ಕುಂದಾಪುರ: ಬಿಜೂರು ಗರಡಿ, ಕಳಿಹಿತ್ಲು, ನಿಸರ್ಗಕೇರಿ ಗ್ರಾಮಸ್ಥರು ಜಿಲ್ಲಾಡಳಿತ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಿಲ್ಲ ಎಂದು ಆರೋಪಿಸಿ ಮತದಾನ ಬಹಿಷ್ಕಾರ ಹಾಕಿದರು.
ಕಳೆದ ಕೆಲ ವರ್ಷಗಳಿಂದ ಕುಡಿಯುವ ನೀರಿನ ಬೇಡಿಕೆ ಇಡುತ್ತಲೇ ಬಂದಿದ್ದೇವೆ. ಆದರೆ ಜಿಲ್ಲಾಡಳಿತ ನಮ್ಮ ಬೇಡಿಕೆ ಈಡೇರಿಸಿಲ್ಲ ಹೀಗಾಗಿ ಚುನಾವಣೆ ಬಹಿಷ್ಕರಿಸುತ್ತೇವೆ ಎಂದು ಇಲ್ಲಿನ ನಿವಾಸಿಗಳು ಒಂದು ತಿಂಗಳ ಹಿಂದೆಯೇ ಬ್ಯಾನರ್ ಅಳವಡಿಸಿ ಚುನಾವಣಾ ಬಹಿಷ್ಕಾರದ ಎಚ್ಚರಿಕೆ ನೀಡಿದ್ದರು. ಅಧಿಕಾರಿಗಳು ಮಧ್ಯಪ್ರವೇಶಿಸಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುತ್ತೇವೆಂದು ಗ್ರಾಮಸ್ಥರ ಮನವೊಲಿಸಿದ ಬಳಿಕ ಬ್ಯಾನರ್ ತೆರವುಗೊಳಿಸಲಾಗಿತ್ತು. ಆದರೆ ಒಂದು ತಿಂಗಳು ಕಳೆದರೂ ಜಿಲ್ಲಾಡಳಿತ ನೀರಿನ ಸಮಸ್ಯೆ ಈಡೇರಿಸಿಲ್ಲ ಎಂದು ಆರೋಪಿಸಿದ ಗರಡಿ, ಕಳಿಹಿತ್ಲು, ನಿಸರ್ಗಕೇರಿಯ ಸುಮಾರು ೫೦ ಕುಟುಂಬಗಳು ಮತದಾನ ಮಾಡದೆ ಅಧಿಕಾರಗಳ, ಜನಪ್ರತಿನಿಧಿಗಳ ವಿರುದ್ದ ತಮ್ಮ ಆಕ್ರೋಶವನ್ನು ಹೊರಗೆಡವಿದರು.
ಮಧ್ಯಾಹ್ನದ ತನಕವೂ ಕೇವಲ ಬೆರಳೆಣಿಕೆಯಷ್ಟು ಮಂದಿ ಮತಚಲಾಯಿಸಿದ್ದು, ಮತಗಟ್ಟೆ ಬಿಕೋ ಎನ್ನುತ್ತಿತ್ತು. ಮಧ್ಯಾಹ್ನದ ಬಳಿಕ ಕೆಲವರು ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದ್ದು, ಸಂಜೆ ವೇಳೆಗೆ ಈ ಭಾಗದಲ್ಲಿ ಶೇಕಡಾ ಐವತ್ತರಷ್ಟು ಮತದಾನ ಪೂರ್ಣಗೊಂಡವು.
ಸಿಡಿಲಬ್ಬರದ ನಡುವೆಯೂ ಮತದಾನ!:
ಬೈಂದೂರು ವ್ಯಾಪ್ತಿಯ ಉಳಿದೆಡೆ ಯಾವುದೇ ಅಹಿತಕರ ಘಟನೆ ನಡೆಯದೇ ಶಾಂತ ಮತದಾನ ನಡೆಯಿತು. ಹೆಚ್ಚಿನ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಹಿಳಾ ಮತದಾರರು ಅತ್ಯಂತ ಉತ್ಸಾಹದಲ್ಲಿ ಮತ ಚಲಾಯಿಸಿದ್ದು ಕಂಡುಬಂತು. ಮಧ್ಯಾಹ್ನ ೧ರ ಸುಮಾರಿಗೆ ಶೇ.೪೫ ಮತದಾನವಾಗಿತ್ತು. ಅಪರಾಹ್ನ ಗಂಟೆ ೩ರ ನಂತರ ಮೋಡಕವಿದ ವಾತಾವರಣದಿಂದ ಕೆಲವೆಡೆ ತುಂತುರು ಮಳೆಯಾಯಿತು. ಅರೆಶಿರೂರು ಭಾಗದಲ್ಲಿ ಗುಡುಗು- ಸಿಡಿಲು ಹಾಗೂ ಮಿಂಚಿನ ಅಬ್ಬರ ಜೋರಾಗಿತ್ತು. ಆದರೂ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿದ್ದು ವಿಶೇಷವಾಗಿತ್ತು.