ಕುಂದಾಪುರ: ಶಾಸಕರಾಗಿ ಆಯ್ಕೆಯಾದ ದಿನದಿಂದಲೂ ಒಂದಿಲ್ಲೊಂದು ವಿಚಾರಗಳಿಗೆ ಸದಾ ಸುದ್ದಿಯಾಗುತ್ತಲೇ ಇರುವ ಬೈಂದೂರು ಶಾಸಕ ಸುಕುಮಾರ ಶೆಟ್ಟಿ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಬಾರ್ ವಿವಾದ ಒಂದರ ಕುರಿತು ರಾಜಿ ಮಾತುಕತೆಗೆ ಮನೆಗೆ ಕರೆಯಿಸಿ ತಮ್ಮದೇ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಬಲವಾದ ಆರೋಪ ಕೇಳಿಬಂದಿದೆ.
ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆಗೆ ಮುಂದಾದ್ರಾ?
ಬಂಟ್ ಸುಮುದಾಯದ ಇಬ್ಬರ ನಡುವೆ ಜಾಗದ ತಕರಾರೊಂದಕ್ಕೆ ನಡೆದ ಹಲ್ಲೆ ವಿಚಾರಕ್ಕೆ ಸಂಬಧಿಸಿದಂತೆ ಶಾಸಕ ಸುಕುಮಾರ ಶೆಟ್ಟಿ ಪ್ರಕರಣವನ್ನು ರಾಜಿಯಲ್ಲಿ ಇತ್ಯರ್ಥಗೊಳಿಸಲು ಮಾತುಕತೆಗಾಗಿ ಎರಡೂ ತಂಡಗಳನ್ನು ಶುಕ್ರವಾರ ಸಂಜೆ ನೆಂಪುವಿನಲ್ಲಿರುವ ತಮ್ಮ ನಿವಾಸಕ್ಕೆ ಕರೆದಿದ್ದರು. ಮಾತುಕತೆ ನಡೆಸುತ್ತಿರುವಾಗ ಏಕಾಏಕಿ ಸುಕುಮಾರ ಶೆಟ್ಟಿ ಅವರ ಬೆಂಬಲಿಗರು ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ ಎನ್ನಲಾಗಿದೆ. ಈ ವೇಳೆ ಹಲ್ಲೆ, ಮಾತಿನ ಚಕಮಕಿ ನಡೆದಿದ್ದು ಬಿಜೆಪಿ ಕಾರ್ಯಕರ್ತರೇ ಶಾಸಕ ಸುಕುಮಾರ ಶೆಟ್ಟಿ ಅವರ ಮೇಲೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಡಿಯೋ ವೈರಲ್:
ಬಳಿಕ ಶಾಸಕರ ಮನೆಯ ಎದುರು ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ಶಾಸಕರ ಏಕಪಕ್ಷೀಯ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆಯಲ್ಲಿ ಶಾಸಕ ಸುಕುಮಾರ್ ಶೆಟ್ಟಿ ಹಾಗೂ ಕಾರ್ಯಕರ್ತರ ನಡುವೆ ನಡೆದ ವಾಗ್ವಾದದ ವಿಡಿಯೋ ತುಣುಕುಗಳು ಇದೀಗ ಸೋಶೀಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿವೆ.
ಈ ಘಟನೆಗೆ ಸ್ಪಂದಿಸಿರುವ ಬೈಂದೂರು ಕ್ಷೇತ್ರದ ಬಿಜೆಪಿ ಪ್ರಧಾನ ಕಾರ್ಯದರ್ಶಿ ದೀಪಕ್ ಕುಮಾರ್ ಶೆಟ್ಟಿ, ಶಾಸಕರ ಮನೆಯಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆದಿಲ್ಲ. ಪ್ರಕರಣವೊಂದರ ರಾಜಿ ಇತ್ಯರ್ಥದ ವೇಳೆ ವಾಗ್ವಾದ ನಡೆದಿತ್ತು. ಕೂಡಲೇ ಶಾಸಕರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಕಾರ್ಯಕರ್ತರ ಮೇಲಿನ ಹಲ್ಲೆ ಆರೋಪ ಸತ್ಯಕ್ಕೆ ದೂರವಾದುದು. ಇದು ಪಕ್ಷದೊಳಗೆ ಅಸಮಧಾನವಿರುವ ಕೆಲವೊಬ್ಬರು ಮಾಡಿರುವ ಕುಕೃತ್ಯವಾಗಿದ್ದು, ಶಾಸಕ ಸುಕುಮಾರ್ ಶೆಟ್ಟಿಯವರನ್ನು ವಿರೋಧಿಸುವವರು ಹೆಣೆದ ಕಟ್ಟುಕತೆ ಇದಾಗಿದೆ ಎಂದಿದ್ದಾರೆ.
ಭಿನ್ನಮತದಿಂದ ಮುನಿದ ಶಾಸಕರು?
ಇನ್ನು ಕಳೆದ ಕೆಲ ದಿನಗಳಿಂದ ಬೈಂದೂರು ಬಿಜೆಪಿಯಲ್ಲಿ ಮುಖಂಡರ ಮಧ್ಯೆ ಭಿನ್ನಮತ ಹೊಗೆಯಾಡುತ್ತಿದ್ದು, ಕೆಲ ಮುಖಂಡರು ಶಾಸಕರ ಕೆಲ ನಡೆಗಳಿಂದ ಮುನಿಸಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಬೈಂದೂರು ಬಿಜೆಪಿ ಕ್ಷೇತ್ರಾಧ್ಯಕ್ಷ ಸದಾನಂದ ಉಪ್ಪಿನಕುದ್ರು ಕೂಡ ಕೆಲ ವಿಚಾರಗಳಿಗೆ ಮುಸಿಕೊಂಡಿದ್ದು, ಶುಕ್ರವಾರ ಶಾಸಕರ ಮನೆಯಲ್ಲಿ ನಡೆದ ವಾಗ್ವಾದಗಳ ಬಗ್ಗೆ ಕ್ಷೇತ್ರಾಧ್ಯಕ್ಷ ಸದಾನಂದ ಉಪ್ಪಿನಕುದ್ರು ತುಟಿಬಿಚ್ಚದಿರುವುದು ಬಿಜೆಪಿಯೊಳಗಿನ ಭಿನ್ನಮತಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ.