ಗಾಜಾದಲ್ಲಿ ಯಹೂದಿಗಳ ವಸಾಹತು ಸ್ಥಾಪಿಸುವಂತೆ ಒತ್ತಾಯ

ಟೆಲ್ ಅವೀವ್ (ಇಸ್ರೇಲ್) : ಗಾಜಾ ಮತ್ತು ಉತ್ತರ ಸಮರಿಯಾದಲ್ಲಿ ಯಹೂದಿಗಳ ಪುನರ್ವಸತಿಗಾಗಿ ಹನ್ನೊಂದು ಪ್ರಮುಖ ಬಲಪಂಥೀಯ ಸಂಘಟನೆಗಳು ಒಗ್ಗೂಡಿವೆ. ಸಮರಿಯಾ ಪ್ರಾದೇಶಿಕ ಮಂಡಳಿ ಮತ್ತು ನಹಲಾ ಚಳವಳಿಯ ಮುಖ್ಯಸ್ಥ ಯೋಸಿ ದಗ್ಗನ್ ಈ ಅಭಿಯಾನದ ನೇತೃತ್ವ ವಹಿಸಿದ್ದಾರೆಯುದ್ಧ ಮುಗಿದ ಬಳಿಕ ಗಾಜಾದಲ್ಲಿ ಯಹೂದಿಗಳ ನೆಲೆಗೆ ಅವಕಾಶ ನೀಡುವಂತೆ ಇಸ್ರೇಲ್​ನ ಹಲವಾರು ಬಲಪಂಥೀಯ ಸಂಘಟನೆಗಳು ಬೆಂಜಮಿನ್ ನೆತನ್ಯಾಹು ಸರಕಾರದ ಮೇಲೆ ಒತ್ತಡ ಹೇರಲು ಆರಂಭಿಸಿವೆ.ಯುದ್ಧದ ನಂತರ ಗಾಜಾ ಪಟ್ಟಿಯಲ್ಲಿ ಯಹೂದಿಗಳ ವಸಾಹತು ಸ್ಥಾಪಿಸುವಂತೆ ಇಸ್ರೇಲ್​ನ ಬಲಪಂಥೀಯ ಸಂಘಟನೆಗಳು ಆಗ್ರಹಿಸಿವೆ.

ಯಹೂದಿಗಳ ವಸಾಹತು ಸ್ಥಾಪನೆಯ ಮೊದಲ ಹೆಜ್ಜೆಯಾಗಿ ಉತ್ತರ ಗಾಜಾದಲ್ಲಿ ಪುನರ್ವಸತಿಗಾಗಿ ಉಪಕ್ರಮ ತೆಗೆದುಕೊಳ್ಳುವಂತೆ ಇಸ್ರೇಲ್ ಸರ್ಕಾರಕ್ಕೆ ಬಲಪಂಥೀಯ ಸಂಘಟನೆಗಳ ಒಕ್ಕೂಟ ಮನವಿ ಮಾಡಿದ್ದು, ನಂತರ ಅದನ್ನು ಅಶ್ಕಿಲೋನ್​ಗೆ ಹತ್ತಿರವಿರುವ ಮಾಜಿ ಯಹೂದಿ ವಸಾಹತುಗಳಾದ ನಿಟ್ಜಾನ್, ಎಲ್ ಸಿನಾಯ್ ಮತ್ತು ಡುಗಿಟ್​ಗೆ ವಿಸ್ತರಿಸುವಂತೆ ಕೇಳಿದೆ..ಯಹೂದಿ ಜನರ ವಸಾಹತು ಈ ಪ್ರದೇಶದ ಭದ್ರತೆಗೆ ಸಂಬಂಧಿಸಿರುವುದರಿಂದ ಯುದ್ಧ ಮುಗಿದ ಕೂಡಲೇ ಈ ಪ್ರದೇಶಗಳಲ್ಲಿ ಯಹೂದಿ ಜನತೆಯ ಪುನರ್ವಸತಿ ಕೈಗೊಳ್ಳುವಂತೆ ಅವರು ಸರ್ಕಾರಕ್ಕೆ ಕರೆ ನೀಡಿದರು.ಟೆಲ್ ಅವೀವ್​​ನಲ್ಲಿ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ದಗ್ಗನ್, ಗಾಜಾದಲ್ಲಿ ಯಹೂದಿಗಳ ಪುನರ್ವಸತಿ ಮಾತ್ರ ಇಸ್ರೇಲ್​ಗೆ ಭದ್ರತೆ ಒದಗಿಸಬಲ್ಲದು ಮತ್ತು ಉತ್ತರ ಗಾಜಾದಲ್ಲಿ ಯಹೂದಿ ವಸಾಹತುಗಳು ಮರಳಿದ ನಂತರವೇ ಹಮಾಸ್ ವಿರುದ್ಧ ನಿಜವಾದ ಗೆಲುವು ಸಿಗಲಿದೆ ಎಂದು ಹೇಳಿದರು.

ಅಕ್ಟೋಬರ್ 7 ರಂದು ಹಮಾಸ್ ಉಗ್ರರು ಇಸ್ರೇಲ್​ನೊಳಗೆ ನುಗ್ಗಿ ಸಾವಿರಾರು ಇಸ್ರೇಲಿಗರನ್ನು ಕೊಲೆಮಾಡಿ ನೂರಾರು ಜನರನ್ನು ಒತ್ತೆಯಾಳಾಗಿ ತೆಗೆದುಕೊಂಡು ಹೋಗಿದ್ದರು. ಇದರ ನಂತರ ಗಾಜಾ ಪಟ್ಟಿ ಮೇಲೆ ನಿರಂತರ ದಾಳಿ ನಡೆಸುತ್ತಿರುವ ಇಸ್ರೇಲ್, ಹಮಾಸ್​ ಉಗ್ರ ಸಂಘಟನೆಯನ್ನು ಸಂಪೂರ್ಣವಾಗಿ ನಿರ್ನಾಮ ಮಾಡುವ ಪಣ ತೊಟ್ಟಿದೆ. ಗಾಜಾ ಪಟ್ಟಿಯಲ್ಲಿ ಹೆಚ್ಚುತ್ತಿರುವ ಪ್ಯಾಲೆಸ್ಟೈನಿಯರ ಸಾವಿನ ಸಂಖ್ಯೆಯ ಬಗ್ಗೆ ವಿಶ್ವಸಂಸ್ಥೆ ಶುಕ್ರವಾರ ಕಳವಳ ವ್ಯಕ್ತಪಡಿಸಿದೆ. ಇಲ್ಲಿ ಐದು ವಾರಗಳ ಇಸ್ರೇಲ್ ಬಾಂಬ್ ದಾಳಿಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 11,000 ಕ್ಕಿಂತ ಹೆಚ್ಚಾಗಿದೆ ಎಂದು ವಿಶ್ವಸಂಸ್ಥೆಯ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.ಗಾಜಾದಾದ್ಯಂತ ಯಹೂದಿ ಜನಸಂಖ್ಯೆಯನ್ನು ವ್ಯಾಪಕವಾಗಿ ಪುನರ್ವಸತಿಗೊಳಿಸುವ ಅವಶ್ಯಕತೆಯಿದೆ ಮತ್ತು ಓಸ್ಲೋ ಒಪ್ಪಂದಗಳ ನಂತರ ಗಾಜಾ ವಾಪಸಾತಿಯನ್ನು ರದ್ದುಗೊಳಿಸಬೇಕಾಗಿದೆ ಎಂದು ನಹಲಾ ಚಳವಳಿಯ ಜ್ವಿವ್ ಎಲಿಮೆಲೆಕ್ ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.