ಸಂದೇಶ್‌ಖಾಲಿ ಜಾರಿ ನಿರ್ದೇಶನಾಲಯ ತಂಡದ ಮೇಲೆ ದಾಳಿ ಪ್ರಕರಣ ಸಿಬಿಐಗೆ ಹಸ್ತಾಂತರಿಸಿದ ಕಲ್ಕತ್ತಾ ಹೈಕೋರ್ಟ್

ಕೋಲ್ಕತ್ತಾ: ಭ್ರಷ್ಟಾಚಾರ ಪ್ರಕರಣ ಸಂಬಂಧಿಸಿ ತೃಣಮೂಲ ಕಾಂಗ್ರೆಸ್‌ನ ಮಾಜಿ ನಾಯಕ ಶೇಖ್ ಷಹಜಹಾನ್ ಮನೆಯಲ್ಲಿ ತನಿಖೆ ನಡೆಸಲು ತೆರಳಿದ್ದ ಜಾರಿ ನಿರ್ದೇಶನಾಲಯ (ED) ತಂಡದ ಮೇಲೆ ದಾಳಿ ನಡೆಸಿದ ಸಂದೇಶ್‌ಖಾಲಿ ಘಟನೆಯ ಪ್ರಕರಣವನ್ನು ಕಲ್ಕತ್ತಾ ಹೈಕೋರ್ಟ್ ಮಂಗಳವಾರ ಕೇಂದ್ರೀಯ ತನಿಖಾ ದಳ (CBI)ಕ್ಕೆ ವಹಿಸಿದೆ ಮತ್ತು ಷಹಜಹಾನ್‌ನನ್ನು ಕೇಂದ್ರ ಏಜೆನ್ಸಿಗೆ ಹಸ್ತಾಂತರಿಸುವಂತೆ ಪೊಲೀಸರಿಗೆ ಸೂಚಿಸಿದೆ.

ಕಲ್ಕತ್ತಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಟಿ ಎಸ್ ಶಿವಜ್ಞಾನಂ ಅವರನ್ನೊಳಗೊಂಡ ವಿಭಾಗೀಯ ಪೀಠವು ನಝತ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಸಂಖ್ಯೆ 8 ಮತ್ತು 9 ಮತ್ತು ಬಂಗಾವ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಸಂಖ್ಯೆ 18 ಅನ್ನು ಸಿಬಿಐ ತನಿಖೆಗೆ ಒಳಪಡಿಸುವಂತೆ ಆದೇಶಿಸಿದೆ.

ಈ ಹಿಂದೆ, ಸಂದೇಶಖಾಲಿ ಘಟನೆಯ ತನಿಖೆಗಾಗಿ ಹೈಕೋರ್ಟ್ ವಿಶೇಷ ತನಿಖಾ ತಂಡವನ್ನು (SIT) ರಚಿಸಿತ್ತು. ಮಂಗಳವಾರ ವಿಭಾಗೀಯ ಪೀಠವು ಎಸ್‌ಐಟಿಯನ್ನು ರದ್ದುಗೊಳಿಸಿ ಸಿಬಿಐ ತನಿಖೆಗೆ ಆದೇಶಿಸಿದೆ.

ಜನವರಿ 5 ರಂದು ಆಪಾದಿತ ಪಡಿತರ ಹಗರಣ ಪ್ರಕರಣದಲ್ಲಿ ಶಹಜಹಾನ್ ಮನೆ ಮೇಲೆ ದಾಳಿ ಮಾಡಲು ಹೊರಟಿದ್ದ ಇಡಿ ತಂಡದ ಮೇಲೆ ನೂರಾರು ಬೆಂಬಲಿಗರು ದಾಳಿ ಮಾಡಿದ ಘಟನೆ ನಡೆದಿತ್ತು. ದಾಳಿಯಲ್ಲಿ ಮೂವರು ಇಡಿ ಅಧಿಕಾರಿಗಳು ಗಾಯಗೊಂಡಿದ್ದರೆ, ಷಹಜಹಾನ್ ತಲೆಮರೆಸಿಕೊಂಡಿದ್ದ. 55 ದಿನಗಳ ಬಳಿಕ ಆತನ ಬಂಧನ ನಡೆದಿತ್ತು.

ಷಹಜಹಾನ್ ವಿರುದ್ದ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಭೂಕಬಳಿಕೆಯ ಆರೋಪಗಳೂ ದಾಖಲಾಗಿವೆ.