ಬೆಂಗಳೂರು: ರಾಜರಾಜೇಶ್ವರಿ ನಗರ (ಆರ್ ಆರ್) ಕ್ಷೇತ್ರ ಹಾಗೂ ಶಿರಾ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದ್ದು, ನವೆಂಬರ್ 3ರಂದು ಎರಡೂ ಕ್ಷೇತ್ರಗಳಿಗೂ ಚುನಾವಣೆ ನಡೆಯಲಿದೆ. ನ.10ರಂದು ಫಲಿತಾಂಶ ಪ್ರಕಟವಾಗಲಿದೆ.
ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರ್ಪಡೆಗೊಂಡ ಹಿನ್ನೆಲೆಯಲ್ಲಿ ಆರ್ ಆರ್ ನಗರ ಕ್ಷೇತ್ರದ ಶಾಸಕರಾಗಿದ್ದ ಮುನಿರತ್ನನಾಯ್ಡು ಅನರ್ಹರಾಗಿದ್ದರು. ಶಿರಾ ಕ್ಷೇತ್ರದ ಜೆಡಿಎಸ್ ಶಾಸಕರಾಗಿದ್ದ ಸತ್ಯನಾರಾಯಣ ಬಿ. ಅವರು ಅನಾರೋಗ್ಯದಿಂದ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ತೆರವಾಗಿದ್ದ ಎರಡು ಕ್ಷೇತ್ರಗಳಿಗೂ ಉಪಚುನಾವಣೆ ಘೋಷಣೆಯಾಗಿದೆ.
ಅಕ್ಟೋಬರ್ 9ರಂದು ಚುನಾವಣೆ ಅಧಿಸೂಚನೆ ಪ್ರಕಟವಾಗಲಿದೆ. ಅ. 16ರಂದು ನಾಮಪತ್ರ ಸಲ್ಲಿಕೆ ಕೊನೆಯ ದಿನ. ಅ.19 ರಂದು ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ. ನ. 10ರಂದು ಉಪಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ.
ಶಿರಾ ಕ್ಷೇತ್ರಕ್ಕೆ ಕಾಂಗ್ರೆಸ್ ನಿಂದ ಕಳೆದ ಬಾರಿ ಪರಾಭವಗೊಂಡಿದ್ದ ಬಿ. ಜಯಚಂದ್ರ ಅಭ್ಯರ್ಥಿಯಾಗಿ ಅಂತಿಮಗೊಂಡಿದ್ದಾರೆ. ಜೆಡಿಎಸ್ ಹಾಗೂ ಬಿಜೆಪಿಯಿಂದ ಅಭ್ಯರ್ಥಿಗಳು ಆಯ್ಕೆಯಾಗಿಲ್ಲ.
ಆರ್ ಆರ್ ನಗರದಲ್ಲಿ ಬಿಜೆಪಿಯಿಂದ ಮುನಿರತ್ನ ನಾಯ್ಡು ಅಭ್ಯರ್ಥಿಯಾಗಲಿದ್ದು, ಕಾಂಗ್ರೆಸ್ ನಿಂದ ಯಾರು ಅಭ್ಯರ್ಥಿ ಆಗಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ. ಹಾಗೆಯೇ ಜೆಡಿಎಸ್ ಯಾವ ರೀತಿಯ ರಣತಂತ್ರ ಹೆಣೆಯಲಿದೆ ಎಂಬುವುದನ್ನು ಕಾದುನೋಡಬೇಕಿದೆ.