ಸಂದೇಶ್‌ಖಾಲಿ ಹಿಂಸಾಚಾರ: ಮಮತಾ ಬ್ಯಾನರ್ಜಿ ಸರಕಾರಕ್ಕೆ ಹೈ ಕೋರ್ಟ್ ತರಾಟೆ; ಶಹಜಹಾನ್ ಶೇಖ್ ಶರಣಾಗತಿಗೆ ಸೂಚನೆ

ಕೊಲ್ಕತ್ತ: ಸಂದೇಶ್‌ಖಾಲಿ (Sandeshkhali ) ಹಿಂಸಾಚಾರ ಕುರಿತು ಕಲ್ಕತ್ತಾ ಹೈಕೋರ್ಟ್ ಮಂಗಳವಾರ ಪಶ್ಚಿಮ ಬಂಗಾಳ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದು, ಒಬ್ಬ ವ್ಯಕ್ತಿಯು ಎಲ್ಲವನ್ನೂ ಸುಲಿಗೆ ಮಾಡುತ್ತಿರಲು ಸಾಧ್ಯವಿಲ್ಲ ಮತ್ತು ಹಲವಾರು ಮಹಿಳೆಯರಿಂದ ಲೈಂಗಿಕ ದೌರ್ಜನ್ಯ ಮತ್ತು ಭೂಹಗರಣದ ಆರೋಪ ಹೊತ್ತಿರುವ ತೃಣಮೂಲ ಕಾಂಗ್ರೆಸ್ ನಾಯಕ ಶಹಜಹಾನ್ ಶೇಖ್ ನನ್ನು ರಾಜ್ಯವು ಬೆಂಬಲಿಸಬಾರದು ಎಂದು ಹೇಳಿದೆ.

ರಾಜ್ಯ ಸರ್ಕಾರವು ಆತನನ್ನು ಪ್ರೋತ್ಸಾಹಿಸಲು ಸಾಧ್ಯವಿಲ್ಲ. ಆತ ಹಾನಿ ಮಾಡಿದ್ದಾನೆ ಎಂದು ತೋರಿಸಲು ಪ್ರಾಥಮಿಕ ಸಾಕ್ಷ್ಯಗಳಿವೆ. ಒಬ್ಬ ವ್ಯಕ್ತಿಯು ಇಡೀ ಜನಸಂಖ್ಯೆಯನ್ನು ಸುಲಿಗೆ ಮಾಡುತ್ತಿರಬೇಕಾದರೆ, ಆಡಳಿತವು ಆತನನ್ನು ಬೆಂಬಲಿಸಬಾರದು ಎಂದು ಕೋರ್ಟ್ ಹೇಳಿದೆ.

ಸಂದೇಶಖಾಲಿಗೆ ಭೇಟಿ ನೀಡಲು ಅನುಮತಿ ನೀಡುವಂತೆ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಸಲ್ಲಿಸಿದ ಮನವಿಯನ್ನು ಆಲಿಸಿದ ನ್ಯಾಯಾಲಯ, ಶಹಜಹಾನ್ ಶೇಖ್ ನನ್ನು ಶರಣಾಗುವಂತೆ ಕೇಳುವುದಾಗಿ ಹೇಳಿದೆ.

ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಶಿವಜ್ಞಾನಂ ಮತ್ತು ನ್ಯಾಯಮೂರ್ತಿ ಹಿರಣ್ಮಯ್ ಭಟ್ಟಾಚಾರ್ಯ ಅವರ ವಿಭಾಗೀಯ ಪೀಠವು ಪಶ್ಚಿಮ ಬಂಗಾಳ ಸರ್ಕಾರದ ಮನವಿಯನ್ನು ತಿರಸ್ಕರಿಸುವ ಸಂದರ್ಭದಲ್ಲಿ ಅಧಿಕಾರಿಗೆ ಸಂದೇಶಖಾಲಿಗೆ ಭೇಟಿ ನೀಡಲು ಅನುಮತಿ ನೀಡಿದೆ.

ನ್ಯಾಯಾಲಯದ ಏಕ ಪೀಠವು ವಿರೋಧ ಪಕ್ಷದ ನಾಯಕರಿಗೆ ಸೋಮವಾರ ಈ ಪ್ರದೇಶಕ್ಕೆ ಭೇಟಿ ನೀಡಲು ಅವಕಾಶ ನೀಡಿತ್ತು. ನಂತರ ಬಂಗಾಳ ಸರ್ಕಾರ ವಿಭಾಗೀಯ ಪೀಠದ ಮುಂದೆ ಆದೇಶವನ್ನು ಪ್ರಶ್ನಿಸಿತ್ತು.

“ಆತನನ್ನು ಶರಣಾಗುವಂತೆ ಕೇಳುತ್ತೇವೆ, ಏನು ಮಾಡುತ್ತಾನೆಂದು ನೋಡೋಣ,’’ ಎಂದು ಹೇಳಿದ ನ್ಯಾಯಾಲಯ, ‘‘ಇದಕ್ಕಿಂತ ಮುಖ್ಯವಾದುದೆಂದರೆ ಇಡೀ ವಿಷಯದ ಸೂತ್ರಧಾರಿ ಇನ್ನೂ ತಲೆಮರೆಸಿಕೊಂಡಿದ್ದಾನೆ” ಎಂದಿದೆ.

ಸಂದೇಶಖಾಲಿಯ ಹಲವಾರು ಮಹಿಳೆಯರು ಷಹಜಹಾನ್ ಶೇಖ್ ಮತ್ತು ಅವರ ಬೆಂಬಲಿಗರು ತಮ್ಮ ಮೇಲೆ ಬಲವಂತ ಮಾಡಿ ಭೂ ಕಬಳಿಕೆ ಮತ್ತು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಬಗ್ಗೆ ಕಲ್ಕತ್ತಾ ಹೈಕೋರ್ಟ್ ಸ್ವಯಂ ಪ್ರೇರಿತ ಪ್ರಕರಣ್ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದೆ.