ಬೈಂದೂರು: ಅಪ್ರಾಪ್ತ ನಾದಿನಿಯ ಅತ್ಯಾಚಾರಗೈದ‌ ಅಪರಾಧಿಗೆ 10 ವರ್ಷ ಶಿಕ್ಷೆ, 20 ಸಾವಿರ ದಂಡ

ಕುಂದಾಪುರ: ಹೆಂಡತಿಯ ತಂಗಿಯ(ನಾದಿನಿ) ಮೇಲೆ ಅತ್ಯಾಚಾರಗೈದ ಪ್ರಕರಣದಲ್ಲಿ ಆರೋಪಿಯಾಗಿದ್ದ ವ್ಯಕ್ತಿ ಮೇಲಿನ ಆಪಾದನೆಗಳು ರುಜುವಾತಾಗಿದ್ದು ಆತ ಅಪರಾಧಿ ಎಂದು ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದಲ್ಲಿನ ಪೋಕ್ಸೋ ತ್ವರಿತ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಎರ್ಮಾಳ್ ಕಲ್ಪನಾ ಅವರು ಡಿ.9ರಂದು ತೀರ್ಪು ಪ್ರಕಟಿಸಿದ್ದಾರೆ.

ಬೈಂದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2018ರಲ್ಲಿ ಈ ಘಟನೆ ನಡೆದಿತ್ತು. ಸುರೇಶ್ ಮರಾಠಿ (29) ಎಂಬಾತನೇ ಅಪರಾಧಿಯಾಗಿದ್ದು ಈತ ತನ್ನ ಹೆಂಡತಿ ತಂಗಿಯನ್ನು ಕಾಡಿಗೆ ಕರೆದೊಯ್ದು ಅಲ್ಲಿನ ಮರವೊಂದರ ಮೇಲೆ ಗುಡಿಸಲು ಸಿದ್ದಪಡಿಸಿ ನಿರಂತರವಾಗಿ ಮೂರು‌ ದಿನಗಳ ಕಾಲ ಆಕೆ ಮೇಲೆ ಅತ್ಯಾಚಾರ ನಡೆಸಿದ್ದ. 17 ವರ್ಷ ಪ್ರಾಯದ ಸಂತ್ರಸ್ತ ಯುವತಿ ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು ಪೋಕ್ಸೋ ಕಾಯ್ದೆಯಡಿ ಆರೋಪಿಯನ್ನು ಬಂಧಿಸಲಾಗಿತ್ತು. ಅಪರಾಧಿಗೆ 10 ವರ್ಷ ಸಜೆ, 20 ಸಾವಿರ ದಂಡ ವಿಧಿಸಿದ್ದು ದಂಡ ತೆರಲು ತಪ್ಪಿದಲ್ಲಿ 1 ವರ್ಷ ಸಾದಾ ಸಜೆ‌ ವಿಧಿಸಿ ಆದೇಶಿಸಲಾಗಿದೆ.

ಪೊಲೀಸರಿಂದ ತಪ್ಪಿಸಿಕೊಂಡಿದ್ದ ಖತರ್ನಾಕ್:
ಆರೋಪಿ ಸುರೇಶ್ ಮರಾಠಿಯನ್ನು ಬಂಧಿಸಿದ ಬಳಿಕ ವಿಚಾರಣೆಗಾಗಿ‌ 2018ನೇ ಇಸವಿಯ ಅಕ್ಟೋಬರ್ ತಿಂಗಳಿನಲ್ಲಿ ಉಡುಪಿ ಫೋಕ್ಸೋ ನ್ಯಾಯಾಲಯಕ್ಕೆ ಕರೆತಂದು ರೈಲಿನಲ್ಲಿ ಮರಳಿ ಕಾರಾವರ ಜೈಲಿಗೆ ಕರೆದೊಯ್ಯುತ್ತಿರುವಾಗ ಬೈಂದೂರು ರೈಲು ನಿಲ್ದಾಣದ ಬಳಿ ಆರೋಪಿ ತನಗೆ ವಾಂತಿ ಬರುತ್ತಿದೆಯೆಂಬ ನಾಟಕವಾಡಿ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿ ಕರ್ತವ್ಯಲೋಪದಡಿಯಲ್ಲಿ ಇಬ್ಬರು ಪೊಲೀಸರನ್ನು ಅಂದಿನ ಉಡುಪಿ ಎಸ್ಪಿ ಲಕ್ಷ್ಮಣ ನಿಂಬರ್ಗಿ ಅಮಾನತುಗೊಳಿಸಿದ್ದರು. ಅಂದಾಜು ಎರಡು ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ ಆತ ಕಳೆದ ಆರೇಳು ತಿಂಗಳ ಹಿಂದೆ ನ್ಯಾಯಾಲಯಕ್ಕೆ ಶರಣಾಗತನಾಗಿದ್ದ.

ಅಭಿಯೋಜನೆ ವಿರುದ್ಧವಿತ್ತು ಪ್ರಮುಖ ಸಾಕ್ಷಿಗಳು..
ಪ್ರಕರಣಕ್ಕೆ ಸಂಬಂಧಿಸಿದಂತೆ ಬೈಂದೂರಿನ ಅಂದಿನ ಸಿಪಿಐ ಪರಮೇಶ್ವರ ಗುನಗ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಒಟ್ಟು 25 ಸಾಕ್ಷಿಗಳ ಪೈಕಿ ನ್ಯಾಯಾಲಯದಲ್ಲಿ 15 ಮಂದಿ ವಿಚಾರಣೆ ನಡೆದಿತ್ತು. ಸಂತ್ರಸ್ತ ಯುವತಿ ಸಹಿತ ಪ್ರಮುಖ ಸಾಕ್ಷಿಗಳು‌ ಅಭಿಯೋಜನೆಗೆ ವಿರುದ್ಧವಾಗಿತ್ತು. ಆದರೆ‌ ವೈದ್ಯಕೀಯ ಸಾಕ್ಷಿ, ತನಿಖಾಧಿಕಾರಿ‌ ನ್ಯಾಯಾಲಯದಲ್ಲಿ ನುಡಿದ ಸಾಕ್ಷಿ ಹಾಗೂ ಸಾಂದರ್ಭಿಕ ಸಾಕ್ಷಿ ಆಧಾರದಲ್ಲಿ ಸುರೇಶ್ ಮರಾಠಿ ಅಪರಾಧಿ ಎಂದು ನ್ಯಾಯಾಧೀಶರು ತೀರ್ಪು‌ ಪ್ರಕಟಿಸಿದ್ದು ವಿಚಾರಣಾಧೀನ ಕೈದಿಯಾಗಿದ್ದಾಗ ಆರೋಪಿ ಪರಾರಿಯಾಗಿದ್ದು ಪ್ರಮುಖ ಸಾಕ್ಷಿಗಳ ಮೇಲೆ ಪ್ರಭಾವ ಬೀರಿರುವ ಸಾಧ್ಯತೆಯಿದ್ದು ಅದರಿಂದಲೇ‌ ಪ್ರಮುಖ ಸಾಕ್ಷಿದಾರರು‌ ಪ್ರಾಸಿಕ್ಯೂಶನ್ ವಿರುದ್ಧ ಸಾಕ್ಷಿ ನುಡಿದಿರಬಹುದೆಂದು ಕೂಡ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಉಡುಪಿಯ ಪೋಕ್ಸೋ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ ರಾಘವೇಂದ್ರ ಅವರು ಪ್ರಾಸಿಕ್ಯೂಶನ್ ಪರ ವಾದ ಮಂಡಿಸಿದ್ದರು.