ಈ ಸಂಕ ಮುರಿದು ಬಿದ್ದರೆ ಮುಗೀತು ಜನರ ಕತೆ: ಕುಬ್ಜಾ ನದಿ ಸಂಕದ “ಸಂಕಟ” ಕೇಳೋರಿಲ್ಲ

-ಶ್ರೀಕಾಂತ್ ಹೆಮ್ಮಾಡಿ, ಕುಂದಾಪುರ

ಬೈಂದೂರು: ಈ ಕಾಲುಸಂಕದ ಮೇಲೆ ಒಬ್ಬೊಬ್ಬರಾಗಿಯೇ ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ಸಾಗಬೇಕು. ಎಲ್ಲರೂ ಒಮ್ಮೆಲೆ ಕಾಲುಸಂಕ ದಾಟಿದರೆ ನದಿಯ ಪಾಲಾಗೋದು ಪಕ್ಕಾ.  ಊರ ಜನರೇ ಶ್ರಮದಾನದ ಮೂಲಕ ನಿರ್ಮಿಸಿಕೊಂಡ ಕಾಲುಸಂಕ ದಾಟುವುದಿದೆಯಲ್ಲಾ ಅದಕ್ಕೆ ಎಂಟೆದೆ ಬೇಕು. ಕಾಲುಸಂಕದ ಮಟ್ಟ ತಾಗಿ ಕೆಂಬಣ್ಣದಲ್ಲಿ ಕುಬ್ಜೆ ಹರಿಯುವ ರಭಸ ನೋಡಿದರೆ ಎದೆ ಝಲ್ ಅನ್ನುತ್ತೆ. ಪ್ರಾಣದ ಹಂಗು ತೊರೆದು ತುಂಬಿ ಹರಿಯುವ ನದಿ ದಾಟುವ ಆ ಊರಿನ ಜನರ ಗುಂಡಿಗೆ ಮೆಚ್ಚಲೇಬೇಕು.

ಮುರಿದು ಬೀಳುವ ಸ್ಥಿತಿಯಲ್ಲಿ ಸಂಕ:

.ಬೈಂದೂರು ತಾಲೂಕು, ಎಡಮೊಗೆ ಗ್ರಾಮದ ರಾಮ್ ಪೈ ಜೆಡ್ಡು ಕುಮ್ಟಿಬೇರು ಪ್ರದೇಶದ  ಸ್ಥಳೀಯರೇ ತಮ್ಮ ಶ್ರಮದಾನದ ಮೂಲಕ ನಿರ್ಮಿಸಿಕೊಂಡ ಕಾಲುಸಂಕ ಮುರಿದು ಬೀಳುವ ಸ್ಥಿತಿಗೆ ತಲುಪಿದೆ. ಶಾಲಾ ಮಕ್ಕಳು, ವಯೋವೃದ್ದರು, ಕೃಷಿಕರು ತಂತಿ ಮೇಲೆ ಸರ್ಕಸ್ ಮಾಡಿದ ಹಾಗೆ ಕಾಲುಸಂಕ ದಾಟುವುದಿದೆಯಲ್ಲಾ ಅದು ನಿಜಕ್ಕೂ ಸಾಧನೆಯೇ ಸರಿ. ಹಿಡಿ ಉಪ್ಪಿನಿಂದ ಹಿಡಿದು, ಕೃಷಿ ಕಾಯಕದವರೆಗೆ, ಶಾಲಾ ಮಕ್ಕಳಿಂದ ಹಿಡಿದು ಅಂಗನವಾಡಿ ಪುಟಾಣಿಗಳ ತನಕ ಇದೇ ಕಾಲುಸಂಕದ ಮೇಲೆ ಸರ್ಕಸ್ ಮಾಡಿಯೇ ಸಾಗಬೇಕು.

ಹೆಚ್ಚು ಮಳೆ ಬಂದು ಕಾಲುಸಂಕದವರೆಗೂ ನೀರು ಬಂದರೆ ಆ ದಿನ ಇಲ್ಲಿನ ಮಕ್ಕಳು ಶಾಲೆಗೆ ಹೋಗದೆ ಮನೇಲೆ ಕೂರಬೇಕು. ಇನ್ನೊಂದು ದುರಂತವೆಂದರೆ ಕಿರುಸೇತುವೆಗಾಗಿ ಈ ಊರ ಜನರು ಜನಪ್ರತಿನಿಧಿಗಳಿಗೆ ತಲುಪಿಸಿದ ಮನವಿಗಳಿಗೆ ಲೆಕ್ಕವೇ ಇಲ್ಲ. ಕುಬ್ಜಾ ನದಿಗೆ ಕಿರುಸೇತುವೆ ಮಂಜೂರಾಗಿದೆ. ಗುದ್ದಲಿ ಪೂಜೆ ಮಾಡಿದರಾಯಿತು ಎಂದು ನಂಬಿಸಿ ಗೆದ್ದುಹೋದ ಜ್ರನಪ್ರತಿನಿಧಿಗಳು ಮಳೆಗಾಲದಲ್ಲಿ ಇಲ್ಲಿನ ಜನರ ಕಾಲಸಂಕದಲ್ಲಿನ ಸಂಚಾರದ ಕಷ್ಟ ಕಣ್ಣಾರೆ ನೋಡಲೇಬೇಕು.

ಕಾಲುಸಂಕದ ಕತೆ:
ಎಡಮೊಗೆಗೆ ಹೋಗಲು ರಾಮ್‌ಪೈಜೆಡ್ಡು ಹಾಗೂ ಕುಮ್ಟಿಬೇರು ಪ್ರಮುಖ ಸಂಪರ್ಕ ಕೊಂಡಿ ಕುಬ್ಜಾ ನದಿ ಕಾಲುಸಂಕ. ಅದೆಷ್ಟೋ ಶತಮಾನಗಳಿಂದಲೂ ಇಲ್ಲಿನ ಜನರಿಗೆ ಕಾಲುಸಂಕವೇ ಪ್ರಮುಖ ದಾರಿ. ರೇಶನ್ ಬೇಕಾದರೂ ಕಾಲು ಸಂಕ ದಾಟಿ ಬಸ್ ಮೂಲಕ ಎಡಮೊಗೆಗೆ ಹೋಗಿ ತರಬೇಕು. ಇಲ್ಲದಿದ್ದರೆ ೬ ಕೀಮಿ ಸುತ್ತುವರಿದು ಹೋಗಿ ರೇಶನ್ ತರಬೇಕು. ಕಾಲು ಸಂಕದ ಮೂಲಕ ಹೋದರೆ ಸಮೀಪವಾಗುತ್ತದೆ ಎನ್ನುವ ನಿಟ್ಟಿನಲ್ಲಿ ಕಾಲುಸಂಕ ಅವಲಂಬಿತರೇ ಹೆಚ್ಚು. ಪ್ರತೀ ಮಳೆಗಾಲಕ್ಕೂ ಮುನ್ನಾ ಊರವರೇ ಸೇರಿ ಕಾಲುಸಂಕ ಮಾಡಿಕೊಳ್ಳುತ್ತಾರೆ. ಅದಕ್ಕೆ ಬೇಕಾಗುವ ಖರ್ಚು ಕೂಡಾ ಅವರೇ ಭರಿಸುತ್ತಿದ್ದು, ತಾವೇ ಮಾಡಿದ ಕಾಲುಸಂಕದ ಮೇಲೆ ಸಂಚಾರ ಮಾಡುವಾಗ ಜಾರಿ ನೀರಿಗೆ ಬಿದ್ದು, ಕೊಚ್ಚಿಕೊಂಡು ಹೋದವರನ್ನು ಕಾಪಾಡಿ ದಡಕ್ಕೆ ಹಾಕಿದ ಘಟನೆಯೂ ಕೂಡಾ ಸಾಕಷ್ಟಿದೆ.

ಜಾನುವಾರುಗಳು ಹೊಳೆ ದಾಟುವಾಗ ನೀರಿನಲ್ಲಿ ಕೊಚ್ಚಿ ಹೋಗಿದ್ದೂ ಇದೆ. ಶಾಲಾ ಮಕ್ಕಳನ್ನು ಪೋಷಕರು ಕೈಹಿಡಿದು ದಾಟಿಸುತ್ತಾರೆ. ಶಾಲೆ ಬಿಟ್ಟು ಸಂಜೆ ಮನೆಗೆ ಬರುವಾಗಲೂ ಕೆಲಸವೆಲ್ಲ ಬದಿಗೊತ್ತಿ ತಮ್ಮ ಮಕ್ಕಳಿಗಾಗಿ ಕಾದು ಮಕ್ಕಳನ್ನು ದಾಟಿಸಿ ಜಗರೂಕತೆಯಿಂದ ಮನೆಗೆ ಬರುತ್ತಾರೆ. ತಮಗೊಂದು ಕಿರುಸೇತುವೆ ನಿರ್ಮಿಸಿಕೊಡಿ ಎಂಬ ಜನರ ಕೂಗು ಸಂಬಂಧಪಟ್ಟ ಶಾಸಕರಿಗಾಗಲಿ, ಜನಪ್ರತಿನಿಧಿಗಳಿಗಾಗಲಿ ಕೇಳಿಸಲೇ ಇಲ್ಲ. ಚುನಾವಣೆ ಬಂದಾಗ ಕಣ್ಣೊರೆಸಿ ಆಶ್ವಾಸನೆ ಕೊಟ್ಟು ಹೋಗುವ ರಾಜಕೀಯ ಮುಖಂಡರುಗಳು ಗೆದ್ದ ಬಳಿಕ ಇತ್ತ ತಲೆ ಹಾಕೋದಿಲ್ಲ ಎಂಬ ಆರೋಪವೂ ಇಲ್ಲಿನ ಜನರದು.

 ಸಂಬಂಧಪಟ್ಟ ಶಾಸಕರು, ಜನಪ್ರತಿನಿಧಿಗಳು ಅನಾಹುತಗಳು ಸಂಭವಿಸುವ ಮುನ್ನವೇ ಎಚ್ಚೆತ್ತು ಈ ಭಾಗಕ್ಕೊಂದು ಸುಸಜ್ಜಿತ ಕಿರುಸೇತುವೆ ನಿರ್ಮಿಸಿಕೊಡಬೇಕು ಎನ್ನೋದು ಜನರ ಆಶಯ.