ನವದೆಹಲಿ: ಪೌರತ್ವ (ತಿದ್ದುಪಡಿ) ಮಸೂದೆ 2019- (CAA) ಈ ಮಸೂದೆಯು 1955 ರ ಪೌರತ್ವ ಕಾಯ್ದೆಗೆ ತಿದ್ದುಪಡಿ ಮಾಡಲು ಪ್ರಸ್ತಾಪಿಸಲಾಗಿದೆ. ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಿಂದ ಧಾರ್ಮಿಕ ಉತ್ಪೀಡನೆಯ ಕಾರಣದಿಂದ ಪಲಾಯನಗೈದ ಹಿಂದೂ, ಸಿಖ್, ಜೈನ, ಪಾರ್ಸಿ, ಬೌದ್ದ ಹಾಗೂ ಕ್ರಿಶ್ಚಿಯನ್ ಮುಂತಾದ ಅಲ್ಪಸಂಖ್ಯಾತ ಸಮುದಾಯದ ಸಂತ್ರಸ್ತರಿಗೆ ಭಾರತೀಯ ಪೌರತ್ವವನ್ನು ನೀಡುವ ಮಸೂದೆ ಇದಾಗಿದೆ.
ಹೊಸ ನಿಯಮಗಳನ್ನು ಜಾರಿಗೆ ತರುವ ಮೊದಲು, ಭಾರತದಲ್ಲಿ ಪೌರತ್ವವನ್ನು ಈ ಹಿಂದಿನ ಪೌರತ್ವ ಕಾಯಿದೆ, 1955 ರ ಮೂಲಕ ನಿಯಂತ್ರಿಸಲಾಗುತ್ತಿತ್ತು. ಈ ಕಾಯಿದೆ ಪ್ರಕಾರ ಭಾರತದಲ್ಲಿ ಐದು ಮಾನದಂಡಗಳ ಮೂಲಕ ಪೌರತ್ವ ದೊರೆಯುತ್ತದೆ. ಜನ್ಮದಿಂದ, ಭಾರತೀಯ ಮೂಲದ ಪೂರ್ವಜರ ಮೂಲಕ, ನೋಂದಣಿ ಮೂಲಕ, ನೈಸರ್ಗಿಕೀಕರಣದ (ವಿಸ್ತೃತ ನಿವಾಸ) ಮೂಲಕ ಮತ್ತು ಅನ್ಯ ಭೂಪ್ರದೇಶವನ್ನು ಭಾರತಕ್ಕೆ ಸೇರಿಸುವ ಮೂಲಕ ಭಾರತದಲ್ಲಿ ಪೌರತ್ವವನ್ನು ಪಡೆದುಕೊಳ್ಳಬಹುದು ಎಂದು ಕಾಯಿದೆ ನಿರ್ದಿಷ್ಟಪಡಿಸುತ್ತದೆ. ಹೊಸ ಕಾನೂನು ಭಾರತದಲ್ಲಿ ಪೌರತ್ವವನ್ನು ಪಡೆಯಲು ಆರನೇ ಮಾನದಂಡವಾಗಿ ಧರ್ಮವನ್ನು ಪರಿಚಯಿಸುತ್ತದೆ.
ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಿಂದ ಧಾರ್ಮಿಕ ಉತ್ಪೀಡನೆಯ ಕಾರಣ ಪಲಾಗೈದು ಭಾರತದಲ್ಲಿ ಶರಣಾರ್ಥಿಗಳಾಗಿರುವವರನ್ನು ಅಕ್ರಮ ವಲಸಿಗರು ಎಂದು ಪರಿಗಣಿಸಲಾಗುವುದಿಲ್ಲ ಮತ್ತು ಅವರು ಪೌರತ್ವಕ್ಕೆ ಅರ್ಹರಾಗುತ್ತಾರೆ ಎಂದು ಮಸೂದೆ ಪ್ರಸ್ತಾಪಿಸುತ್ತದೆ.
ಈ ವಲಸಿಗರು ಡಿಸೆಂಬರ್ 31, 2014 ರ ಮೊದಲು ಯಾವುದೇ ಸಮಯದಲ್ಲಿ ಭಾರತಕ್ಕೆ ಪ್ರವೇಶಿಸಿದ ದಿನಾಂಕದಿಂದ ಭಾರತೀಯ ಪ್ರಜೆಗಳಾಗುತ್ತಾರೆ. ಅಕ್ರಮ ವಲಸಿಗರು ಅಥವಾ ಅವರ ಪೌರತ್ವಕ್ಕೆ ಸಂಬಂಧಿಸಿದ ಎಲ್ಲಾ ಕಾನೂನು ಪ್ರಕ್ರಿಯೆಗಳನ್ನು ಕೊನೆಗೊಳಿಸಲಾಗುತ್ತದೆ.
ಪೌರತ್ವಕ್ಕೆ ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು:
ಡಿಸೆಂಬರ್ 31, 2014 ರ ಮೊದಲು ಭಾರತಕ್ಕೆ ಬಂದಿರಬೇಕು.
ಕಳೆದ 14 ವರ್ಷಗಳಲ್ಲಿ ಕನಿಷ್ಠ ಐದು ವರ್ಷಗಳಿಂದ ಭಾರತದಲ್ಲಿ ವಾಸಿಸುತ್ತಿರಬೇಕು.
ನಿಗದಿತ ವರ್ಗದ ವಲಸಿಗರಿಗೆ, ವಾಸಿಸುವ ವರ್ಷಗಳ ಸಂಖ್ಯೆಯನ್ನು ಹಿಂದಿನ ಗರಿಷ್ಠ 11 ವರ್ಷದಿಂದ 5 ವರ್ಷಗಳಿಗೆ ಸಡಿಲಿಸಲಾಗಿದೆ.
ವಲಸಿಗರ ಪೌರತ್ವದ ತಿದ್ದುಪಡಿಗಳು ಕೆಲವು ಪ್ರದೇಶಗಳಿಗೆ ಅನ್ವಯಿಸುವುದಿಲ್ಲ. ಇವುಗಳಲ್ಲಿ ಸಂವಿಧಾನದ ಆರನೇ ಶೆಡ್ಯೂಲ್ನಲ್ಲಿ ಸೇರಿಸಲಾದ ಅಸ್ಸಾಂ, ಮೇಘಾಲಯ, ಮಿಜೋರಾಂ ಮತ್ತು ತ್ರಿಪುರಾದ ಬುಡಕಟ್ಟು ಪ್ರದೇಶಗಳು ಸೇರಿವೆ . ವಿನಾಯಿತಿಗಳು 1873 ರ ಬೆಂಗಾಲ್ ಈಸ್ಟರ್ನ್ ಫ್ರಾಂಟಿಯರ್ ರೆಗ್ಯುಲೇಷನ್ಸ್ ಅಡಿಯಲ್ಲಿ “ಇನ್ನರ್ ಲೈನ್” ಅನುಮತಿಯಿಂದ ನಿಯಂತ್ರಿಸಲ್ಪಡುವ ರಾಜ್ಯಗಳನ್ನು ಸಹ ಒಳಗೊಂಡಿದೆ.
ಭಾರತದ ಸಾಗರೋತ್ತರ ನಾಗರಿಕರ (OCI) ಕಾರ್ಡುದಾರರಿಗೆ ಸಂಬಂಧಿಸಿದ ನಿಬಂಧನೆಗಳಿಗೆ ಕಾನೂನು ತಿದ್ದುಪಡಿಗಳನ್ನು ಮಾಡಿದೆ. ಅವರು ಭಾರತೀಯ ಮೂಲದವರಾಗಿದ್ದರೆ ಅಥವಾ ಭಾರತೀಯ ಮೂಲದ ವ್ಯಕ್ತಿಯ ಸಂಗಾತಿಯಾಗಿದ್ದರೆ ವಿದೇಶಿಗರು 1955 ರ ಕಾಯಿದೆಯಡಿ OCI ಆಗಿ ನೋಂದಾಯಿಸಿಕೊಳ್ಳಬಹುದು. ಇದು ಅವರಿಗೆ ಭಾರತಕ್ಕೆ ಪ್ರಯಾಣಿಸುವ ಹಕ್ಕು, ಮತ್ತು ದೇಶದಲ್ಲಿ ಕೆಲಸ ಮಾಡುವ ಮತ್ತು ಅಧ್ಯಯನ ಮಾಡುವ ಹಕ್ಕುಗಳಂತಹ ಪ್ರಯೋಜನಗಳಿಗೆ ಅರ್ಹತೆ ನೀಡುತ್ತದೆ.
ಕೇಂದ್ರ ಸರ್ಕಾರವು ಸೂಚಿಸಿದ ಯಾವುದೇ ಕಾನೂನನ್ನು ವ್ಯಕ್ತಿಯು ಉಲ್ಲಂಘಿಸಿದ್ದರೆ OCI ನೋಂದಣಿಯನ್ನು ರದ್ದುಗೊಳಿಸಲು ಕಾನೂನು ಕಾಯ್ದೆಯನ್ನು ತಿದ್ದುಪಡಿ ಮಾಡಿದೆ.
ಪೌರತ್ವ ತಿದ್ದುಪಡಿ ಕಾಯ್ದೆ-2019
ಪೌರತ್ವ ತಿದ್ದುಪಡಿ ಮಸೂದೆ-2019 ಅನ್ನು ಡಿಸೆಂಬರ್ 2019 ರಲ್ಲಿ ಸಂಸತ್ತಿನಲ್ಲಿ ಅಂಗೀಕರಿಸಲಾಯಿತು. ಲೋಕಸಭೆಯು ಡಿಸೆಂಬರ್ 9 ರಂದು ಮಸೂದೆಯನ್ನು ಅಂಗೀಕರಿಸಿದರೆ, ರಾಜ್ಯಸಭೆಯು ಡಿಸೆಂಬರ್ 11 ರಂದು ಅದನ್ನು ಅಂಗೀಕರಿಸಿತು. ಡಿಸೆಂಬರ್ 13 ರಂದು ಮಸೂದೆಗೆ ರಾಷ್ಟ್ರಪತಿಯ ಅಂಕಿತ ದೊರಕಿತು. ಜನವರಿ 10, 2020 ರಂದು ಜಾರಿಗೆ ಬಂತು.