ಕುಂದಾಪುರ: ಸೋಮವಾರ ಕೆರಾಡಿ ಆರೋಗ್ಯ ಉಪಕೇಂದ್ರದ ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲಾ ಅವರ ಮುಂದೆಯೇ ಬೈಂದೂರು ಶಾಸಕ ಬಿಎಮ್ ಸುಕುಮಾರ ಶೆಟ್ಟಿ ದೋಸ್ತಿ ಸರ್ಕಾರವನ್ನು ಅಣಕಿಸಿದ್ದಾರೆ.
ಉದ್ಘಾಟನಾ ಸಮಾರಂಭದಲ್ಲಿ ಶಾಸಕರು ಮಾತನಾಡುತ್ತಾ, ಕೆರಾಡಿ ಆರೋಗ್ಯ ಉಪಕೇಂದ್ರದಲ್ಲಿ ಸಿಬ್ಬಂದಿಗಳ ಕೊರತೆ ಇದೆ. ವಂಡ್ಸೆ ಆರೋಗ್ಯ ಕೇಂದ್ರಕ್ಕೆ ಇನ್ನೊಬ್ಬ ವೈದ್ಯರನ್ನು ನೇಮಿಸಲು ಪ್ರಯತ್ನ ನಡೆಸುತ್ತೇನೆ. ಎಲ್ಲವೂ ದೇವರ ಇಚ್ಚೇ. ಮನಸ್ಸು ಮಾಡಿದರೆ ನಾಳೆ ದೇವರು ಏನೂ ಮಾಡಬಹುದು. ಇನ್ನು ಎರಡು ಮೂರು ದಿವಸದಲ್ಲಿ ಏನಾಗುತ್ತೆ ಎಂದು ಹೇಳಲಿಕ್ಕೂ ಸಾಧ್ಯವಿಲ್ಲ ಎಂದು ಸಚಿವೆ ಜಯಮಾಲಾ ಕಡೆ ತಿರುಗಿ ದೋಸ್ತಿ ಸರ್ಕಾರವನ್ನು ಅಣಕಿಸಿದರು. ಶಾಸಕರ ಮಾತಿಗೆ ಸಿಟ್ಟಾದ ಸಚಿವೆ ಏನು ಎಂದು ಏರು ಧ್ವನಿಯಲ್ಲಿ ಪ್ರಶ್ನಿಸಿದಾಗ ಶಾಸಕ ಸುಕುಮಾರ ಶೆಟ್ಟಿ ಸಚಿವೆ ಜಯಮಾಲಾರನ್ನು ಹಾಸ್ಯಾಸ್ಪದ ರೀತಿಯಲ್ಲೇ ಗುಲಾಬಿ ಹಿಡಿದ ಕೈಯ್ಯಲ್ಲಿ ನಮಸ್ಕರಿಸಿ ಸಮಧಾನಪಡಿಸಲು ಮುಂದಾದರು.
ಸಮಾರಂಭದ ಬಳಿಕ ಸುಕುಮಾರ ಶೆಟ್ಟರ ಹೇಳಿಕೆಗೆ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಸಚಿವೆ ಜಯಮಾಲಾ, ಬೈಂದೂರು ಶಾಸಕರು ಪಾಪ. ಅವರಿಗೆ ತುಂಬಾ ಕನಸಿದೆ. ಅವರು ಯಾವಾಗಲೂ ಕನಸು ಕಾಣುತ್ತಲೇ ಇರುತ್ತಾರೆ. ಆ ಕನಸು ನನಸಾಗಬೇಕಲ್ವ. ಖಂಡಿತ ಆ ಕನಸು ನನಸಾಗಲ್ಲ ಎಂದು ಲೇವಡಿ ಮಾಡಿದರು. ನಮಗೇನು ಚಿಂತೆ ಇಲ್ಲ. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಮೈತ್ರಿ ಸರ್ಕಾರ ಸುಭದ್ರವಾಗಿದೆ. ಮೈತ್ರಿ ಸರ್ಕಾರ ಐದು ವರ್ಷ ಸಂಪೂರ್ಣ ಆಡಳಿತ ನಡೆಸುತ್ತದೆ. ನಮ್ಮೆಲ್ಲಾ ಶಾಸಕರು ಜೊತೆಗಿದ್ದಾರೆ. ೮ನೇ ತಾರೀಕಿಗೆ ಬಜೆಟ್ ಮಂಡನೆ ಮಾಡುತ್ತೇವೆ. ಇದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಸಚಿವೆ ಜಯಮಾಲಾ ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.