ಬೈಂದೂರು: ಸೈನ್ ಇನ್ ಸೆಕ್ಯೂರಿಟಿ ಸಿಬ್ಬಂದಿ ಸಮಯಪ್ರಜ್ಞೆಯಿಂದ ಸೊಸೈಟಿಗೆ ಕನ್ನ ಹಾಕಿದ್ದ ಕಳ್ಳರ ಸಂಚು ವಿಫಲ

ಉಡುಪಿ: ಸೈನ್ ಇನ್ ಸೆಕ್ಯೂರಿಟಿ ಸಂಸ್ಥೆಯ ಲೈವ್ ಮಾನಿಟರಿಂಗ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಯ ಸಮಯಪ್ರಜ್ಞೆಯಿಂದಾಗಿ ಸೊಸೈಟಿ ಕಳ್ಳತನಕ್ಕೆ ಯತ್ನಿಸಿದ್ದ ದುಷ್ಕರ್ಮಿಗಳ ಸಂಚು ವಿಫಲಗೊಂಡಿರುವ ಘಟನೆ ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಅರೆಶಿರೂರಿನಲ್ಲಿ ಶನಿವಾರ ನಸುಕಿನ ಜಾವ ನಡೆದಿದೆ.

ಕೊಲ್ಲೂರು ವ್ಯವಸಾಯ ಸೇವಾ ಸಹಕಾರಿ ಸಂಘ ಅರೆಶಿರೂರು ಶಾಖೆಗೆ ಶನಿವಾರ 2:42 ರ ಸುಮಾರಿಗೆ ಆಗಮಿಸಿದ ಕಳ್ಳರು ಹೊರಗಡೆ ಗೋಡೆಗೆ ಅಳವಡಿಸಲಾಗಿದ್ದ ಬಲ್ಬ್ ಅನ್ನು ಕಿತ್ತು ಕಿಟಕಿಯ ಗ್ರಿಲ್ ಮುರಿಯಲಾರಂಭಿಸಿದ್ದಾರೆ. ಈ ವೇಳೆ ಸೈನ್ ಇನ್ ಸೆಕ್ಯೂರಿಟಿ ಸಂಸ್ಥೆಯ ಸಿಸಿ ಟಿವಿ ಲೈವ್ ನಲ್ಲಿ ವೀಕ್ಷಣೆ ಮಾಡುತ್ತಿದ್ದ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ.

2:42ಕ್ಕೆ ಸೊಸೈಟಿಗೆ ಆಗಮಿಸಿದ ಇಬ್ಬರು ಕಳ್ಳರು 2:47 ರ ಸುಮಾರಿಗೆ ಗ್ಯಾಸ್ ಕಟ್ಟರ್ ಮೂಲಕ ಕಿಟಿಕಿ ಗ್ರಿಲ್ ಕತ್ತರಿಸಲಾರಂಭಿಸಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ವೃತ್ತ ನಿರೀಕ್ಷಕ ಸವಿತ್ರತೇಜ್ ಹಾಗೂ ಠಾಣಾಧಿಕಾರಿ ತಿಮ್ಮೇಶ್ ಮತ್ತು ಸಿಬ್ಬಂದಿಗಳು ಕೇವಲ ಹದಿನೈದು ನಿಮಿಷದೊಳಗೆ ಸ್ಥಳಕ್ಕಾಗಮಿಸುವ ಮೊದಲೇ ಇಬ್ಬರು ಕಳ್ಳರು ಕಾಲ್ಕಿತ್ತಿದ್ದಾರೆ
ಸೈನ್ ಇನ್ ಸೆಕ್ಯೂರಿಟಿ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಸೊಸೈಟಿ ಮುಖ್ಯಸ್ಥರಿಗೆ ಮಾಹಿತಿ ರವಾನಿಸಿದ್ದರು.

ಸೈನ್ ಇನ್ ಸೆಕ್ಯೂರಿಟಿ ಸಿಬ್ಬಂದಿಗಳ ಮಾತನ್ನು ಮೀರಿ ಪೊಲೀಸರು ಬರುವ ಮೊದಲೇ ಸೊಸೈಟಿ ವಾಹನ ಸ್ಥಳಕ್ಕಾಗಮಿಸಿದ್ದರಿಂದ ಶಬ್ದ ಗಮನಿಸಿದ ಕಳ್ಳರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಪೊಲೀಸರು ಬರುವ ಎರಡು-ಮೂರು ನಿಮಿಷಗಳಲ್ಲೇ ಕಳ್ಳರು ಕಾಲ್ಕಿತ್ತಿದ್ದರಿಂದ ಸ್ವಲ್ಪದರಲ್ಲೇ ಬಚಾವ್ ಆಗಿದ್ದಾರೆ. ಸದ್ಯ ಸಂಭವಿಸಬಹುದಾದ ಬಹುದೊಡ್ಡ ಕಳ್ಳತನವೊಂದು ತಪ್ಪಿ ಹೋಗಿದೆ.