್ಮ ಪಕ್ಕದ ಮನೆಯ ಮಾಮ ತರುತ್ತಿದ್ದ ಆ ಕ್ಯಾಂಪ್ಕೋ ಚಾಕಲೇಟಿಗಾಗಿ ಅವರ ಬರುವಿಕೆಯನ್ನೇ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದ ದಿನಗಳಿದ್ದವು.

ದೇಶದ ಪ್ರಪ್ರಥಮ ಸ್ವದೇಶೀ ಬ್ರ್ಯಾಂಡ್ ಕ್ಯಾಂಪ್ಕೋ


ಸೆಂಟ್ರಲ್ ಅರೆಕಾನಟ್ ಮತ್ತು ಕೋಕೋ ಮಾರ್ಕೆಟಿಂಗ್ ಮತ್ತು ಪ್ರೊಸೆಸಿಂಗ್ ಕೋ-ಆಪರೇಟಿವ್ ಲಿಮಿಟೆಡ್ ಅಥವಾ ಕ್ಯಾಂಪ್ಕೋ ಎಂದು ಚಿರಪರಿಚಿತವಾಗಿರುವ ಈ ಸಂಸ್ಥೆ 11 ಜುಲೈ 1973 ರಂದು ಅವಿಭಜಿತ ದ.ಕ ಜಿಲ್ಲೆಯಲ್ಲಿ ಪ್ರಾರಂಭವಾಯಿತು. ಪುಟ್ಟ ಗಿಡವಾಗಿದ್ದ ಕ್ಯಾಂಪ್ಕೋ ಸಂಸ್ಥೆ ಕರ್ನಾಟಕ ಮತ್ತು ಕೇರಳದ ಜೊತೆಗೆ ಈಗ ಭಾರತದ ಇತರ ರಾಜ್ಯಗಳಾದ ಗುಜರಾತ್, ಮಹಾರಾಷ್ಟ್ರ, ಉತ್ತರ ಪ್ರದೇಶ, ಮಧ್ಯಪ್ರದೇಶ, ನವದೆಹಲಿ, ಬಿಹಾರ, ತಮಿಳುನಾಡು, ಒಡಿಶಾ, ಅಸ್ಸಾಂ ಮತ್ತು ಗೋವಾಗಳಲ್ಲೂ ತನ್ನ ಬೇರುಗಳನ್ನು ವಿಸ್ತರಿಸಿದೆ.

ತನ್ನ ಪ್ರಧಾನ ಕಛೇರಿಯನ್ನು ಪುತ್ತೂರಿನಲ್ಲಿ ಹೊಂದಿರುವ ಸಂಸ್ಥೆಯ ಶಾಖೆಗಳು ಭಾರತದಾದ್ಯಂತ ಹರಡಿವೆ. ಕಂಪನಿಯು 1986 ರಲ್ಲಿ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಚಾಕೊಲೇಟ್ ಉತ್ಪಾದನಾ ಘಟಕವನ್ನು ಸ್ಥಾಪಿಸಿತು. ಇದರ ಉದ್ಘಾಟನೆಯನ್ನು ಅಂದಿನ ರಾಷ್ಟ್ರಪತಿ ಗ್ಯಾನಿ ಜೈಲ್ ಸಿಂಗ್ ರವರು ನಡೆಸಿದ್ದರು. ಉದ್ಘಾಟನಾ ಸಮಾರಂಭವನ್ನು ದೂರದರ್ಶನದಲ್ಲಿ ನೇರ ಪ್ರಸಾರ ಮಾಡಲಾಗಿತ್ತು. ಸಂಸ್ಥೆಯು ತನ್ನದೇ ಆದ ಬ್ರ್ಯಾಂಡ್‌ನ ಅಡಿಯಲ್ಲಿ ಹಾಗೂ ನೆಸ್ಲೆಗಾಗಿ ಚಾಕೊಲೇಟ್‌ಗಳು ಮತ್ತು ಕೋಕೋದ ಇತರ ಉತ್ಪನ್ನಗಳನ್ನು ಉತ್ಪಾದಿಸುತ್ತಿದೆ.

Mangalore Today | Latest main news of mangalore, udupi - Page CAMPCO -Founder-Varanasi-Subraya-Bhat-passes-away

ಕ್ಯಾಂಪ್ಕೋ ಸಂಸ್ಥಾಪಕ ಅಧ್ಯಕ್ಷ ದಿವಂಗತ ಶ್ರೀ. ವಾರಣಾಸಿ ಸುಬ್ರಾಯ ಭಟ್ ಇವರ ದೂರದರ್ಶಿತ್ವ ಹಾಗೂ ಮಾರ್ಗದರ್ಶನದಿಂದಾಗಿ ಇವತ್ತು ಕ್ಯಾಂಪ್ಕೋ ದೇಶ ಮಾತ್ರವಲ್ಲ, ವಿದೇಶದಲ್ಲೂ ಹೆಸರುವಾಸಿಯಾಗಿದೆ. ಅಪ್ಪಟ ಸ್ವದೇಶೀ, ಅವಿಭಜಿತ ದ.ಕ ಜಿಲ್ಲೆಯ ಜನರು ಹೆಮ್ಮೆ ಪಡುವಂತೆ ಮಾಡಿದ ಕ್ಯಾಂಪ್ಕೋ ಇದು ‘ನಮ್ಮ ಊರಿನ ನಮ್ಮ ನೀರಿನ’ ಉತ್ಪನ್ನ. ವೋಕಲ್ ಫಾರ್ ಲೋಕಲ್ ಎನ್ನುವ ಈ ಸಂದರ್ಭದಲ್ಲಿ ತುಳುನಾಡಿನ ಜನರೆಲ್ಲರೂ ಕ್ಯಾಂಪ್ಕೋ ಉತ್ಪನ್ನಗಳನ್ನು ಖರೀದಿಸಿ “ನಮ್ಮ ಸಂಸ್ಥೆ”ಯನ್ನು ಉಳಿಸಿ ಬೆಳೆಸೋಣ….

ವಿ ಲವ್ ಯೂ ಕ್ಯಾಂಪ್ಕೋ…..

ಶರೋನ್ ಶೆಟ್ಟಿ ಐಕಳ