ಉಪಚುನಾವಣಾ ಫಲಿತಾಂಶ: ಎಲ್ಲ ಪಕ್ಷಗಳಿಗೂ ಸ್ವಲ್ಪ ಸಿಹಿ, ಸ್ವಲ್ಪ ಕಹಿ ಅನುಭವ

ನವದೆಹಲಿ: ಮೂರು ಲೋಕಸಭಾ ಸ್ಥಾನಗಳಿಗೆ ಉತ್ತರ ಪ್ರದೇಶದ ಅಜಂಗಢ ಮತ್ತು ರಾಂಪುರ ಹಾಗೂ ಪಂಜಾಬ್‌ನ ಸಂಗ್ರೂರ್ ಮತ್ತು ವಿಧಾನಸಭಾ ಸ್ಥಾನಗಳಿಗೆ ತ್ರಿಪುರಾ, ಜಾರ್ಖಂಡ್, ಆಂಧ್ರಪ್ರದೇಶ ಮತ್ತು ದೆಹಲಿಯಲ್ಲಿ ಉಪಚುನಾವಣೆಗಳು ನಡೆದಿದ್ದವು.

ಚುನಾವಣಾ ಫಲಿತಾಂಶದಲ್ಲಿ ಉತ್ತರಪ್ರದೇಶದ ರಾಮ್‌ಪುರ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಘನಶ್ಯಾಮ್ ಸಿಂಗ್ ಲೋಧಿ ಸಮಾಜವಾದಿ ಪಕ್ಷದ ಅಭ್ಯರ್ಥಿಯನ್ನು ಸೋಲಿಸಿ ಗೆಲುವು ಸಾಧಿಸಿದ್ದಾರೆ. ದೆಹಲಿಯ ರಾಜಿಂದರ್ ನಗರ ಉಪಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಭರ್ಜರಿ ಜಯ ಸಾಧಿಸಿದೆ. ಏತನ್ಮಧ್ಯೆ, ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಸಾಹಾ ಟೌನ್ ಬರ್ಡೋವಾಲಿ ಉಪಚುನಾವಣೆಯಲ್ಲಿ ಜಯಗಳಿಸಿದ್ದಾರೆ. ಆಂಧ್ರಪ್ರದೇಶದ ಆತ್ಮಕೂರಿನಲ್ಲಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಮೇಕಪತಿ ವಿಕ್ರಮ್ ರೆಡ್ಡಿ ಭಾರಿ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಪಂಜಾಬ್‌ನ ಸಂಗ್ರೂರ್‌ನಲ್ಲಿ, ಶಿರೋಮಣಿ ಅಕಾಲಿದಳದ ಸಿಮ್ರಂಜಿತ್ ಸಿಂಗ್ ಮಾನ್ ಆಪ್ ಅಭ್ಯರ್ಥಿ ಗುರ್ಮೈಲ್ ಸಿಂಗ್ ಅವರನ್ನು ಹಿಂದಿಕ್ಕಿ ಮುಂದೆ ಸಾಗುತ್ತಿದ್ದಾರೆ ಎಂದು ವರದಿಯಾಗಿದೆ.

ಒಟ್ಟಾರೆಯಾಗಿ ಎಲ್ಲ ಪಕ್ಷಗಳಿಗೂ ಸ್ವಲ್ಪ ಸಿಹಿ ಸ್ವಲ್ಪ ಕಹಿ ಫಲಿತಾಂಶಗಳು ದೊರೆತಿವೆ.