ಬೆಂಗಳೂರಿನಲ್ಲಿ ಲಿವ್-ಇನ್ ಸಂಬಂಧಕ್ಕೆ ಒಪ್ಪಿಕೊಂಡು, ಜೊತೆಗಿದ್ದ ಪ್ರೇಯಸಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ವ್ಯಕ್ತಿಯೊಬ್ಬ, ಇದೀಗ ಆಕೆಯ ಸಾವಿಗೆ ಕಾರಣವಾದ ಘಟನೆ ವರದಿಯಾಗಿದೆ.
ಮೃತಪಟ್ಟ ಮಹಿಳೆಯನ್ನು ವನಜಾಕ್ಷಿ (35) ಎಂದು ಗುರುತಿಸಲಾಗಿದೆ. ತನ್ನ ಲಿವ್-ಇನ್ ಪಾರ್ಟ್ನರ್ನಿಂದ ಮೃತಪಟ್ಟ ದುರ್ದೈವಿ. ಬೆಂಕಿಯಲ್ಲಿ ಬೆಂದು ಹೋಗಿದ್ದ ಆಕೆಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ, ತುರ್ತು ಚಿಕಿತ್ಸೆ ಕೊಡಿಸಲಾಯಿತು. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.
ಬೇರೆ ವ್ಯಕ್ತಿಯೊಂದಿಗೆ ಸ್ನೇಹವೇ ಕಾರಣ:
ಆರೋಪಿ ವಿಠಲ್, ವೃತ್ತಿಯಲ್ಲಿ ಓರ್ವ ಕ್ಯಾಬ್ ಚಾಲಕ. ಈತನಿಗೆ ಕುಡಿತದ ಚಟವಿತ್ತು. ವನಜಾಕ್ಷಿಗೂ ಮೊದಲು ಆತನಿಗೆ ಮೂರು ಮದುವೆಯಾಗಿತ್ತು. ಅತ್ತ ಆಕೆಗೆ ಈ ಹಿಂದೆ ಎರಡು ಮದುವೆಯಾಗಿತ್ತು. ಇದಾದ ಬಳಿಕ ಪರಿಚಯಗೊಂಡ ಇವರಿಬ್ಬರು, ನಾಲ್ಕು ವರ್ಷಗಳ ಹಿಂದೆ ಲಿವ್-ಇನ್ ಸಂಬಂಧಕ್ಕೆ ಒಪ್ಪಿಕೊಂಡಿದ್ದರು. ಆದರೆ, ವಿಠಲ್ನ ಕುಡಿತಕ್ಕೆ ಬೇಸತ್ತ ಮಹಿಳೆ, ಇತ್ತೀಚೆಗಷ್ಟೇ ಈ ಸಂಬಂಧ ಕಡಿದುಕೊಂಡು, ಹೊರನಡೆದಿದ್ದಳು. ಇದರಿಂದ ಕುಪಿತಗೊಂಡಿದ್ದ ಆರೋಪಿ, ಆಕೆಗೆ ಮರಿಯಪ್ಪ ಎಂಬ ವ್ಯಕ್ತಿಯೊಂದಿಗೆ ಸ್ನೇಹವಿರುವುದನ್ನು ತಿಳಿದಿದ್ದನು ಎಂದು ವರದಿಯಾಗಿದೆ.
ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಚಾಲಕ:
ಈ ಘಟನೆ ನಡೆಯುವ ದಿನ, ವನಜಾಕ್ಷಿ ಸಾಗುತ್ತಿದ್ದ ಕಾರನ್ನು ಹಿಂಬಾಲಿಸಿದ ವಿಠಲ್, ಆಕೆ ದೇವಸ್ಥಾನದಿಂದ ಹಿಂತಿರುಗುವವರೆಗೂ ಅಲ್ಲೇ ಕಾದು ಕುಳಿತ್ತಿದ್ದ. ನಂತರ, ಟ್ರಾಫಿಕ್ ಸಿಗ್ನಲ್ ಬಳಿ ಆಕೆಯಿದ್ದ ಕಾರನ್ನು ತಡೆದ ಆತ, ವನಜಾಕ್ಷಿ ಮೇಲೆ ಪೆಟ್ರೋಲ್ ಸುರಿದು ಬೆಂಕಿಹಚ್ಚಿಬಿಟ್ಟನು. ಈ ವೇಳೆ ಕಾರಿನಲ್ಲಿದ್ದ ಚಾಲಕ ಮತ್ತು ಮರಿಯಪ್ಪ ಬಚಾವ್ ಆಗಿದ್ದಾರೆ. ಆದರೆ, ಮಹಿಳೆ ಪೂರ್ಣವಾಗಿ ಬೆಂದುಹೋಗಿದ್ದರು. ವನಜಾಕ್ಷಿ ಅವರ ಸುಮಾರು 60 ಭಾಗ ಸುಟ್ಟುಹೊಗಿದ್ದು, ಗಾಯಗಳಿಂದ ನರಳಾಡಿ ಮೃತಪಟ್ಟರು. ಆರೋಪಿ ವಿಠಲ್ನನ್ನು ಪೊಲೀಸರು ಬಂಧಿಸಿದ್ದಾರೆ.












