ಕೇರಳ ಮಾದರಿ ಕರ್ನಾಟಕದಲ್ಲೂ ರಬ್ಬರಿಗೆ ಬೆಂಬಲ ಬೆಲೆ ಘೋಷಿಸಿ: ಮುಖ್ಯಮಂತ್ರಿಗಳಿಗೆ ಕ್ಯಾಂಪ್ಕೋ ಮನವಿ

ಮಂಗಳೂರು: ಕರ್ನಾಟಕ ಸರಕಾರವು ಕೇರಳ ಸರಕಾರದ ಮಾದರಿಯಲ್ಲೇ ರಬ್ಬರಿಗೆ ಬೆಂಬಲ ಬೆಲೆ ಘೋಷಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ಕ್ಯಾಂಪ್ಕೋ ಮನವಿ ಮಾಡಿದೆ.

ರಾಜ್ಯದ ಮಲೆನಾಡು ಮತ್ತು ಕರಾವಳಿ ಭಾಗದ ಹೆಚ್ಚಿನ ರೈತರು ತಮ್ಮ ಜೀವನಾಧಾರಕ್ಕೆ ಅಡಿಕೆಯೊಂದಿಗೆ ರಬ್ಬರ್ ಕೃಷಿಯನ್ನು ಅವಲಂಬಿಸಿದ್ದಾರೆ. ರಬ್ಬರಿನ ಪರ್ಯಾಯ ಕೃಷಿಯಿಂದ ರೈತರು ಆರ್ಥಿಕ ಸ್ವಾವಲಂಬನೆ ಸಾಧಿಸಲು ಸಾಧ್ಯವಾಗಿದೆ. ಇತ್ತೀಚಿನ ರಬ್ಬರ್ ಮಾರುಕಟ್ಟೆಯಲ್ಲಿ ಉಂಟಾದ ದರ ಕುಸಿತವು ಕೃಷಿಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಪರಿಹಾರವಿಲ್ಲದೆ ರಬ್ಬರ್ ಮರಗಳನ್ನು ಕಡಿಯುವ ನಿರ್ಧಾರ ಮಾಡಿದ್ದಾರೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ರಬ್ಬರ್ ಬೆಳೆಗಾರರ ಮಾರುಕಟ್ಟೆ ಸಮಸ್ಯೆಯನ್ನು ನಿವಾರಿಸಲು ಮತ್ತು ರೈತರಲ್ಲಿ ಮಿಶ್ರ ಬೆಳೆಯ ಕೃಷಿಯನ್ನು ಪ್ರೋತ್ಸಾಹಿಸಲು ಕ್ಯಾಂಪ್ಕೋ ರಬ್ಬರ್ ಖರೀದಿಯನ್ನು ಮಾಡುತ್ತಿದೆ. ನೈಸರ್ಗಿಕ ರಬ್ಬರಿನ ಆಮದಿನ ಮೇಲೆ ಶೇ.25 ಮತ್ತು ಕಾಂಪೌಂಡ್ ರಬ್ಬರಿನ ಮೇಲೆ ಶೇ.10 ಅಮದು ಸುಂಕ ವಿಧಿಸಲಾಗಿದೆ. ಆದರೆ ನೈಸರ್ಗಿಕ ರಬ್ಬರ್ ವಿದೇಶದಿಂದ ಕಾಂಪೌಂಡ್ ರಬ್ಬರಿನ ಹೆಸರಿನಲ್ಲಿ ಶೇ.25ರ ಬದಲು ಶೇ.10 ಆಮದು ಸುಂಕ ಪಾವತಿಸಿ ಆಮದಾಗುತ್ತಿದೆ. ಇಲ್ಲಿನ ಉತ್ಪಾದನಾ ವೆಚ್ಚಕ್ಕಿಂತ ಮಾರುಕಟ್ಟೆ ದರ ಕಡಿಮೆಯಾಗಿ ರೈತರು ಕಂಗಾಲಾಗಿದ್ದಾರೆ.

ನೈಸರ್ಗಿಕ ಮತ್ತು ಕಂಪೌಂಡ್ ರಬ್ಬರಿಗೆ ಏಕರೂಪ ಆಮದು ಸುಂಕ ವಿಧಿಸಲು ಕೇಂದ್ರ ಸರ್ಕಾರವನ್ನು ಆಗ್ರಹಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ. ಈ ವರ್ಷ ಕೇರಳದಲ್ಲಿ ರಬ್ಬರ್ ಕೃಷಿಗೆ ಅನುಕೂಲಕರವಾದ ಹವಾಮಾನ ಇದ್ದು ಫಸಲು ಜಾಸ್ತಿಯಾಗಿ ದರ ಮತ್ತೂ ಕುಸಿಯುವ ಸಾಧ್ಯತೆಯ ಬಗ್ಗೆ ತಜ್ಞರು ಎಚ್ಚರಿಸಿದ್ದಾರೆ. ರೈತರನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಲು ಸರಕಾರ ಮಾರುಕಟ್ಟೆ ಬೆಂಬಲ ಬೆಲೆ ಯೋಜನೆಯಡಿ ರಬ್ಬರ್ ಖರೀದಿಸಬೇಕು. ರೈತರು ಮಿಶ್ರ ಬೆಳೆ ಪದ್ಧತಿಯನ್ನು ಅನುಸರಿಸದಿದ್ದರೆ ದರ ಕುಸಿತದ ವಿಷ ವರ್ತುಲ ಎಲ್ಲ ಉತ್ಪನ್ನಗಳಿಗೆ ಹಬ್ಬುವ ಸಾಧ್ಯತೆ ಇದೆ. 2016ರಲ್ಲಿ ರಬ್ಬರ್ ಬೋರ್ಡ್ ರಬ್ಬರಿನ ಉತ್ಪಾದನಾ ವೆಚ್ಚ ಕಿಲೋ ಗೆ 172 ರೂ. ಎಂದು ಅಂದಾಜಿಸಿದೆ. ಪ್ರಸ್ತುತ ಅದು ಕಿಲೋಗೆ 250 ರೂ.ಗೆ ತಲುಪಿದೆ. ರೈತರನ್ನು ರಕ್ಷಿಸುವ ಮೂಲಕ ಮಿಶ್ರಬೆಳೆ ಕೃಷಿಗೆ ಉತ್ತೇಜನ ನೀಡುವಂತೆ ಮನವಿಯಲ್ಲಿ ಮುಖ್ಯಮಂತ್ರಿ ಯವರನ್ನು ಆಗ್ರಹಿಸಲಾಗಿದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ತಿಳಿಸಿದ್ದಾರೆ.